ಕೋವಿಡ್ ಲಾಕ್‌ಡೌನ್ ಸಂದರ್ಭ ಸಿಎಂ ಪರಿಹಾರ ನಿಧಿಗೆ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದರೆ, ಇಲ್ಲೊಬ್ಬರು ಪೊಲೀಸ್ ಸಿಬ್ಬಂದಿ ಅರ್ಧ ತಿಂಗಳ ವೇತನವನ್ನೇ ತನ್ನೂರಿನ ಬಡವರ ಸಹಾಯಕ್ಕಾಗಿ ಮೀಸಲಿರಿಸಿ ನೆರವಾಗುತ್ತಿದ್ದಾರೆ.
ಮಂಗಳೂರು(ಏ.21): ಕೋವಿಡ್ ಲಾಕ್‌ಡೌನ್ ಸಂದರ್ಭ ಸಿಎಂ ಪರಿಹಾರ ನಿಧಿಗೆ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದ್ದರೆ, ಇಲ್ಲೊಬ್ಬರು ಪೊಲೀಸ್ ಸಿಬ್ಬಂದಿ ಅರ್ಧ ತಿಂಗಳ ವೇತನವನ್ನೇ ತನ್ನೂರಿನ ಬಡವರ ಸಹಾಯಕ್ಕಾಗಿ ಮೀಸಲಿರಿಸಿ ನೆರವಾಗುತ್ತಿದ್ದಾರೆ.
ಇವರು ಮಂಗಳೂರು ಡಿಎಆರ್ ಹೆಡ್ ಕಾನ್ಸ್‌ಟೇಬಲ್ ಶ್ರೀಹರಿ ಎನ್.ಎಸ್. ಪಾಣಾಜೆ. ಪುತ್ತೂರಿನ ಪಾಣಾಜೆಯಲ್ಲಿರುವ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ವ್ ಮೂಲಕ ಬಡವರಿಗೆ ಅಗತ್ಯ ಆಹಾರ ಸಾಮಗ್ರಿಗಳ ನೆರವು ಒದಗಿಸುತ್ತಿದ್ದಾರೆ. ಸಾಲ, ಮನೆ ಜವಾಬ್ದಾರಿಗಳ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
100ಕ್ಕೂ ಹೆಚ್ಚು ಬಡವರಿಗೆ ಸಾಮಗ್ರಿ:
ಶ್ರೀಹರಿ ಅವರು 14 ವರ್ಷಗಳ ಹಿಂದೆ ಈ ಟ್ರಸ್ವ್ ಆರಂಭಿಸಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸ್ ಇಲಾಖೆಯ ನೌಕರಿ ಸಿಕ್ಕಿದ ಬಳಿಕ ಟ್ರಸ್ವ್ ಜವಾಬ್ದಾರಿಯನ್ನು ಬೇರೆಯವರು ನಿರ್ವಹಿಸುತ್ತಿದ್ದಾರೆ. ಈಗ ಕೊರೋನಾ ಲಾಕ್‌ಡೌನ್‌ನಿಂದಾಗಿ ಬಡ ಜನರು ಕೆಲಸವಿಲ್ಲದೆ ಅಗತ್ಯ ವಸ್ತುಗಳ ಖರೀದಿಗೂ ಪರದಾಡುತ್ತಿದ್ದುದನ್ನು ಗಮನಿಸಿದ ಟ್ರಸ್ವ್‌ನ ಪದಾಧಿಕಾರಿಗಳು, ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಚಿಂತನೆ ನಡೆಸಿದ್ದರು. ಆದರೆ ಹಣಕಾಸಿನ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಶ್ರೀಹರಿ ಅವರು 15 ಸಾವಿರ ರು.ಗಳನ್ನು 2 ಕಂತುಗಳಲ್ಲಿ ನೀಡಿ ಸೇವಾ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಇದರೊಂದಿಗೆ ಕೆಲವು ದಾನಿಗಳ ದೇಣಿಗೆ ಮೂಲಕ ಈವರೆಗೆ ಒಟ್ಟು 109 ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ.
ಆರಂಭದಲ್ಲಿ ಪಾಣಾಜೆ ಗ್ರಾಮದಲ್ಲಿ ನಮ್ಮದೇ ಸರ್ವೇ ಮೂಲಕ 30ರಷ್ಟುಕಡು ಬಡವರನ್ನು ಗುರುತಿಸಿ ಅವರಿಗೆ ಆಹಾರ ಕಿಟ್ ಒದಗಿಸಿದೆವು. ನಂತರವೂ ಕಷ್ಟದಲ್ಲಿ ಇರುವವರನ್ನು ಗುರುತಿಸಿ ಕಿಟ್ ನೀಡಿದ್ದೇವೆ. 10 ಕೆಜಿ ಅಕ್ಕಿ, ಮೆಣಸು, ಸಕ್ಕರೆ, ಈರುಳ್ಳಿ ಬೇಳೆ ಕಾಳುಗಳನ್ನು ನೀಡಲಾಗಿದೆ. ಇನ್ನೂ 40 ಮಂದಿಯನ್ನು ಗುರುತಿಸಿದ್ದು, ಶೀಘ್ರದಲ್ಲಿ ಅವರಿಗೂ ವಿತರಿಸಲಿದ್ದೇವೆ ಎಂದು ಶ್ರೀಹರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ನಮ್ಮ ಕಾರ್ಯ ನೋಡಿ ಅನೇಕರು ದೇಣಿಗೆ ನೀಡಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ಲಾಕ್‌ಡೌನ್ ಮುಗಿಯುವವರೆಗೂ ನನ್ನ ವೇತನದ ಒಂದು ಭಾಗವನ್ನು ನೀಡಲು ಸಿದ್ಧನಿದ್ದೇನೆ ಎಂದರು. ವಿದ್ಯಾಶ್ರೀ ಟ್ರಸ್ವ್ ಮೂಲಕ ಪಾಣಾಜೆ ಮಾತ್ರವಲ್ಲದೆ ಇತರ ಊರಿನಲ್ಲೂ ತೊಂದರೆಗೆ ಒಳಗಾದವರಿಗೆ ಸಹಾಯ ಮಾಡಲು ಯೋಜಿಸಿದ್ದಾರೆ.
ಕಿಟ್ ನೀಡುವ ಫೋಟೊ ತೆಗೆಯಲ್ಲ
ಟ್ರಸ್ವ್‌ನಿಂದ ಇದುವರೆಗೆ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್ ನೀಡಿದ್ದರೂ ಇದುವರೆಗೂ ವಿತರಣೆಯ ಫೋಟೋವನ್ನು ತೆಗೆದಿಲ್ಲ. ಈ ಬಗ್ಗೆ ಆರಂಭದಲ್ಲೇ ನಿರ್ಧರಿಸಿದ್ದೆವು. ಫೋಟೋ ತೆಗೆದು ಅವರ ಬಡತನದ ಪ್ರದರ್ಶನ ಮಾಡುವುದು ಸರಿಯಲ್ಲ ಎನ್ನುತ್ತಾರೆ ಶ್ರೀಹರಿ.
-ಸಂದೀಪ್ ವಾಗ್ಲೆ