ಲಾಕ್‌ಡೌನ್: ಚಿಕ್ಕಮಗಳೂರಿನಲ್ಲಿ 1 ಸಾವಿರ ವಾಹನ ಜಪ್ತಿ

By Kannadaprabha NewsFirst Published Apr 8, 2020, 2:33 PM IST
Highlights

ಕೊರೋನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಮಂಗಳವಾರದಿಂದ ಮತ್ತಷ್ಟುಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಚಿಕ್ಕಮಗಳೂರು(ಏ.08): ಕೊರೋನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಮಂಗಳವಾರದಿಂದ ಮತ್ತಷ್ಟುಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ರಸ್ತೆಗಳಲ್ಲಿ ಬೇಕಾಬಿಟ್ಟಿಓಡಾಡಿದರೆ ವಾಹನ ಸವಾರರಿಗೆ ದಂಡ ಖಚಿತ. ಜೇಬಿನಲ್ಲಿ ಕಾಸು ಇಲ್ಲದಿದ್ದರೆ ವಾಹನ ಪೊಲೀಸ್‌ ಠಾಣೆಯ ಕಾಂಪೌಂಡ್‌ನೊಳಗಿನ ಪಾರ್ಕಿಂಗ್‌ ಜಾಗ ಸೇರಲಿದೆ. ರಸ್ತೆಗೆ ಬೇಕಾಬಿಟ್ಟಿಇಳಿದ ಸುಮಾರು ಒಂದು ಸಾವಿರ ಬೈಕ್‌ ಹಾಗೂ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೂ, ಜನ ರಸ್ತೆಗೆ ಬರುತ್ತಿದ್ದಾರೆ. ಬ್ಯಾಂಕ್‌, ದಿನಸಿ, ತರಕಾರಿ ಮಾರಾಟ ಎಂದಿನಂತೆ ಇರುವುದರಿಂದ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಕೊರೋನಾ ಭೀತಿ ಇಲ್ಲ ಎನ್ನುವಂತೆ ಜನರು ನಿರ್ಭಯವಾಗಿ ತಿರುಗಾಡುತ್ತಿದ್ದಾರೆ.

ಕೊರೋನಾ ಭೀತಿ: ವಿಜಯಪುರ ಜಿಲ್ಲೆಯ 57 ಜನರ ವರದಿ ನೆಗೆಟಿವ್‌

ಇದರಿಂದಾಗಿ ಪೊಲೀಸ್‌ ಇಲಾಖೆ ಮಂಗಳವಾರ ಮತ್ತೆ ಜಿಲ್ಲೆಯಲ್ಲಿ ಬಿಗಿ ಬಂದೋಬಸ್‌್ತ ವ್ಯವಸ್ಥೆ ಮಾಡಿದೆ. ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಮಾಡಿ ದಂಡ ವಿಧಿಸಿದರು. ಒಂದೇ ರಸ್ತೆಯಲ್ಲಿ ಪದೇ ಪದೇ ಕಂಡು ಬರುವ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ.

ಪವರ್‌ ಪ್ಲೇ:

ಲಾಕ್‌ಡೌನ್‌ಗೆ ನಿಗಧಿತ ದಿನ ಪೂರ್ಣಗೊಳ್ಳಲು ಇನ್ನು 7ದಿನ ಬಾಕಿ ಇದೆ. ಇದು, ಮುಕ್ತಾಯಗೊಳ್ಳುತ್ತದೆಯೋ ಅಥವಾ ಮುಂದುವರೆಯುತ್ತದೆಯೋ ಎಂಬ ಗೊಂದಲ ಇದೆ. ಅಂದರೆ, ಪವರ್‌ ಪ್ಲೇನಲ್ಲಿದ್ದೇವೆ. ಬಾಕಿ ಉಳಿದಿರುವ ದಿನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಮಾತ್ರ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದ್ದರಿಂದ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಹಲವು ಮಂದಿಯ ಅಭಿಪ್ರಾಯ. ಆದರೂ, ಜನರ ಓಡಾಟ ನಿಂತಿಲ್ಲ. ಆದ್ದರಿಂದ ಜಿಲ್ಲಾ ಪೊಲೀಸ್‌ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಚೆಕ್‌ಪೋಸ್ಟ್‌ 51ರಿಂದ 56ಕ್ಕೆ ಏರಿಕೆ: ಹರೀಶ್‌ ಪಾಂಡೆ

ಚಿಕ್ಕಮಗಳೂರು: ಜಿಲ್ಲೆಯ ಗಡಿ ಹಾಗೂ ಅಂತರಿಕವಾಗಿ ಒಟ್ಟು 51 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಈ ಸಂಖ್ಯೆಯನ್ನು 56ಕ್ಕೆ ಏರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ತಿಳಿಸಿದ್ದಾರೆ. ಗಡಿ ಭಾಗಗಳಲ್ಲಿ 25, ಆಂತರಿಕವಾಗಿ 31 ಚೆಕ್‌ಪೋಸ್ಟ್‌ಗಳಿವೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಜನ ಬೇಕಾಬಿಟ್ಟಿರಸ್ತೆಗೆ ಬರುತ್ತಿದ್ದಾರೆ. ಆದ್ದರಿಂದ ಮಂಗಳವಾರದಿಂದ 5 ಚೆಕ್‌ಪೋಸ್ಟ್‌ ಹೊಸದಾಗಿ ತೆರೆಯಲಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು. ಅಗತ್ಯ ಸೇವೆಗಳನ್ನು ಒದಗಿಸಲು ನೀಡಲಾಗಿದ್ದ ಪಾಸ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪತ್ತೆಯಾಗುತ್ತಿದೆ. ಈವರೆಗೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ವಿಧಿಸಿದೆ. ಇದನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮೆಲ್ಲರಿಗೂ ಅನುಕೂಲವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

click me!