ಹಿರೇಕೆರೂರು: ಕಾಲು ಮುರಿದ ಕುದುರೆ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್‌

By Kannadaprabha NewsFirst Published Sep 7, 2020, 11:55 AM IST
Highlights

ಕಾಲು ಮುರಿದ ಕುದುರೆಯ ಆರೈಕೆ ಮಾಡಿದ ಪೊಲೀಸ್‌ ಸಿಬ್ಬಂದಿ| ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ನಡೆದ ಘಟನೆ| ಕುದುರೆಗೆ ಮುಂದಿನ ದಿನಗಳಲ್ಲಿ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಹಂಬಲ ವ್ಯಕ್ತಪಡಿಸಿದ ಪೊಲೀಸ್‌| 

ಹಿರೇಕೆರೂರು(ಸೆ.07): ನಾಗರಿಕರ ರಕ್ಷಣೆ, ಸಮಾಜದ ಶಾಂತಿ ಕಾಪಾಡುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲೇ ದಿನದ 24 ಗಂಟೆಯನ್ನು ಕಳೆಯುವ ಜತೆಯಲ್ಲಿ ಇಲ್ಲಿಯ ಪೊಲೀಸ್‌ ಸಿಬ್ಬಂದಿಯೊಬ್ಬರು ಕಾಲು ಮುರಿದ ಕುದುರೆಯ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಗರದಲ್ಲಿ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡು ಸಾಯುವಂಥ ಸ್ಥಿತಿಯಲ್ಲಿ ಇದ್ದ ಕುದುರೆಯನ್ನು ಇಲ್ಲಿನ ಪೊಲೀಸ್‌ ಠಾಣೆಯ ಸಿಬ್ಬಂದಿ ಡಿ.ಎಫ್‌. ಹೊಸಮನಿ ಅವರು ತಮ್ಮ ಠಾಣೆಯ ಸಹ ಸಿಬ್ಬಂದಿಯವರ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ. ಕುದುರೆಗೆ ಕಾಲು ಮುರಿದು ಗಾಯವಾಗಿ, ಗಾಯದಲ್ಲಿ ಹುಳುಗಳು ಬೆಳೆದು, ಅತೀವ ನೋವಿನಿಂದ ಬಳಲುತ್ತಿತ್ತು. ಅದಕ್ಕೆ ಔಷಧೋಪಚಾರ ಮಾಡಿ, ಗಾಯವನ್ನು ಗುಣಪಡಿಸುವ ಜತೆಗೆ ಅದಕ್ಕೆ ದಿನಾಲೂ ಆಹಾರ, ನೀರು ನೀಡಿದ್ದಾರೆ. ಹೀಗೆ ಹಲವು ದಿನಗಳ ಕಾಲ ಆರೈಕೆ ಮಾಡಿದ್ದಾರೆ.

ಆಘಾತಕಾರಿ ಸುದ್ದಿ: ಲಾಕ್‌ಡೌನ್‌ ಅವಧಿಯಲ್ಲಿ ಶಿಶು, ತಾಯಿ ಮರಣ ಏರಿಕೆ..!

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕುದುರೆಗೆ ಕಾಲು ಮುರಿದು ಗಾಯವಾಗಿ ಮೂಕವೇದನೆ ಅನುಭವಿಸುತ್ತಿತ್ತು. ನಾನು ನನ್ನ ಸಹದ್ಯೋಗಿ ಮಿತ್ರರು ಸೇರಿ ಕುದುರೆಗೆ ಗುಣಮುಖವಾಗುವ ವರೆಗೂ ಆರೈಕೆ ಮಾಡಿದೆವು. ಇಂದು ಗುಣಮುಖವಾಗಿ ನಡೆದಾಡುತ್ತಿದೆ. ಅದೆ ನಮಗೆ ಸಂತಸ ತಂದಿದೆ. ಜನರು ತಮ್ಮ ಸುತ್ತಮುತ್ತಲಿನ ಪ್ರಾಣಿ, ಪಕ್ಷಿಗಳಿಗೆ ಈ ರೀತಿ ಆರೋಗ್ಯದ ಸಮಸ್ಯೆ ಅಥವಾ ಅಪಘಾತಗಳು ಸಂಭವಿಸಿರುವ ಘಟನೆಗಳು ಕಂಡು ಬಂದಲ್ಲಿ ಅವುಗಳಿಗೆ ಔಷಧೋಪಚಾರದ ಜತೆಗೆ ಆಹಾರ, ನೀರು ನೀಡಿ, ಪ್ರಾಣಿ ಸಂಕುಲವನ್ನು ರಕ್ಷಣೆ ಮಾಡಬೇಕು ಮನವಿ ಮಾಡಿದರು. ಜತೆಗೆ ಕುದುರೆಗೆ ಮುಂದಿನ ದಿನಗಳಲ್ಲಿ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದರು.

ಕಾಲು ಮುರಿದ ಕುದುರೆಯನ್ನು ಅವರ ಕರ್ತವ್ಯದ ಜತೆಗೆ ಇಲಾಖೆಯ ಸಿಬ್ಬಂದಿ ಆರೈಕೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಸೇವಾ ಮನೋಭಾವನೆಗೆ ಹಾಗೂ ಪ್ರಾಣಿಗಳ ಮೇಲೆ ಇರುವ ಕರುಣೆ ಮೆಚ್ಚುವಂಥದ್ದು ಎಂದು ಹಿರೇಕೆರೂರು ಪಿಎಸ್‌ಐ ದೀಪಾ ಟಿ ಅವರು ಹೇಳಿದ್ದಾರೆ. 
 

click me!