ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೇರಿ ಸೇರಿದಂತೆ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಾರಾಟ, ಪಕ್ಕದ ರಾಜ್ಯದಿಂದ ಪಾಲಿಸ್ಟರ್ ತ್ರಿವರ್ಣ ಧ್ವಜ ಮಾರಾಟಕ್ಕಾಗಿ ಕರ್ನಾಟಕಕ್ಕೆ ಬಂದ ನಿವಾಸಿಗಳು, ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ಬಂದ ಧ್ವಜ ಮಾರಾಟಗಾರರು.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ(ಆ.14): ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಕರ್ನಾಟಕದಲ್ಲಿ ಈಗ ಪಾಲಿಸ್ಟರ್‌ನಿಂದ ತಯಾರಿಸಿದ ತ್ರಿವರ್ಣ ಧ್ವಜದ ಹಾವಳಿ ಹೆಚ್ಚಾಗಿದೆ. ಕಳೆದ 2-3 ದಿನಗಳಿಂದ ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಿಗೆ ಪಾಲಿಸ್ಟರ್ ಧ್ವಜ ಮಾರಾಟ ಮಾಡಲು ಬಂದಿಳಿದಿದ್ದಾರೆ.
ದೇಶದ ಪ್ರತಿ ರಾಜ್ಯಗಳಿಗೂ ಕರ್ನಾಟಕದಿಂದ ಅದರಲ್ಲೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಲಾದ ತ್ರಿವರ್ಣ ಧ್ವಜ ಸರಬರಾಜು ಆಗುತ್ತದೆ. ಗ್ರಾಮದಿಂದ ಹಿಡಿದು ದೆಹಲಿಯ ಕೆಂಪುಕೋಟೆ ವರೆಗೆ ಈ ಧ್ವಜ ಹಾರಾಡುತ್ತಿರುವುದು ರಾಜ್ಯದ ಮೆರಗು ಹೆಚ್ಚಿಸಿದೆ. ಆದರೆ, ಕಳೆದ 2-3 ವರ್ಷಗಳಿಂದ ರಾಜ್ಯಾದ್ಯಂತ ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಖಾದಿ ಗ್ರಾಮೋದ್ಯೋಗದ ಮೇಲೆ ಇದು ದುಷ್ಪರಿಣಾಮ ಬೀರಿದೆ.
ರಾಷ್ಟ್ರಧ್ವಜ ನೇಯ್ಗೆ: ಧಾರವಾಡದ ಗರಗ ಖಾದಿ ಕೇಂದ್ರಕ್ಕೆ ಬಿಐಎಸ್ ಪರವಾನಗಿ
ಪಾಲಿಸ್ಟರ್ ಧ್ವಜ ಮಾರಾಟಕ್ಕಾಗಿಯೇ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಬಿಹಾರದಿಂದ ಸಾವಿರಾರು ಜನರು ರಾಜ್ಯದ ವಿವಿಧ ನಗರ ಪ್ರದೇಶಗಳಿಗೆ ಮಾರಾಟಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಅನ್ಯರಾಜ್ಯಗಳಿಂದ ಕಳೆದ 2 ದಿನಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ 300ಕ್ಕೂ ಅಧಿಕ ಮಾರಾಟಗಾರರು ಬಂದಿಳಿದ್ದಾರೆ. ಆಗಸ್ಟ್ 15ರ ಒಂದು ವಾರದ ಪೂರ್ವದಲ್ಲಿ ರಾಜ್ಯಕ್ಕೆ ಆಗಮಿಸುವ ಇವರು ಪ್ರಮುಖ ನಗರಗಳಲ್ಲಿ ಪುಟ್‌ಪಾತ್ ಮೇಲೆ, ಇನ್ನು ಕೆಲವರು ಬೀದಿ ಬೀದಿ ಸಂಚರಿಸಿ ಪಾಲಿಸ್ಟರ್ ಧ್ವಜ ಮಾರಾಟ ಮಾಡುತ್ತಾರೆ.
ಎಲ್ಲೆಲ್ಲಿ ಮಾರಾಟ?:
ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ಅವರು ಕರ್ನಾಟಕದ ರಾಜಧಾನಿ ಬೆಂಗಳೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ವಿಜಯಪುರ, ಗದಗ, ಹಾವೇರಿ, ವಿಜಯನಗರ, ಬೀದರ ಸೇರಿದಂತೆ 20ಕ್ಕೂ ಅಧಿಕ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಪಾಲಿಸ್ಟರ್ ಧ್ವಜ ಮಾರಾಟ ಮಾಡಲು ಆಗಮಿಸಿದ್ದಾರೆ.
2 ಲಕ್ಷಕ್ಕೂ ಅಧಿಕ ಧ್ವಜ:
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಾರಾಟಕ್ಕಾಗಿ 2 ಲಕ್ಷಕ್ಕೂ ಅಧಿಕ ಧ್ವಜಗಳನ್ನು ತರಲಾಗಿದೆ. ಬೆಂಗಳೂರಿನಿಂದ ಶುಕ್ರವಾರ ಮತ್ತು ಶನಿವಾರ 2 ಲಕ್ಷಕ್ಕೂ ಅಧಿಕ ಧ್ವಜಗಳು ರೈಲಿನ ಮೂಲಕ ಬಂದಿವೆ. ನಗರದಲ್ಲಿ ಪ್ರಮುಖ ರಸ್ತೆಗಳ ಪುಟ್‌ಪಾತ್ ಮೇಲೆ, ರಸ್ತೆಗಳಲ್ಲಿ ಸಂಚರಿಸಿ ಮಾರಾಟ ಮಾಡುತ್ತಿರುವ ದೃಶ್ಯ ಅವಳಿ ನಗರದಲ್ಲಿ ಕಳೆದ 2-3 ದಿನಗಳಿಂದ ಕಂಡುಬರುತ್ತಿದೆ. ಇನ್ನು ಭಾನುವಾರ ಮತ್ತು ಸೋಮವಾರ ಬೇರೆ ಬೇರೆ ರಾಜ್ಯಗಳಿಂದ 500ಕ್ಕೂ ಅಧಿಕ ಪಾಲಿಸ್ಟರ್ ಧ್ವಜ ಮಾರಾಟಗಾರರು ಬರುತ್ತಿದ್ದಾರೆ. ಸುಮಾರು .50 ರಿಂದ .500ರ ವರೆಗೆ ವಿವಿಧ ಬಗೆಯ ಅಳತೆಯ ಪಾಲಿಸ್ಟರ್‌ನಿಂದ ತಯಾರಿಸಿದ ತ್ರಿವರ್ಣ ಧ್ವಜ ಮಾರಾಟ ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ದೇಶಕ್ಕೆ ಖಾದಿಯಿಂದಲೇ ರಾಷ್ಟ್ರಧ್ವಜ ತಯಾರಿಸಿ ಪೂರೈಕೆ ಮಾಡುವ ಕರ್ನಾಟಕ ರಾಜ್ಯ ಅದರಲ್ಲೂ ಧಾರವಾಡ ಜಿಲ್ಲೆಯಲ್ಲೂ ಈಗ ಪಾಲಿಸ್ಟರ್ ತ್ರಿವರ್ಣ ಧ್ವಜದ ಹಾವಳಿ ಹೆಚ್ಚಿರುವುದು ದೇಶಪ್ರೇಮಿಗಳಲ್ಲಿ ನೋವುಂಟು ಮಾಡಿದೆ. ಇದೇ ರೀತಿ ಮುಂದುವರಿದಲ್ಲಿ ಖಾದಿ ಗ್ರಾಮೋದ್ಯೋಗಕ್ಕೂ ಹಾಗೂ ತ್ರಿವರ್ಣ ಧ್ವಜಕ್ಕಿರುವ ಗೌರವ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.
ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿ, ಶೂನಿಂದ ಹೊಡೆದು ಖಲಿಸ್ತಾನಿ ಬೆಂಬಲಿಗರ ವಿಕೃತಿ: ವಿರೋಧಿಸಿದ ಭಾರತೀಯನಿಗೂ ಥಳಿತ
ಕಳೆದ 2-3 ವರ್ಷಗಳಿಂದ ರಾಜ್ಯಾದ್ಯಂತ ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಹಾವಳಿ ಹೆಚ್ಚಾಗಿರುವುದು ನೋವುಂಟು ಮಾಡಿದೆ. ಇದರ ನಿಯಂತ್ರಣಕ್ಕಾಗಿ ಕಳೆದ ಬಾರಿಯೇ ಧರಣಿ ಸತ್ಯಾಗ್ರಹ ಕೈಗೊಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ವರ್ಷವೂ ಜಿಲ್ಲೆಯಲ್ಲಿ ಪಾಲಿಸ್ಟರ್ ಧ್ವಜಗಳು ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದ್ದಾರೆ.
ಕಡಿಮೆ ಬೆಲೆಯಲ್ಲಿ ಪಾಲಿಸ್ಟರ್ ಧ್ವಜ ಸಿಗುತ್ತದೆ ಎಂದು ಖರೀದಿಸುವುದು ತಪ್ಪು. ರಾಷ್ಟ್ರಧ್ವಜ ಈ ದೇಶದ ಗೌರವ, ಅಭಿಮಾನದ ಸಂಕೇತ. ಅದಕ್ಕೆ ಅವಮಾನ ಮಾಡಿದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಾಣಾರ್ಪಣೆ ಮಾಡಿದ ಲಕ್ಷಾಂತರ ಹೋರಾಟಗಾರರಿಗೆ ಅವಮಾನ ಮಾಡಿದಂತೆ. ಪ್ರಜ್ಞಾವಂತ ಪ್ರಜೆಗಳು ಕಡ್ಡಾಯವಾಗಿ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ ಖರೀದಿಸಿ ಗೌರವ ತನ್ನಿ ಎಂದು ಎಬಿವಿಪಿ ರಾಜ್ಯಾಧ್ಯಕ್ಷ ಡಾ. ರೋಹಿಣಾಕ್ಷ ಶಿರ್ಲಾಲು ತಿಳಿಸಿದ್ದಾರೆ.