ಪೊಲೀಸ್ ಪೇದೆಯೋರ್ವರು ಕೊರೋನಾದಿಂದ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಕೊಪ್ಪಳ (ಸೆ.04): ನಗರ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಕಾನ್‌ಸ್ಟೇಬಲ್ ರಾಮಣ್ಣ ಬುಧವಾರ ರಾತ್ರಿ ಕೋವಿಡ್‌ಗೆ ಬಲಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಸಂಬಂಧಿಕರು ತಡ ರಾತ್ರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಡಾ. ವೀರೇಶ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ವೈದ್ಯರು ಮತ್ತು ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ದಿಢೀರ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ರಾಮಣ್ಣ ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ಮೃತರಾಗಿದ್ದಾರೆ. ಈ ವಿಷಯವನ್ನು ತಕ್ಷಣ ಅವರ ಸಂಬಂಧಿಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಅವರು ನೀಡಿದ್ದ ಮೋಬೈಲ್ ನಂಬರಿಗೆ ಹಲವಾರು ಬಾರಿ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ವೈದ್ಯರ ವಾದ. ಆದರೆ ನಮಗೆ ಈ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಇಲ್ಲಿಗೆ ಬಂದ ಮೇಲೆಯೇ ಪೊಲೀಸ್ ಸಾವಿಗೀಡಾಗಿದ್ದು ನಮಗೆ ಗೊತ್ತಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಅದನ್ನು ಮುಚ್ಚಿಕೊಳ್ಳುವ ಸಲುವಾಗಿಯೇ ಮಾಹಿತಿ ನೀಡಲಿಲ್ಲ ಎಂದು ಆತನ ಸಂಬಂಧಿಕರು ಆರೋಪಿಸಿ ವೈದ್ಯರ ಮೇಲೆ ಹರಿಹಾಯ್ದರು. ಈ ವೇಳೆ ತಳ್ಳಾಟ, ನೂಕಟ ಸಹ ನಡೆದಿದ್ದು, ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆಯಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೊನೆಯ ಅನ್‌ಲಾಕ್‌ಗೆ ಸರ್ಕಾರ ಸಿದ್ಧ, ದಿನದ ಕೊರೋನಾ 8865! .
ಈ ರೀತಿ ಗಲಾಟೆಯಾಗಿ ವೈದ್ಯರ ಮೇಲೆ ಹಲ್ಲೆಯಾದರೂ ಸಹ ಸ್ಥಳದಲ್ಲೇ ಇದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ವೈದ್ಯರ ರಕ್ಷಣೆಗೆ ಸಹ ಬರಲಿಲ್ಲ ಎನ್ನುವುದು ವೈದ್ಯರ ಆರೋಪ. ಘಟನೆಯಿಂದ ಸಿಟ್ಟಿಗೆದ್ದ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ದಿಢೀರ ಪ್ರತಿಭಟನೆ ನಡೆಸಿ ವೈದ್ಯರ ಮೇಲೆ ಹಲ್ಲೆ ಆದರೂ ಪೊಲೀಸರು ರಕ್ಷಣೆ ನೀಡಲಿಲ್ಲ. ಈ ರೀತಿ ಆದರೆ ಕರ್ತವ್ಯ ನಿರ್ವಹಿಸುವುದು ಹೇಗೆಂದು ಪ್ರಶ್ನಿಸಿ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಕಾಸ್‌ಕಿಶೋರ್ ಸುರಳ್ಕರ್ ಅವರು ಘಟನೆಯ ಮಾಹಿತಿ ಪಡೆದು, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವೈದ್ಯರ ಮೇಲೆ ಹಲ್ಲೆ ಮಾಡಿದರೂ ಸ್ಥಳದಲ್ಲಿಯೇ ಇದ್ದ ವೈದ್ಯರ ರಕ್ಷಣೆಗೆ ಬಾರದಿರುವ ಹಿನ್ನೆಲೆಯಲ್ಲಿ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕೆಂದು ವೈದ್ಯರು ಹಾಗೂ ಸಿಬ್ಬಂದಿ ಆಗ್ರಹಿಸಿದರು.
ಘಟನೆಯ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಓರ್ವನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಲ್ಲೆಗೊಳಗಾದ ವೈದ್ಯ ಡಾ. ವೀರೇಶ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ವಿಜಯ ಚಲುವಾದಿ ಎಂಬವರನ್ನು ಬಂಧಿಸಿ ನ್ಯಾಯಂಗ ವಶಕ್ಕೆ ನೀಡಲಾಗಿದೆ. ವೈದ್ಯರ ವಿರುದ್ಧ ಯಾರೂ ದೂರು ನೀಡಿಲ್ಲ. ಹಲ್ಲೆ ಮಾಡಿದ ಆರೋಪದಡಿ ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.