* ಕೋಮು ಸೌಹಾರ್ದತೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆ ಪ್ರವೇಶಕ್ಕೆ ತಡೆ
* ಕೋಮು ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ
* ಜೂ.4ರ ಬೆಳಿಗ್ಗೆ 6ರಿಂದ ರಿಂದ ಜೂ.12ರ ಸಂಜೆ 6ರ ವರೆಗೆ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧ
ಬೀದರ್(ಜೂ.05): ಬಸವಕಲ್ಯಾಣದಲ್ಲಿ ಇದೇ ಜೂ.12ರಂದು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ’ ಎಂಬ ಆಂದೋಲನದ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಗೆ ಆಗಮಿಸುತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲಾದ ಸಿದ್ದಲಿಂಗ ಸ್ವಾಮಿಯನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಈ ಕುರಿತು ಆದೇಶ ಹೊರಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಸಿದ್ದಲಿಂದ ಸ್ವಾಮಿ, ಮಠಾಧೀಶರ ಕಾರ್ಯಕ್ರಮದಲ್ಲಿ ಭಾಗವಹಿಸುವದರಿಂದ ಕೋಮು ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಜೂನ್ 4ರ ಬೆಳಿಗ್ಗೆ 6ರಿಂದ ರಿಂದ ಜೂ.12ರ ಸಂಜೆ 6ರ ವರೆಗೆ ಈ ಇಬ್ಬರು ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶಿಸಿದ್ದರು.
ದತ್ತಪೀಠ ವಿವಾದ: ಮುಸ್ಲಿಂರನ್ನು ಒದ್ದು ಓಡಿಸಬೇಕು: ಪ್ರಮೋದ್ ಮುತಾಲಿಕ್
ಈ ನಿರ್ಬಂಧದ ಹೊರತಾಗಿಯೂ ಪ್ರಮೋದ್ ಮುತಾಲಿಕ್ ಹಾಗೂ ಸಿದ್ದಲಿಂಗ ಸ್ವಾಮಿ ಕಲಬುರಗಿಯಿಂದ ಬಸವಕಲ್ಯಾಣದ ರುದ್ರಮುನಿ ಅಭಿನವ ಶ್ರೀ ಮಠಕ್ಕೆ ತೆರಳುತ್ತಿದ್ದರು. ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಗಡಿ ವಿ.ಕೆ ಸಲಗರ ಬಳಿ ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ಜಿಲ್ಲೆಯ ಗಡಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ನಾವು ಶ್ರೀಮಠಕ್ಕೆ ತೆರಳಿ 15 ನಿಮಿಷ ಮಾತ್ರ ಇರ್ತೇವೆ, ನಾವು ಪೀರ್‌ಪಾಶಾ ಬಂಗ್ಲೆಗೆ ಹೋಗಲ್ಲ. ಯಾವುದೇ ಜೈಕಾರ, ಧಿಕ್ಕಾರ ಹಾಕೋಲ್ಲ. ಪರವಾನಿಗೆ ಕೊಡಿ ಎಂದು ಕೇಳಿದಾಗ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶವಿದೆ ದಯವಿಟ್ಟು ಸಹಕರಿಸಿ ವಾಪಸ್ ತೆರಳಿ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುತಾಲಿಕ್ ನಮ್ಮನ್ನು ಮಾತ್ರ ಟಾರ್ಗೆಟ್ ಮಾಡ್ತಿದ್ದೀರಾ, ನಾವು ಹೋದಲ್ಲೆಲ್ಲಾ ಬೆಂಕಿ ಹಚ್ತಿದ್ರೆ ದೇಶವೇ ಹೊತ್ತಿ ಉರೀತಿತ್ತು, ಇದೆಲ್ಲ ತಪ್ಪು ಕಲ್ಪನೆ ಎಂದರು. ಇನ್ನು ಆಂದೋಲ ಶ್ರೀ ಕೂಡ ನಮ್ಮನ್ನ ಮಾತ್ರ ಟಾರ್ಗೆಟ್ ಮಾಡ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿ ವಾಪಸ್ ಆದರು.