ಬೆಂಗಳೂರು: ನೌಕರನ ತಡೆದು ರಾತ್ರಿ 2,500 ರೂ. ಸುಲಿದ ಪೊಲೀಸ್‌?

By Kannadaprabha NewsFirst Published Jan 13, 2023, 8:31 AM IST
Highlights

ನಿಮ್ಮ ಭಯ ಹಾಗೂ ಆತಂಕವನ್ನು ನಾವು ಆರ್ಥ ಮಾಡಿಕೊಂಡಿದ್ದೇವೆ. ನನ್ನ ಕಚೇರಿಗೆ ಬಂದು ಭೇಟಿಯಾಗಿ. ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಮೊಬೈಲ್‌ ಸಂಖ್ಯೆಯನ್ನು ಹಂಚಿಕೊಂಡ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ. 

ಬೆಂಗಳೂರು(ಜ.13):  ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯನ್ನು ಇಬ್ಬರು ಗಸ್ತು ಪೊಲೀಸರು ಮಾರ್ಗ ಮಧ್ಯೆ ತಡೆದು ಆತನನ್ನು ಬೆದರಿಸಿ 2500 ಸುಲಿಗೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಹಿಮಾಚಲ ಪ್ರದೇಶ ಮೂಲದ ವೈಭವ್‌ ಪಟೇಲ್‌ ಎಂಬುವವರು ಈ ಬಗ್ಗೆ ಸರಣಿ ಟ್ವೀಟ್‌ ಮಾಡಿ ಗಸ್ತು ಪೊಲೀಸರು ಹೇಗೆ ಹೆದರಿಸಿ, ಸುಲಿಗೆ ಮಾಡಿದರು ಎಂಬ ಘಟನೆಯನ್ನು ವಿವರವಾಗಿ ಬರೆದುಕೊಂಡಿದ್ದಾರೆ. ‘ಪೊಲೀಸರಿಂದ ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಸಾರ್ವಜನಿಕರೇ ಎಚ್ಚರದಿಂದಿರಿ. ಏಕೆಂದರೆ, ಮುಂದಿನ ದಿನಗಳಲ್ಲಿ ನನ್ನಂತೆ ನೀವು ಸಹ ಪೊಲೀಸರಿಗೆ ಬಲಿಪಶುವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಜ.11ರಂದು ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮುಂಜಾನೆ 3.50ರ ಸುಮಾರಿಗೆ ರಾರ‍ಯಪಿಡೋ ಬೈಕ್‌ ಟ್ಯಾಕ್ಸಿಯಲ್ಲಿ ಮನೆಗೆ ಹಿಂದಿರುಗುವಾಗ, ಎಚ್‌ಎಸ್‌ಆರ್‌ ಲೇಔಟ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಇಬ್ಬರು ಗಸ್ತು ಪೊಲೀಸರು, ಬೈಕ್‌ ಟ್ಯಾಕ್ಸಿ ತಡೆದು ಎಲ್ಲಿಂದ ಬರುತ್ತಿದ್ದೀರಾ? ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ರಸ್ತೆಯಲ್ಲಿ ವಿದ್ಯುತ್‌ ದೀಪಗಳ ಬೆಳಕು ಮಸುಕಾಗಿತ್ತು. ಆ ಮಂದ ಬೆಳಕಿನಲ್ಲಿ ನನ್ನ ಬ್ಯಾಗ್‌ ತಪಾಸಣೆಗೆ ಮುಂದಾದರು’.
‘ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ನನ್ನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಈ ನಡುವೆ ಬ್ಯಾಗ್‌ ಪರಿಶೀಲಿಸುತ್ತಿದ್ದ ಪೊಲೀಸ್‌, ಬ್ಯಾಗ್‌ನಿಂದ ಸ್ವಲ್ಪ ಸೊಪ್ಪು ತೆಗೆದು, ಇದೇನಿದು ಎಂದು ಪ್ರಶ್ನಿಸಿದರು. ಆ ಸೊಪ್ಪಿನ ಬಗ್ಗೆ ನನಗೆ ತಿಳಿಯದ ಪರಿಣಾಮ ಗೊತ್ತಿಲ್ಲ ಎಂದೆ. ಇದಕ್ಕೆ ಆ ಪೊಲೀಸ್‌, ನೀನು ಗಾಂಜಾ ಸೇವನೆ ಮಾಡುತ್ತೀಯಾ ಎಂದು ಕೇಳಿದರು. ಆ ಅಭ್ಯಾಸ ಇಲ್ಲದ ನಾನು, ಗಾಂಜಾ ಸೇವಿಸುವುದಿಲ್ಲ ಎಂದೆ. ಅಷ್ಟರಲ್ಲಿ ರಾರ‍ಯಪಿಡೋ ಬೈಕ್‌ ಟ್ಯಾಕ್ಸಿ ಚಾಲಕನಿಗೆ ನನ್ನಿಂದ .100 ಕೊಡಿಸಿ ಸ್ಥಳದಿಂದ ತೆರಳುವಂತೆ ಆತನಿಗೆ ಸೂಚಿಸಿದರು. ಅಸಲಿಯಾಗಿ ನನ್ನ ಮನೆಗೆ ಬೈಕ್‌ ಟ್ಯಾಕ್ಸಿ ದರ .73 ಮಾತ್ರ ಇತ್ತು. ಆದರೂ ಪೊಲೀಸರು ಹೆಚ್ಚುವರಿ ಹಣ ಕೊಡಿಸಿದರು’ ಎಂದು ದೂರಿದ್ದಾರೆ.

