Asianet Suvarna News Asianet Suvarna News

ಆಘಾತಕಾರಿ ಸುದ್ದಿ: ಲಾಕ್‌ಡೌನ್‌ ಅವಧಿಯಲ್ಲಿ ಶಿಶು, ತಾಯಿ ಮರಣ ಏರಿಕೆ..!

ಏಪ್ರಿಲ್‌ನಿಂದ ಜುಲೈ ವರೆಗಿನ ನಾಲ್ಕು ತಿಂಗಳಲ್ಲಿ 54 ಶಿಶುಮರಣ, 7 ತಾಯಂದಿರ ಸಾವು| ಸಮರ್ಪಕ ವೈದ್ಯಕೀಯ ಸೇವೆ ದೊರೆಯದೇ ತಾಯಿ, ಶಿಶು ಮರಣ ಪ್ರಮಾಣದಲ್ಲಿ ಏರಿಕೆ| ಕೊರೋನಾ ಜತೆಗೆ ಹೆರಿಗೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗೆ ಗಮನ ನೀಡಬೇಕಿದೆ|

Infant Mother Mortality Rise During Lockdown in Haveri District
Author
Bengaluru, First Published Sep 7, 2020, 11:31 AM IST

ನಾರಾಯಣ ಹೆಗಡೆ

ಹಾವೇರಿ(ಸೆ.07): ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಒಂದು ಕಡೆಯಾದರೆ, ಲಾಕ್‌ಡೌನ್‌ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಜಿಲ್ಲೆಯಲ್ಲಿ 4 ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮರಣ ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಾ. 24 ರಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದ ಬಳಿಕ ಕೊರೋನಾ ಸೋಂಕು ಎಲ್ಲೆಡೆ ವ್ಯಾಪಿಸಿತ್ತು. ಈ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ಆದ್ಯತೆ ನೀಡಲಾಯಿತು. ಖಾಸಗಿ ಆಸ್ಪತ್ರೆಗಳು ಸೇವೆ ಬಂದ್‌ ಮಾಡಿದವು. ಇವೆಲ್ಲದರ ಪರಿಣಾಮವಾಗಿ ನವಜಾತ ಶಿಶುಗಳು ಹಾಗೂ ತಾಯಂದಿರು ಸಮರ್ಪಕ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಕೊರೋನಾ ಸೋಂಕಿಗೆ ಇದುವರೆಗೆ ಜಿಲ್ಲೆಯಲ್ಲಿ 119 ಜನ ಮೃತಪಟ್ಟಿದ್ದರೆ, ಕೇವಲ ನಾಲ್ಕು ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮೃತಪಟ್ಟಿದ್ದಾರೆ. ಅರಿವಿನ ಕೊರತೆ, ಸಕಾಲಕ್ಕೆ ಚಿಕಿತ್ಸೆ ಹಾಗೂ ಔಷಧ ದೊರೆಯದಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಶಿಶು ಹಾಗೂ ತಾಯಂದಿರು ಮರಣ ಹೊಂದಿದ್ದು, ಆತಂಕಕ್ಕೆ ಕಾರಣವಾಗಿದೆ.

4 ತಿಂಗಳಲ್ಲಿ 54 ಶಿಶು ಮರಣ:

ಕಳೆದ ಏಪ್ರಿಲ್‌ ತಿಂಗಳಿಂದ ಜುಲೈ ಅಂತ್ಯದ ವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಅವಧಿಯಲ್ಲೇ ಜಿಲ್ಲೆಯಲ್ಲಿ ತಾಯಿ, ಶಿಶು ಮರಣ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಪ್ರಿಲ್‌ ತಿಂಗಳಲ್ಲಿ 14 ಶಿಶುಗಳು ಅಸು ನೀಗಿವೆ. ಮೇ ತಿಂಗಳಲ್ಲಿ 15, ಜೂನ್‌ ತಿಂಗಳಲ್ಲಿ 14 ಹಾಗೂ ಜುಲೈ ತಿಂಗಳಲ್ಲಿ 11 ಶಿಶುಗಳು ಮೃತಪಟ್ಟಿವೆ. 1 ದಿನದಿಂದ ಹಿಡಿದು ಒಂದು ತಿಂಗಳ ಅವಧಿಯ ಶಿಶುಗಳೇ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿವೆ. ಕೊರೋನಾ ಆರಂಭದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಮಾತ್ರ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿತ್ತು. ಅಲ್ಲದೇ, ಕೊರೋನಾ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೋಗಲು ಹಿಂಜರಿಯುತ್ತಿದ್ದರು. ಖಾಸಗಿ ಆಸ್ಪತ್ರೆಗಳ ಬಾಗಿಲು ಬಂದ್‌ ಇದ್ದುದರಿಂದ ಅನೇಕರು ಸಮಸ್ಯೆ ಎದುರಿಸುವಂತಾಯಿತು. ಇವೆಲ್ಲ ಕಾರಣಗಳಿಂದಾಗಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹಾವೇರಿ: ನಿವೃತ್ತಿಯಾಗಿ ಮರಳಿದ ಯೋಧ ಶೆಡ್‌ನಲ್ಲಿ ಸ್ವಯಂ ಕ್ವಾರಂಟೈನ್‌

