ಕೊರೋನಾ ವಿರುದ್ಧ ಜಾಗೃತಿಗಾಗಿ ಕರೆ ದೇಣಿಗೆ ಸ್ವೀಕಾರ!

By Kannadaprabha NewsFirst Published Apr 21, 2020, 8:04 AM IST
Highlights

ಕೊರೋನಾ ನಿರ್ಮೂಲನೆ ಕುರಿತ ಮೂರು ವಿಚಾರಗಳ ಬಗ್ಗೆ ಫೋನ್‌ನಲ್ಲೇ ಪ್ರತಿಜ್ಞೆ ಮಾಡುವುದಲ್ಲದೆ ಅದನ್ನು ಕಡ್ಡಾಯ ಪಾಲಿಸಬೇಕು ಎಂಬುದೇ ಇದರ ಒಳಗುಟ್ಟು. ಹೀಗೆ ಮಾಡಿದರೆ ಅದುವೇ ರಾಮಕೃಷ್ಣ ಮಠಕ್ಕೆ ನೀಡುವ ದೇಣಿಗೆ ಎಂದು ಭಾವಿಸಲಾಗುತ್ತದೆ.

ಮಂಗಳೂರು(ಏ.21): ಮಂಗಳೂರಿನ ರಾಮಕೃಷ್ಣ ಮಿಷನ್‌ ಕೊರೋನಾ ಜನ​ಜಾ​ಗೃ​ತಿ​ಗಾಗಿ ಹೊಸ ಸ್ವರೂಪದ ಅಭಿಯಾನಕ್ಕೆ ಮುಂದಡಿ ಇರಿಸಿದೆ. ಹೆಸರು ‘ಕರೆ ದೇಣಿಗೆ-ಸ್ವೀಕಾರ’. ಹಾಗೆಂದು ಕರೆ ಮಾಡಿ ದೇಣಿಗೆ(ಅನುದಾನ) ಪಡೆಯುವ ಅಭಿಯಾನ ಇ​ದಲ್ಲ. ಕೊರೋನಾ ನಿರ್ಮೂಲನೆ ಕುರಿತ ಮೂರು ವಿಚಾರಗಳ ಬಗ್ಗೆ ಫೋನ್‌ನಲ್ಲೇ ಪ್ರತಿಜ್ಞೆ ಮಾಡುವುದಲ್ಲದೆ ಅದನ್ನು ಕಡ್ಡಾಯ ಪಾಲಿಸಬೇಕು ಎಂಬುದೇ ಇದರ ಒಳಗುಟ್ಟು. ಹೀಗೆ ಮಾಡಿದರೆ ಅದುವೇ ರಾಮಕೃಷ್ಣ ಮಠಕ್ಕೆ ನೀಡುವ ದೇಣಿಗೆ ಎಂದು ಭಾವಿಸಲಾಗುತ್ತದೆ.

ಏನಿದು ಮೂರು ಸಂಕಲ್ಪ?:

Latest Videos

ರಸ್ತೆಗೆ ಬಂದು ಲಾಕ್‌ಡೌನ್‌ ಉಲ್ಲಂಘಿಸಬೇಡಿ, ಮನೆಯಲ್ಲೇ ಇದ್ದು ಆರಾಮವಾಗಿ ಇರಿ, ಅನಿವಾರ್ಯಕ್ಕೆ ಹೊರಗೆ ಬರುವುದಿದ್ದರೆ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿ. ಈ ಮೂರು ಅಂಶಗಳನ್ನು ಈಗಾಗಲೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ನೆರವಿನಲ್ಲಿ ರಾಮಕೃಷ್ಣ ಮಠದ ಆಶ್ರಯದಲ್ಲಿ ರಾಮಕೃಷ್ಣ ಮಿಷನ್‌ ಮಂಗಳೂರಿನಲ್ಲಿ ಧ್ವನಿವರ್ಧಕ ಹಾಗೂ ಕರಪತ್ರ ಮೂಲಕ ಜನತೆಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಸಿದೆ. ಆದರೆ ಈಗ ಲಾಕ್‌ಡೌನ್‌ ಕಟ್ಟುನಿಟ್ಟು ಜಾರಿಯಾಗಿರುವುದರಿಂದ ಮತ್ತೆ ಧ್ವನಿವರ್ಧಕ ಮೂಲಕ ಪ್ರಚಾರ ಅಥವಾ ಮನೆಗಳಿಗೆ ತೆರಳುವುದು ಸ್ವತಃ ಲಾಕ್‌ಡೌನ್‌ ಉಲ್ಲಂಘಿಸಿದಂತಾಗುತ್ತದೆ. ಈ ಕಾರಣಕ್ಕೆ ಮೊಬೈಲ್‌ ಫೋನ್‌ ಮೂಲಕವೇ ಮತ್ತಷ್ಟುಜಾಗೃತಿ ಮೂಡಿಸಲು ರಾಮಕೃಷ್ಣ ಮಿಷನ್‌ ನಿರ್ಧರಿಸಿದ್ದು, ಅದರ ಮೂರ್ತ ರೂಪವೇ ಕರೆ ದೇಣಿಗೆ ಸ್ವೀಕಾರ ಅಭಿಯಾನ.

ಕನಿಷ್ಠ 10 ಮಂದಿಗೆ ಕಾಲ್‌:

ಜಾಗೃತಿ ಮೂಡಿಸಲು ಪ್ರತಿಯೊಬ್ಬರು ತಮ್ಮ ಸಂಪರ್ಕದಲ್ಲಿರುವ ಕನಿಷ್ಠ 10 ಮಂದಿಗೆ ತಮ್ಮ ಮೊಬೈಲ್‌ನಿಂದ ಕರೆ ಮಾಡಬೇಕು. ಈ ವೇಳೆ ಮೂರು ಸಂಕಲ್ಪವನ್ನು ತಿಳಿಸಬೇಕು. ಬಳಿಕ ಆ 10 ಮಂದಿಯ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ರಾಮಕೃಷ್ಣ ಮಿಷನ್‌ಗೆ ನೀಡಬೇಕು. ಆ 10 ಮಂದಿ ಮತ್ತೆ ತಲಾ 10 ಮಂದಿಗೆ ಕರೆ ಮಾಡಿ ಅರಿವು ಮೂಡಿಸಬೇಕು. ಹೀಗೆ ಕೊರೋನಾ ವಿರುದ್ಧದ ಜಾಗೃತಿ ಅಭಿಯಾನ ಸಾಗುತ್ತಲೇ ಇರಬೇಕು. ಇಲ್ಲಿ ಯಾರ ಮೇಲೂ ಒತ್ತಡ ಹಾಕುವುದಿಲ್ಲ. ನಿಯಮಗಳನ್ನು ಪಾಲಿಸಿ ಎಂದಷ್ಟೇ ಹೇಳುತ್ತಾರೆ.

ಹೆತ್ತಮ್ಮನ ಕೊನೆ ಬಾರಿ ನೋಡಲು ಲಾಕ್‌ಡೌನ್ ಅಡ್ಡಿ: ಕಾರ್ಗಿಲ್‌ನಲ್ಲಿ ಯೋಧನ ಅಳಲು

ಕರೆ ಮಾಡಿದ ವ್ಯಕ್ತಿಗಳು ತಮಗೆ ನೀಡಿದ ಸಂಖ್ಯೆಗಳಿಗೆ ಮತ್ತೊಮ್ಮೆ ರಾಮಕೃಷ್ಣ ಮಿಷನ್‌ನಿಂದ ಕರೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಮುಂದುವರಿಸುತ್ತಾರೆ. 10 ಮಂದಿಯ ಸಂಪರ್ಕವನ್ನು ರಾಮಕೃಷ್ಣ ಮಿಷನ್‌ಗೆ ನೀಡುವುದೇ ರಾಮಕೃಷ್ಣ ಮಠಕ್ಕೆ ಸಲ್ಲಿಸುವ ಕರೆ ದೇಣಿಗೆ ಸ್ವೀಕಾರ. ಇದನ್ನು ಜಿಲ್ಲಾದ್ಯಂತ ವಿಸ್ತರಿಸುವ ಇರಾದೆಯನ್ನು ರಾಮಕೃಷ್ಣ ಮಿಷನ್‌ ಹೊಂದಿದೆ.

ಲಾಕ್‌ಡೌನ್‌ ಸಡಿಲ ಇಲ್ಲ: ರಾಜ್ಯ ಸರ್ಕಾರದಿಂದ ಕಠಿಣ ತೀರ್ಮಾನ!

ಕೊರೋನಾ ತನಗೆ ಬರುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಹೊರಗೆ ಹೋದರೆ ಏನಾಗುತ್ತದೆ ಎಂಬ ಧಿಮಾಕು ಬೇಡ. ತುರ್ತು ಸಂದರ್ಭ ಇದ್ದರೆ ಮಾತ್ರ ಮಾಸ್ಕ್‌ ಧರಿಸಿಕೊಂಡು ಅಂತರ ಕಾಯ್ದುಕೊಂಡು ಹೊರಗೆ ತೆರಳಬೇಕು. ಇದಕ್ಕಾಗಿಯೇ ಕರೆ ದೇಣಿಗೆ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನತೆ ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಿದ್ದಾರೆ. ಇದು ಸಹಸ್ರಾರು ಸಂಖ್ಯೆಯಲ್ಲಿ ನಡೆದಾಗ ಮಾತ್ರ ಕೊರೋನಾ ಜಾಗೃತಿ ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಏಕಗಮ್ಯಾನಂದ ತಿಳಿಸಿದ್ದಾರೆ.

-ಆತ್ಮಭೂಷಣ್‌

click me!