ಕಾರು ಅಡ್ಡಗಟ್ಟಿ 80 ಲಕ್ಷ ಎಗರಿಸಿದ ನಕಲಿ ಪೊಲೀಸರು!

‘ಬಳಿಕ ಇಬ್ಬರು ಪೊಲೀಸರು, ಗಾಂಜಾ ಸೇವಿಸುವುದಾಗಿ ಒಪ್ಪಿಕೋ ಎಂದು ನನ್ನ ಮೇಲೆ ಒತ್ತಡ ಹಾಕಿದರು. ನಾನು ಮಾಡದ ತಪ್ಪನ್ನು ಏಕೆ ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದೆ. ನಿನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಜೈಲಿಗೆ ಹಾಕಿದರೆ ನಮಗೆ ತಲಾ .15 ಸಾವಿರ ಬಹುಮಾನ ಬರಲಿದೆ ಎಂದು ಹೇಳಿದರು. ನಾನು ಒಪ್ಪಿಕೊಳ್ಳಲು ನಿರಾಕರಿಸಿದೆ. ಬಳಿಕ ಇಬ್ಬರು ಪೊಲೀಸರು ನನ್ನನ್ನು ಅವರ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ವೈದ್ಯಕೀಯ ಪರೀಕ್ಷೆ ಮಾಡಿಸುವುದಾಗಿ ಆಸ್ಪತ್ರೆಯೊಂದರ ಸಮೀಪದ ರಸ್ತೆಗೆ ಕರೆದೊಯ್ದರು. ಆಗಲೂ ಗಾಂಜಾ ಸೇವಿಸಿದ್ದಾಗಿ ಒಪ್ಪಿಕೋ ಎಂದು ಒತ್ತಡ ಹಾಕಿದರು. ನಾನು ಒಪ್ಪಲಿಲ್ಲ’ ಎಂದಿದ್ದಾರೆ.

‘ಈ ವೇಳೆಗೆ ಈ ಇಬ್ಬರು ಪೊಲೀಸರ ಉದ್ದೇಶ ನನಗೆ ಅರ್ಥವಾಯಿತು. ಹೀಗಾಗಿ ನನ್ನನ್ನು ಬಿಡಲು ಏನು ಮಾಡಬೇಕು ಎಂದು ಅವರನ್ನೇ ಕೇಳಿದೆ. ಈ ವೇಳೆ ನಿನ್ನ ಬಳಿ ಹಣವೆಷ್ಟಿದೆ ಎಂದು ಕೇಳಿದರು. ನನ್ನ ಪರ್ಸ್‌ನಲ್ಲಿದ್ದ .2500ವನ್ನು ಅವರೇ ತೆಗೆದುಕೊಂಡರು. ನನ್ನ ಬ್ಯಾಂಕ್‌ ಖಾತೆಗೆ ಬಗ್ಗೆ ಮಾಹಿತಿ ಪಡೆದು ಖಾತೆಯಲ್ಲಿದ್ದ .4 ಸಾವಿರ ಎಟಿಎಂಗೆ ತೆರಳಿ ಡ್ರಾ ಮಾಡಿಕೊಂಡು ಬಾ ಎಂದರು. ಎಟಿಎಂ ಕಾರ್ಡ್‌ ಇಲ್ಲ ಎಂದೆ. ಯುಪಿಐನಲ್ಲಿ ಹಣ ಸ್ವೀಕರಿಸಲು ನಿರಾಕರಿಸಿದರು. ಬಳಿಕ ನನ್ನನ್ನು ಬಿಟ್ಟು ಕಳುಹಿಸಿದರು’ ಎಂದು ವೈಭವ್‌ ಪಟೇಲ್‌ ಟ್ವಿಟರ್‌ನಲ್ಲಿ ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ.

ಸೂಕ್ತ ಕ್ರಮ: ಡಿಸಿಪಿ

ವೈಭವ್‌ ಪಟೇಲ್‌ ಟ್ವೀಟ್‌ಗೆ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ನಿಮ್ಮ ಭಯ ಹಾಗೂ ಆತಂಕವನ್ನು ನಾವು ಆರ್ಥ ಮಾಡಿಕೊಂಡಿದ್ದೇವೆ. ನನ್ನ ಕಚೇರಿಗೆ ಬಂದು ಭೇಟಿಯಾಗಿ. ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಮೊಬೈಲ್‌ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

click me!