ಶ್ರೀರಾಮುಲು ನಿಯಂತ್ರಿಸಲು ರಾಜು ಪ್ರಕರಣ ಗಾಳವಾಯ್ತೇ?

By Kannadaprabha News  |  First Published Jul 3, 2021, 1:51 PM IST

* ರಾಜು ಬಂಧನ ಕುರಿತು ಶ್ರೀರಾಮುಲು ತೀವ್ರ ಅಸಮಾಧಾನ?
* ರಾಜು ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್‌ ಶುರು
* ರಾಜು ಬಂಧನವಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ 
 


ಬಳ್ಳಾರಿ(ಜು.03): ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಮಾಡಿರುವ ಆರೋಪದಡಿ ಸಚಿವ ಬಿ. ಶ್ರೀರಾಮುಲು ಆಪ್ತ ರಾಜು ಅವರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದ ಮೂಲಕ ಸಚಿವ ಶ್ರೀರಾಮುಲು ಅವರನ್ನು ಪಕ್ಷದಲ್ಲಿ ನಿಯಂತ್ರಿಸುವ ಕೆಲಸ ನಡೆಯುತ್ತಿದೆಯೇ? ಶ್ರೀರಾಮುಲು ಪ್ರಭಾವ ಕುಗ್ಗಿಸಲು ಈ ಪ್ರಕರಣವನ್ನು ಗಾಳವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ರಾಜು ಬಂಧನ ಕುರಿತು ಖುದ್ದು ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಪ್ರಕರಣವನ್ನು ಇಷ್ಟೊಂದು ದೊಡ್ಡದು ಮಾಡಿದ್ದು ಯಾಕೆ? ಈ ಘಟನೆಯಿಂದ ನಮಗೂ ಮುಜುಗರವಾಗುವುದಿಲ್ಲವೇ ಎಂದು ಶ್ರೀರಾಮುಲು ಅವರು ತಮ್ಮ ಆಪ್ತರ ಬಳಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

undefined

ವಂಚನೆ ಆರೋಪದಡಿ ಬಂಧನವಾಗಿರುವ ರಾಜು, ಸಚಿವ ಶ್ರೀರಾಮುಲು ಬಳಿ ಸುಮಾರು ಇಪ್ಪತ್ತು ವರ್ಷಗಳಿಂದ ಆಪ್ತ ಸಹಾಯಕನಾಗಿ ಇದ್ದು ಶ್ರೀರಾಮುಲು ಬಳಿ ಇರುವ ನಾಲ್ಕೈದು ಆಪ್ತ ಸಹಾಯಕರಲ್ಲಿ ರಾಜು ಹೆಚ್ಚು ಆತ್ಮೀಯವಾಗಿದ್ದ. ಚುನಾವಣೆ ಸೇರಿದಂತೆ ಮಹತ್ವದ ಕಾರ್ಯಗಳನ್ನು ರಾಜು ನಿಭಾಯಿಸುತ್ತಿದ್ದರು. ಅತ್ಯಂತ ನಂಬಿಕಸ್ಥ ಎಂಬ ಕಾರಣಕ್ಕಾಗಿಯೇ ಶ್ರೀರಾಮುಲು ಅವರು ಅನೇಕ ಮುಖ್ಯವಾದ ಕಾರ್ಯಗಳನ್ನು ರಾಜುಗೆ ಸೂಚಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇದು ಜಿಲ್ಲೆಯ ಬಿಜೆಪಿ ವಲಯದಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ರಾಜು ವಂಚನೆ ಆರೋಪದಡಿ ಬಂಧನವಾಗುತ್ತಿದ್ದಂತೆಯೇ ಬಿಜೆಪಿ ಸೇರಿದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಜಯೇಂದ್ರ ನಡೆಗೆ ಸಚಿವ ಶ್ರೀರಾಮುಲು ಅಸಮಾಧಾನ

ಕೆಲಸ ಕೊಡಿಸುವುದಾಗಿ ಅನೇಕರಿಗೆ ರಾಜು ವಂಚನೆ ಮಾಡಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಗೊತ್ತಾಗುತ್ತಿದ್ದಂತೆಯೇ ಶ್ರೀರಾಮುಲು ಬಳಿಯೇ ಚರ್ಚಿಸಿ, ಅದನ್ನು ಇತ್ಯರ್ಥ ಪಡಿಸಬಹುದಿತ್ತು. ಇಂಥವರನ್ನು ದೂರ ಇಡಿ ಎಂದು ಸೂಚಿಸಬಹುದಿತ್ತು. ಆದರೆ, ನೇರವಾಗಿ ದೂರು ಕೊಟ್ಟು ಬಂಧಿಸಲು ಸೂಚಿಸಿದ್ದೇಕೆ ಎಂಬ ಪ್ರಶ್ನೆ ಮೂಡಿದೆ. ರಾಜು ಬಂಧನ ಅನೇಕ ರಾಜಕೀಯ ಚರ್ಚೆಗಳಿಗೆ ಆಸ್ಪದ ಒದಗಿಸಿದ್ದು ಇಡೀ ಬೆಳವಣಿಗೆಯ ಹಿಂದೆ ಸಚಿವ ಶ್ರೀರಾಮುಲು ಅವರನ್ನು ಪಕ್ಷದೊಳಗೆ ನಿಯಂತ್ರಿಸುವ ಮತ್ತೊಂದು ಹಂತದ ಹುನ್ನಾರವಾಗಿರಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಏತನ್ಮಧ್ಯೆ ಸಚಿವ ಬಿ. ಶ್ರೀರಾಮುಲು ಹಾಗೂ ಆಪ್ತ ಸಹಾಯಕ ರಾಜು ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್‌ ಶುರುವಾಗಿದೆ. ಸಚಿವ ಶ್ರೀರಾಮುಲು ಅವರ ಬೆಂಬಲಿಗರು ಹಾಗೂ ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಾಯಕನ ಪರ ಪೋಸ್ಟರ್‌ಗಳನ್ನು ಹಾಕುತ್ತಿದ್ದು, ಶ್ರೀರಾಮುಲು ಅವರ ಹೆಸರನ್ನು ಕೆಡಿಸಲು ಈ ರೀತಿಯ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
 

click me!