‘ಜಮೀನು ಬೇಡ ಅಂದರೆ ಓವೈಸಿ ಪಾಕ್‌ಗೆ ಹೋಗಿ ಸಾಯಲಿ’

By Web DeskFirst Published Nov 25, 2019, 7:08 AM IST
Highlights

ರಾಷ್ಟ್ರೀಯ ಹಿಂದೂ ಪರಿಷತ್‌ನ ಲಾಂಛನ ಬಿಡುಗಡೆ ಕಾರ್ಯಕ್ರಮಲ್ಲಿ ಪ್ರಮೋದ್‌ ಮುತಾಲಿಕ್‌| ಶ್ರೀರಾಮ ಕೇವಲ ಕಲ್ಲಿನ ಮೂರ್ತಿ ಅಲ್ಲ| ಅದು ಸತ್ಯ ಮತ್ತು ತತ್ವ ಇದ್ದಂತೆ| ಭಾರತದಲ್ಲಿ ಬಾಬರ ಅನುಯಾಯಿಗಳು ಎಂದು ಹೇಳಿಕೊಂಡು ತಿರುಗುತ್ತಿರುವ ಮತಾಂಧರಿಗೆ ಮತ್ತು ಬಾಬರ್‌ಗೆ ಯಾವುದೇ ಸಂಬಂಧವೇ ಇಲ್ಲ|
 

ಧಾರವಾಡ[ನ.25]: ಅಯೋಧ್ಯೆ ಶ್ರೀರಾಮನ ಜನ್ಮ ಭೂಮಿ, ಈ ಕುರಿತು ನ್ಯಾಯಾಲಯವೇ ತೀರ್ಪು ನೀಡಿದೆ. ಆದರೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಿರುವ ಭಿಕ್ಷೆ ನಮಗೆ ಬೇಡ ಎಂದು ಹೇಳಿಕೊಂಡು ತಿರುಗುತ್ತಿರುವ ಅಸಾದುದ್ದೀನ್‌ ಓವೈಸಿ ಪಾಕಿಸ್ತಾನಕ್ಕೆ ಹೋಗಿ ಸಾಯಲಿ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಕಲಾಭವನ ಮೈದಾನದಲ್ಲಿ ರಾಷ್ಟ್ರೀಯ ಹಿಂದೂ ಪರಿಷತ್‌ನ ಲಾಂಛನ ಬಿಡುಗಡೆ ಮತ್ತು ಭಗವದ್ಗೀತಾ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀರಾಮ ಕೇವಲ ಕಲ್ಲಿನ ಮೂರ್ತಿ ಅಲ್ಲ, ಅದು ಸತ್ಯ ಮತ್ತು ತತ್ವ ಇದ್ದಂತೆ. ಭಾರತದಲ್ಲಿ ಬಾಬರ ಅನುಯಾಯಿಗಳು ಎಂದು ಹೇಳಿಕೊಂಡು ತಿರುಗುತ್ತಿರುವ ಮತಾಂಧರಿಗೆ ಮತ್ತು ಬಾಬರ್‌ಗೆ ಯಾವುದೇ ಸಂಬಂಧವೇ ಇಲ್ಲ ಎಂದ ಅವರು, ಅಸಾದುದ್ದೀನ್‌ ಓವೈಸಿ ವಿರುದ್ಧ ಕಿಡಿ ಕಾರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೋಮನಾಥದಲ್ಲಿನ ದೇವಾಲಯದ ಮರು ನಿರ್ಮಾಣಕ್ಕೆ ಸಂಪುಟದಲ್ಲಿ ಒಮ್ಮತ ಪಡೆದು ದೇವಸ್ಥಾನ ನಿರ್ಮಿಸಿದಂತೆ ಮಥುರಾ ಮತ್ತು ಕಾಶಿಗಳಲ್ಲಿ ದೇವಸ್ಥಾನದ ನಿರ್ಮಾಣದ ಕಾರ್ಯ ಶೀಘ್ರವಾಗಿ ಮಾಡಬೇಕು. ಪ್ರಸ್ತುತ ರಾಜಕೀಯ ಪಕ್ಷಗಳು ಸಂಘಟನೆಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು ಯುವಕರು ಹೆಚ್ಚು ಸಂಘಟನೆಗಳನ್ನು
ಕಟ್ಟುವ ಮೂಲಕ ಧರ್ಮದ ಜಾಗೃತಿ ಮೂಡಿಸಬೇಕಿದೆ ಎಂದರು.

ಹಿಂದು ಹೋರಾಟಗಾರ್ತಿ ಚೈತ್ರಾ ಕುಂದಾಪುರ ಮಾತನಾಡಿ, ಇಂದು ಭಗವದ್ಗೀತೆ ಮೌಲ್ಯ ಅರ್ಥ ಮಾಡಿಸುವವರಿಗಿಂತ ತೆಗಳುವವರ ಸಂಖ್ಯೆಯೇ ಹೆಚ್ಚಾಗಿದೆ. ವಿರೋಧಿಗಳು ಗೀತೆಯನ್ನು ಸುಡುವ ಮಾತನಾಡಿದ್ದರಿಂದಲೇ ಯುವಕರು ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಓದಲು ಪ್ರಾರಂಭಿಸಿದ್ದಾರೆ. ವಿರೋಧಿಗಳಿಂದ ನಮಗೆ ಉಪಕಾರವೂ ಇದೆ. ಆದರೆ ಅದರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದರು.

ನೆದರಲ್ಯಾಂಡ್‌ನಂತಹ ದೇಶಗಳಲ್ಲಿ ಭಗವದ್ಗೀತೆ ಅಧ್ಯಯನ ಮಕ್ಕಳಿಗೆ ಕಡ್ಡಾಯ ಮಾಡಿದ್ದಾರೆ. ಆದರೆ ಅದನ್ನು ಭಾರತದಲ್ಲಿ ಪಠ್ಯವಾಗಿಸುವಂತೆ ಸೂಚಿಸಿದರೆ ಭಗವದ್ಗೀತೆ ಕೋಮುವಾದಿಗಳ ಪರವಾಗಿದೆ. ನಮ್ಮ ಮೇಲೆ ಭಗವದ್ಗೀತೆ ಹೇರಿಕೆ ಮಾಡುತ್ತಿದ್ದಾರೆ ಎಂದು ಜಾತ್ಯಾತೀತ ಹಿಂದುಗಳೇ ವಿರೋಧ ಮಾಡುತ್ತಿದ್ದಾರೆ. ಅವರಿಗೆ ಅದರಲ್ಲಿನ ಮೌಲ್ಯಗಳನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು.

ಜಗತ್ತಿನಲ್ಲಿರುವ ಎಲ್ಲ ಸಮಸ್ಯೆಗಳಿಗೆ ಭಗವದ್ಗಿತೆಯಲ್ಲಿ ಪರಿಹಾರವಿದ್ದು, ಮಕ್ಕಳಿಗೆ ಗೀತೆಯ ಮೌಲ್ಯಗಳನ್ನು ತಿಳಿಸುವ ಜತೆಗೆ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಬೇಕಿದೆ. ಹಿಂದು ಧರ್ಮದ ಮೌಲ್ಯವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಪ್ರಸ್ತುತ ಹಿಂದು ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಸನಾತನ ಹಿಂದು ಧರ್ಮ ಎನ್ನುವುದು ಆಲದ ಮರವಿದ್ದಂತೆ ಹಿಂದು ಸಂಘಟನೆಗಳು ಅದರ ಬೇರುಗಳಿದ್ದಂತೆ ಎಂದ ಅವರು ಭಗವದ್ಗೀತೆ ಮನೆಗಳಿಗೆ ಹಂಚುವುದಕ್ಕಿಂತ ಮನಸ್ಸುಗಳಿಗೆ ಹಂಚುವ ಕಾರ್ಯದಲ್ಲಿ ಭಾಗಿಯಾಗೋಣ ಎಂದರು.

ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಅಮೃತೇಶ ಮಾತನಾಡಿ, ಎಸ್‌ಐಟಿ ಆಧಿಕಾರಿಗಳು ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಸಣ್ಣ ಪುಟ್ಟಪ್ರಕರಣಗಳಲ್ಲಿ ಬಂಧಿಯಾಗಿರುವ ಅಮಾಯಕರ ಮೇಲೆ ಕಾಗಕ್ಕಾ, ಗುಬ್ಬಕ್ಕನ ಕಥೆ ಹೇಳಿ ಗೌರಿ ಲಂಕೇಶ, ಕಲ್ರ್ಬುಗಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದರು.

ಆಂಧ್ರಪ್ರದೇಶ ಕಾಕಿನಾಡದ ಮಾರುತಿ ಮಹಾ ಬ್ರಹ್ಮಚಾರಿ ಸ್ವಾಮೀಜಿ ಮಾತನಾಡಿ, ನಾವು ಧರ್ಮಕ್ಕಾಗಿ ಬದುಕಬೇಕು. ಧರ್ಮಕ್ಕಾಗಿ ಜೀವಿಸಬೇಕು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ನಮ್ಮನ್ನು ಬಿಟ್ಟು ಹೋಗಿಲ್ಲ. ಮರಳಿ ದೇಶ ಉಳಿಸಲು ಹುಟ್ಟಿಬಂದಿದ್ದಾರೆ. ದೇಶಕ್ಕಾಗಿ ಆರ್‌ಎಸ್‌ಎಸ್‌, ವಿಶ್ವ ಹಿಂದು ಪರಿಷತ್‌ ಹೀಗೆ ಅನೇಕ ಹಿಂದುಪರ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಹಿಂದೂ ಯಾವಾಗಲೂ ಒಂದು ಎಂಬುದನ್ನು ತೋರಿಸಬೇಕು ಎಂದರು.

ಯಾದವಾನಂದ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿರುವುದು ನೋವಿನ ಸಂಗತಿ. ಹೀಗಾಗಿ ನಾವೆಲ್ಲ ಎಚ್ಚೆತ್ತುಕೊಂಡು ಧರ್ಮ, ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಜಾತಿ ರಾಜಕಾರಣ ಬಿಟ್ಟು ಏನೂ ನಡೆಯುತ್ತಿಲ್ಲ. ಹೀಗಾಗಿ ಜಾತಿಗಳನ್ನು ಬದಿಗಿಟ್ಟು ದೇಶಕ್ಕಾಗಿ ದುಡಿಯುವ ಕೆಲಸ ಮಾಡಬೇಕು ಎಂದರು. ಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.

ಈ ಸಂದರ್ಭದಲ್ಲಿ ಲೋಗೋ ಉದ್ಘಾಟಿಸಿ, ಭಗವದ್ಗೀತಾ ವಿತರಿಸಲಾಯಿತು. ಆರ್‌ಎಚ್‌ಪಿ, ವಿವಿಧ ಹಿಂದು ಪರ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

click me!