7 ತಾಯಂದಿರ ಸಾವು:

ಲಾಕ್‌ಡೌನ್‌ ಅವಧಿಯಲ್ಲಿ ತಾಯಿ ಮರಣ ಪ್ರಮಾಣವೂ ಹೆಚ್ಚಿದೆ. ಏಪ್ರಿಲ್‌ನಿಂದ ಜುಲೈವರೆಗೆ 7 ತಾಯಂದಿರುವ ಮೃತಪಟ್ಟಿದ್ದಾರೆ. ಇವರೆಲ್ಲರೂ 20ರಿಂದ 25 ವರ್ಷದೊಳಗಿನವರೇ ಆಗಿರುವುದು ವಿಶೇಷ. ಹೆರಿಗೆಯಾದ ಕೆಲವೇ ದಿನಗಳಲ್ಲಿ ಈ ತಾಯಂದಿರೆಲ್ಲ ಅಸು ನೀಗಿದ್ದಾರೆ. ಏಪ್ರಿಲ್‌ನಲ್ಲಿ 1, ಮೇ ತಿಂಗಳಲ್ಲಿ 2, ಜೂನ್‌ನಲ್ಲಿ 2 ಹಾಗೂ ಜುಲೈ ತಿಂಗಳಲ್ಲಿ 2 ತಾಯಿ ಮರಣ ಪ್ರಕರಣ ವರದಿಯಾಗಿದೆ.

ಮುಖ್ಯವಾಗಿ ಲಾಕ್‌ಡೌನ್‌ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರೆಯದಿರುವುದೇ ತಾಯಿ, ಶಿಶು ಮರಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮೊದಲು ಈ ಪ್ರಮಾಣ ಇದಕ್ಕಿಂತ ಕಡಿಮೆಯಿತ್ತು. ಕೊರೋನಾ ಶುರುವಾದ ಮೇಲೆ ಕೊರೋನಾ ಹೊರತುಪಡಿಸಿ ಬೇರೆ ಯಾವ ಚಿಕಿತ್ಸೆಗೂ ಆಸ್ಪತ್ರೆಗಳಲ್ಲಿ ಗಮನ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಜುಲೈ ಬಳಿಕ ಕೊರೋನಾದೊಂದಿಗೆ ಇನ್ನಿತರ ಕಾಯಿಲೆ, ಆರೋಗ್ಯ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಸಾರ್ವಜನಿಕರು ಆಸ್ಪತ್ರೆಗೆ ಹೋಗಲು ಆತಂಕಪಡುತ್ತಿದ್ದಾರೆ. ಕೊರೋನಾ ಜತೆಗೆ ಹೆರಿಗೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗೆ ಗಮನ ನೀಡಬೇಕಿದೆ.

ಕೇವಲ 4 ತಿಂಗಳ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಿಶು, ತಾಯಿ ಮರಣ ವರದಿಯಾಗಿರುವುದು ಆತಂಕದ ಸಂಗತಿ ಹೌದು. ಆರಂಭಿಕ ದಿನಗಳಲ್ಲಿ ಕೊರೋನಾ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಜೂನ್‌ ಬಳಿಕ ಕೊರೋನಾದೊಂದಿಗೆ ಇನ್ನಿತರ ಆರೋಗ್ಯ ಸೇವೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಅರಿವಿನ ಕೊರತೆ ಹಾಗೂ ತಡವಾಗಿ ಆಸ್ಪತ್ರೆಗೆ ಬರುವುದರಿಂದಲೂ ತಾಯಿ, ಶಿಶು ಮರಣದಲ್ಲಿ ಏರಿಕೆಯಾಗಿದೆ ಎಂದು ಡಿಎಚ್‌ಒ ಡಾ. ರಾಜೇಂದ್ರ ದೊಡ್ಡಮನಿ ಅವರು ತಿಳಿಸಿದ್ದಾರೆ.
 

Follow Us:
Download App:
  • android
  • ios