ವರದಿ : ಕುಪ್ಪೆ ಮಹದೇವಸ್ವಾಮಿ
ಕೆ.ಆರ್. ನಗರ (ಜು.03): ಜಿಪಂ ಮತ್ತು ತಾಪಂ ಸದಸ್ಯ ಸ್ಥಾನಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನಲ್ಲಿ ರಾಜಕೀಯದ ಚಟುವಟಿಕೆಯ ಕಾವು ಏರತೊಡಗಿದೆ.
ರಾಜ್ಯ ಚುನಾವಣಾ ಆಯೋಗ ಗುರುವಾರ ಮೀಸಲಾತಿ ಆದೇಶ ಹೊರಡಿಸಿರುವುದರಿಂದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ರಾಜಕೀಯಾಸ್ತಕರು ಚುನಾವಣಾ ಗುಂಗಿನಲ್ಲಿ ತೇಲುತ್ತಿದ್ದಾರೆ. ಈವರೆಗೆ ಕೆ.ಆರ್. ನಗರ ತಾಲೂಕಿನಲ್ಲಿ ಇದ್ದ ಹೊಸೂರು, ಹರದನಹಳ್ಳಿ, ಸಾಲಿಗ್ರಾಮ ಮತ್ತು ಭೇರ್ಯ ಕ್ಷೇತ್ರಗಳು ಸಾಲಿಗ್ರಾಮ ತಾಲೂಕಿಗೆ ಸೇರ್ಪಡೆಯಾಗಿದ್ದು, ಹಂಪಾಪುರ, ತಿಪ್ಪೂರು ಮತ್ತು ಹೆಬ್ಬಾಳು ಜಿಪಂ ಕ್ಷೇತ್ರಗಳು ಕೆ.ಆರ್. ನಗರ ತಾಲೂಕು ವ್ಯಾಪ್ತಿಗೆ ಒಳಪಟ್ಟಿದ್ದು, ಹಂಪಾಪುರ ಹೊಸ ಕ್ಷೇತ್ರವಾಗಿದೆ.
ಕಳೆದ ಚುನಾವಣೆಯಲ್ಲಿ ಆರು ಜಿಪಂ ಕ್ಷೇತ್ರಗಳ ಪೈಕಿ ಹೊಸೂರು, ಮಿರ್ಲೆ ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಿದ್ದರೆ ಹೆಬ್ಬಾಳು, ತಿಪ್ಪೂರು, ಭೇರ್ಯ ಮತ್ತು ಸಾಲಿಗ್ರಾಮ ಕ್ಷೇತ್ರಗಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದರು.
ಸಿದ್ದರಾಮಯ್ಯ ಯಾವುದೇ ಪಾಪ ಮಾಡಿಲ್ಲ: ಎಚ್‌ಡಿಕೆಗೆ ಯತೀಂದ್ರ ತಿರುಗೇಟು ..
ಉಳಿದಂತೆ ತಾಪಂ 22 ಸ್ಥಾನಗಳ ಪೈಕಿ 14ರಲ್ಲಿ ಕಾಂಗ್ರೆಸ್ ಪಾರಮ್ಯ ಸಾಧಿಸಿದ್ದರೆ, 8 ಕ್ಷೇತ್ರಗಳಲ್ಲಿ ಜೆಡಿಎಸ್ ಸದಸ್ಯರು ಗೆದ್ದಿದ್ದರಲ್ಲದೆ, ಜಿಪಂ ಮತ್ತು ತಾಪಂನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.
ಪ್ರಸ್ತುತ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಗೆ ಪ್ರತ್ಯೇಕ ತಾಪಂ ರಚನೆಯಾಗಿದ್ದು, ಕೆ.ಆರ್. ನಗರಕ್ಕೆ 11 ಮತ್ತು ಸಾಲಿಗ್ರಾಮ 10 ಕ್ಷೇತ್ರಗಳು ನಿಗದಿಯಾಗಿವೆ.
ಮೀಸಲಾತಿ ನಿಗದಿಯಾಗಿರುವುದರಿಂದ ಸ್ಪರ್ಧಾಕಾಂಕ್ಷಿಗಳು ಪಕ್ಷದಿಂದ ಬಿ. ಫಾರಂ ಪಡೆದು ಚುನಾವಣಾ ಕಣಕ್ಕೆ ದುಮುಕಲು ಸಿದ್ದತೆ ನಡೆಸುತ್ತಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ತಮ್ಮ ಆಪ್ತರ ಮೊರೆ ಹೋಗುತ್ತಿದ್ದಾರೆ.
ಜಿಪಂ ಮತ್ತು ತಾಪಂಗಳಲ್ಲಿ ಕಳೆದ ಸಾಲಿಗಿಂತ ಹೆಚ್ಚಾಗಿ ಗೆಲುವು ದಾಖಲಿಸಲು ಕಾಂಗ್ರೆಸ್ ತಂತ್ರ ರೂಪಿಸಲು ಮುಂದಾಗಿದ್ದರೆ, ಶಾಸಕ ಸಾ.ರಾ. ಮಹೇಶ್ ಅವರ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ಎರಡು ತಾಲೂಕಿನಲ್ಲಿ ದಿಗ್ವಿಯ ಸಾಧಿಸಲು ಸಜ್ಜಾಗುತ್ತಿದೆ.
ವಿಧಾನಸಭಾ ಚುನಾವಣೆಗೆ ಮೊದಲ ಮೆಟ್ಟಿಲು ಮತ್ತು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವರಿಗೆ ಉತ್ತಮ ವೇದಿಕೆಯಾಗಿರುವ ಜಿಪಂ ಮತ್ತು ತಾಪಂ ಚುನಾವಣಾ ರಾಜಕಾರಣ ಕೊರೋನಾ ಸೋಂಕಿನ ನೋವಿನ ನಡುವೆಯು ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಬಿಸಿ ಏರಿಸಿದೆ.
ಆಕಾಂಕ್ಷಿಗಳಿವರು-ಕಾಂಗ್ರೆಸ್‌ನಿಂದ ಹೊಸೂರು ಕ್ಷೇತ್ರಕ್ಕೆ ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದು, ಉಳಿದಂತೆ ಎಐಸಿಸಿ ಸಹ ವಕ್ತಾರೆ ಐಶ್ವರ್ಯ ಮಹದೇವ್ ಪಕ್ಷದ ವರಿಷ್ಠರು ಹೆಬ್ಬಾಳು ಮತ್ತು ಹಂಪಾಪುರ ಎರಡು ಕ್ಷೇತ್ರದಿಂದ ಎಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಿದರೆ ಅದಕ್ಕೆ ಬದ್ದ ಎಂದಿದ್ದಾರೆ.
ಇತರ ಕ್ಷೇತ್ರಗಳ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಜಿಪಂ ಮತ್ತು ತಾಪಂ ಸದಸ್ಯ ಸ್ಥಾನದ ನೂರಾರು ಆಕಾಂಕ್ಷಿತರು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ.