ದಾವಣಗೆರೆಯಲ್ಲಿ ಚುನಾವಣೆ : ಪಕ್ಷಗಳ ಭರ್ಜರಿ ತಯಾರಿ

By Kannadaprabha News  |  First Published Sep 16, 2019, 10:10 AM IST

ದಾವಣಗೆರೆಯಲ್ಲಿ ಮತ್ತೊಂದು ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. 


ದಾವಣಗೆರೆ [ಸೆ.16]:  ದಾವಣಗೆರೆ ಪಾಲಿಕೆ ಸೇರಿ ರಾಜ್ಯದ 43 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ರಾಜಕೀಯ ಪಕ್ಷಗಳು, ಟಿಕೆಟ್‌ ಆಕಾಂಕ್ಷಿಗಳು, ಸ್ಪರ್ಧಾಕಾಂಕ್ಷಿಗಳ ಚಟುವಟಿಕೆಗಳೂ ಗರಿಗೆದರಿವೆ.

ರಾಜ್ಯ ಚುನಾವಣಾ ಆಯೋಗ ಪಾಲಿಕೆ ಚುನಾವಣೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಶುಕ್ರವಾರ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸುತ್ತಿದ್ದಂತೆಯೇ ಈ ಕ್ಷಣಕ್ಕಾಗಿಯೇ ಕಾದು ಕುಳಿತಂತಿದ್ದ ಪಕ್ಷಗಳು ಚುನಾವಣೆಗೆ ಇದಿರು ನೋಡುತ್ತಿವೆ. ಆಕಾಂಕ್ಷಿಗಳೂ ಟಿಕೆಟ್‌ಗಾಗಿ ತೀವ್ರ ಪ್ರಯತ್ನಕ್ಕೆ ಈಗಿನಿಂದಲೇ ಮುನ್ನುಡಿಯನ್ನೂ ಬರೆದಿದ್ದಾರೆ.

Latest Videos

undefined

ಕಳೆದ ಏ.13ಕ್ಕೆ ದಾವಣಗೆರೆ ಪಾಲಿಕೆ ಅವಧಿ ಮುಗಿದಿದ್ದು, ಇದೀಗ ಚುನಾವಣೆ ನಡೆಯಬೇಕಷ್ಟೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಸಭೆಯಿಂದ ಮಹಾ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದ ದಾವಣಗೆರೆ ಪಾಲಿಕೆಯ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿತ್ತು. 2ನೇ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಸ್ವಾಮ್ಯ ಮೆರೆದರೆ ಬಿಜೆಪಿ ಕೇವಲ ಒಂದೇ ಒಂದು ಸ್ಥಾನ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ 3ನೇ ಅವಧಿಯ ಚುನಾವಣೆ ರಂಗೇರುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

ವಾರ್ಡ್‌ಗಳ ಪುನರ್ವಿಂಗಡಣೆ ನಂತರ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ 12ನೇ ವಾರ್ಡ್‌ನ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ದಾವಣಗೆರೆ ಪಾಲಿಕೆಗೆ ಕಳೆದ ಬಾರಿ 41 ವಾರ್ಡ್‌ಗಳು ಇದ್ದವು. ವಾರ್ಡ್‌ಗಳ ಪುನರ್ವಿಂಗಡಣೆ ನಂತರ 45 ವಾರ್ಡ್‌ಗಳಾಗಿವೆ. ಈ ಪೈಕಿ 12ನೇ ವಾರ್ಡ್‌ ಮೀಸಲಾತಿಯು ರೊಟೇಷನ್‌ ಪ್ರಕಾರ ಈ ಬಾರಿಗೆ ಪರಿಶಿಷ್ಟಜಾತಿಗೆ ಸಿಗಬೇಕು. ಆದರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದನ್ನು ಪ್ರಶ್ನಿಸಿ ಜಯಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೇ ಅರ್ಜಿ ಕುರಿತಂತೆ ನ್ಯಾಯಾಲಯದ ತೀರ್ಪಿಗಾಗಿ ಜನ ಕಾಯುತ್ತಿದ್ದಾರೆ.

ಮುಸ್ಲಿಂ, ಪರಿಶಿಷ್ಟಜಾತಿ ಸಮುದಾಯವೇ ಹೆಚ್ಚಾಗಿರುವ 12ನೇ ವಾರ್ಡ್‌ ಅಹಮ್ಮದ್‌ ನಗರ ಪ್ರದೇಶವಾಗಿದೆ. ಈ ವಾರ್ಡ್‌ ಮೀಸಲಾತಿಗೆ ಎಸ್ಸಿಗೆ ಬಾರದೇ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದನ್ನು ಹೈಕೋರ್ಟ್‌ನಲ್ಲಿ ಅರ್ಜಿದಾರ ಜಯಣ್ಣ ಪ್ರಶ್ನಿಸಿದ್ದಾರೆ. ಅರ್ಜಿ ಕುರಿತಂತೆ ನ್ಯಾಯಾಲಯದಿಂದ ಯಾವುದೇ ತೀರ್ಪು ಹೊರ ಬಿದ್ದಿಲ್ಲ. ಅರ್ಜಿದಾರರ ವಕೀಲರು 15 ದಿನಗಳ ಕಾಲಾವಕಾಶ ಸಹ ಕೋರಿದ್ದರು. ಈ ಮಧ್ಯೆ ರಾಜ್ಯ ಚುನಾವಣಾ ಆಯೋಗವು ಪಾಲಿಕೆ ಚುನಾವಣೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರಿಂದ ತಮ್ಮ ವಕೀಲರು ಮತ್ತೆ ಸೆ.16ರಂದು ಮತ್ತೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಜಯಣ್ಣ ಹೇಳಿದ್ದಾರೆ.

