*ಎಲ್ಲ ಠಾಣಾಧಿಕಾರಿಗಳಿಗೆ ಪೊಲೀಸ್ ಆಯುಕ್ತರ ಸೂಚನೆ
*ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ಆರೋಪ
*ಅನುಮತಿ ಇಲ್ಲದೆ ರಸ್ತೆ ಅಗೆದರೆ ಪೊಲೀಸರಿಂದಲೂ ಕ್ರಮ!
ಬೆಂಗಳೂರು (ಫೆ. 04): ಪಾಲಿಕೆ (BBMP) ಅನುಮತಿ ಪಡೆಯದೆ ರಸ್ತೆ ಅಗೆಯುತ್ತಿರುವ ಕೆಲವು ಸೇವಾ ಸಂಸ್ಥೆಗಳ ವಿರುದ್ಧ ಪಾಲಿಕೆ ಎಂಜಿನಿಯರ್‌ಗಳು ನೀಡುವ ದೂರುಗಳ ಸಂಬಂಧ ವಿಳಂಬ ಮಾಡದೆ ಕೂಡಲೇ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ, ಬೆಂಗಳೂರು ಜಲಮಂಡಳಿ ಸೇರಿದಂತೆ ಕೆಲವು ಸೇವಾ ಸಂಸ್ಥೆಗಳು ಪಾಲಿಕೆ ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವ ಆರೋಪಗಳು ಕೇಳಿ ಬಂದಿವೆ.
ಈ ರಸ್ತೆ ಅಗೆತದಿಂದ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅನುಮತಿ ಪಡೆಯದೆ ರಸ್ತೆ ಅಗೆದಿರುವ ಸಂಬಂಧಪಟ್ಟಸಂಸ್ಥೆಗಳ ಅಧಿಕಾರಿಗಳು, ನೌಕರರ ವಿರುದ್ಧ ಪಾಲಿಕೆ ಎಂಜಿನಿಯರ್‌ಗಳು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಕೆಯಾದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವಂತೆ ಪಾಲಿಕೆ ರಸ್ತೆ ಹಾಗೂ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗುವ ದೂರುಗಳ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಎಲ್ಲ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ BBMP: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ!
ಪ್ರತಿಭಟನೆ, ಮೆರವಣಿಗೆ ನಿಯಂತ್ರಣ ಅಧಿಕಾರ!: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಸಂಘಗಳು, ವ್ಯಕ್ತಿಗಳು ನಡೆಸುವ ಮೆರವಣಿಗೆ, ಪ್ರತಿಭಟನೆ, ಧರಣಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಬೆಂಗಳೂರು ಹೃದಯ ಭಾಗದಲ್ಲಿ ಅಸಂಘಟಿತ ರೀತಿಯಲ್ಲಿ ನಡೆಯುವ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ವಾಹನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಈ ಪ್ರತಿಭಟನೆಗಳಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ರಿಟ್ ಅರ್ಜಿ ದಾಖಲಿಸಿಕೊಂಡು ಕೆಲ ನಿರ್ದೇಶನ ನೀಡಿತ್ತು.
ಅಂತೆಯೆ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೆಲವು ನಿರ್ದೇಶನ ನೀಡಿತ್ತು. ಈ ನಿರ್ದೇಶನಗಳನ್ವಯ ಕಾನೂನನ್ನು ಗಮನದಲ್ಲಿರಿಸಿಕೊಂಡು ಹೈಕೋರ್ಟ್ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಯಂತ್ರಿಸಲು ಸಮರ್ಪಕ ಕಾರ್ಯ ವಿಧಾನವನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: Bengaluru: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಪ್ರತಿಭಟಿಸುತ್ತೇವೆ: ರೆಡ್ಡಿ
ಶೀಘ್ರ ನಿಯಮ: ಹೈಕೋರ್ಟ್‌ನ ನಿರ್ದೇಶನ ಮೇರೆಗೆ ಇದೀಗ ರಾಜ್ಯ ಸರ್ಕಾರ ನಗರ ಪೊಲೀಸ್ ಆಯುಕ್ತರಿಗೆ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ. ಅದರಂತೆ ನಗರ ಪೊಲೀಸರು ತಮಗೆ ಸಿಕ್ಕಿರುವ ಅಧಿಕಾರ ಬಳಸಿ ಬೆಂಗಳೂರು ನಗರ ವ್ಯಾಪ್ತಿಗೆ ಒಳಪಟ್ಟಂತೆ ‘ಲೈಸೆನ್ಸಿಂಗ್ ಆ್ಯಂಡ್ ರೆಗ್ಯುಲೇಷನ್ ಆಫ್ ಪ್ರೊಟೆಸ್ಟ್, ಡೆಮಾಸ್ಪ್ರೇಷನ್ಸ್ ಆ್ಯಂಡ್ ಪ್ರೊಟೆಸ್ಟ್ ಮಾಚ್‌ರ್ (ಬೆಂಗಳೂರು ಸಿಟಿ) ಆರ್ಡರ್ 2021’ರ ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಸಂಪೂರ್ಣವಾಗಿ ಅವಲೋಕಿಸಿ ಮುಂದಿನ ದಿನಗಳಲ್ಲಿ ಈ ವಿಷಯವಾಗಿ ನಿಯಮಗಳನ್ನು ರೂಪಿಸಲಾಗುತ್ತದೆ. ಈ ನಿಯಮಗಳನ್ನು ನಗರದಲ್ಲಿ ಕಾರ್ಯರೂಪಕ್ಕೆ ತರಲು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಅಧೀನ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.