ಪಾಲಿಕೆಯ 12ನೇ ವಾರ್ಡ್‌ ಮೀಸಲಾತಿ ಕುರಿತಂತೆ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಇದಿರು ನೋಡುವಂತಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ತಾವು ಸಿದ್ಧರಿರುವುದಾಗಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಾರಿ ಹೇಳುತ್ತಿವೆ. ಅಲ್ಲದೇ, ತಮ್ಮ ಪಕ್ಷಗಳ ಆಕಾಂಕ್ಷಿಗಳು, ಅರ್ಹ ಅಭ್ಯರ್ಥಿಗಳಿಗೆ ವಾರ್ಡ್‌ ಜನರೊಂದಿಗೆ ಒಡನಾಟದಲ್ಲಿರುವಂತೆ ಮೌಖಿಕ ಸೂಚನೆಗಳನ್ನೂ ನೀಡುವ ಮೂಲಕ ತೆರೆ ಮರೆಯಲ್ಲೇ ಚುನಾವಣೆಗೂ ಸನ್ನದ್ಧವಾಗಿವೆ. ಸದ್ಯಕ್ಕೆ 12ನೇ ವಾರ್ಡ್‌ ಮೀಸಲಾತಿ ವಿಚಾರದ ನ್ಯಾಯಾಲಯದ ತೀರ್ಪು ಏನಾಗುತ್ತದೆಂದು ಎಲ್ಲರೂ ಕುತೂಹಲದಿಂದ ನೋಡುವಂತೆ ಮಾಡಿದೆ.

ಕಾಂಗ್ರೆಸ್‌ ಹಳೆಯ ಮೀಸಲಾತಿ ಪಟ್ಟಿಯನ್ನೇ ಆಧರಿಸಿ ಚುನಾವಣೆಗೆ ಸನ್ನದ್ಧವಾಗುತ್ತಿದೆ. ಸೆ.16ರ ಸಂಜೆ 4.30ಕ್ಕೆ ಎಸ್‌.ನಿಜಲಿಂಗಪ್ಪ ಬಡಾವಣೆಯ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ವಾರ್ಡ್‌ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರ ಸಭೆ ಕರೆದಿದ್ದು, ಇದಕ್ಕಾಗಿ ಜಿಲ್ಲಾಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿಸಭೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕಳೆದ ಪಾಲಿಕೆ ಚುನಾವಣೆ ಸೋಲಿನ ಕಹಿ ಅನುಭವ ಮರೆಯದ ಬಿಜೆಪಿ ಸಹ ಸುಮ್ಮನೇ ಕುಳಿತಿಲ್ಲ. ಹಿರಿಯರ ಜೊತೆಗೆ ಕಿರಿಯರ ದಂಡನ್ನೂ ಇಡೀ 45 ವಾರ್ಡ್‌ವ್ಯಾಪ್ತಿಯಲ್ಲೂ ಸಕ್ರಿಯವಾಗಿಟ್ಟಿದೆ. ಕೇಸರಿ ಪಡೆಯಲ್ಲೂ ಈಗಾಗಲೇ ಚುನಾವಣೆಗೆ ಒಳಗೊಳಗೆ ಸಿದ್ಧತೆಗಳೂ ನಡೆದಿವೆ. ಯಾವ ವಾರ್ಡ್‌ಗೆ ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆಂಬ, ಯಾರಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಲಾಭವೆಂಬ ಮಾಹಿತಿ ಪಕ್ಷ ಸಂಗ್ರಹಿಸುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಚುನಾವಣೆಗೆ ಸಜ್ಜಾಗುವಂತೆ ತಮ್ಮ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರಿಗೆ ಸೂಚನೆ ಸಹ ನೀಡಿದ್ದಾರೆ.

ಜೆಡಿಎಸ್‌, ಸಿಪಿಐ ಪಕ್ಷಗಳೂ ಪಾಲಿಕೆ ಚುನಾವಣೆಯಲ್ಲಿ ತೊಡೆ ತಟ್ಟುವುದು ನಿಶ್ಚಿತ. ಜೆಡಿಎಸ್‌ ಬಹುತೇಕ ವಾರ್ಡ್‌ಗೆ ಸ್ಪರ್ಧಿಸಿ, ಸಿಪಿಐ ಕೆಲ ನಿರ್ಧಿಷ್ಟವಾರ್ಡ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಲೋಕಸಭೆ, ವಿಧಾನಸಭೆಯಂತಹ ದೊಡ್ಡವರ ಚುನಾವಣೆಗಳನ್ನು ನಡೆಸಿದ್ದ ಕಾರ್ಯಕರ್ತರ ಚುನಾವಣೆಯೆಂದೇ ಕರೆಯಲ್ಪಡುವ ಪಾಲಿಕೆಗೆ ಈ ಬಾರಿ 3ನೇ ಚುನಾವಣೆ ನಡೆಯಲಿದೆ. ಈಗಿನ ರಾಜಕೀಯ ಬೆಳವಣಿಗೆ, ಆಗುಹೋಗುಗಳನ್ನು ಗಮನಿಸಿದರೆ ಪಾಲಿಕೆ ಚುನಾವಣೆ ಯಾವಾಗ ನಡೆದರೂ ರಂಗೇರುತ್ತದೆಂಬುದರಲ್ಲಿ ಅನುಮಾನವಿಲ್ಲ. 12ನೇ ವಾರ್ಡ್‌ ಮೀಸಲಾತಿ ವಿಚಾರಕ್ಕೆ ಹೈಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತವೂ ನೆಟ್ಟಿದೆ.

click me!