ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಸಚಿವ ಆರಗ ಜ್ಞಾನೇಂದ್ರ ಭೇಟಿ

By Suvarna NewsFirst Published Jan 1, 2022, 3:33 PM IST
Highlights

ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ನಡೆದಿತ್ತು. 
 

ಉಡುಪಿ (ಜ. 1): ಮದುವೆ ಮನೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಭೇಟಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ಕೊರಗ ಸಮುದಾಯದ (Koraga Community) ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ನಡೆದಿತ್ತು. 

ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸುತ್ತೇವೆ. ಸಿಐಡಿ ಸಂಸ್ಥೆಯ ಮೂಲಕ ಸಮಗ್ರ ತನಿಖೆ ಮಾಡುತ್ತೇವೆ. ಪೊಲೀಸ್ ಪ್ರತಿ ದೂರಿನ ಬಗ್ಗೆ ಚರ್ಚೆ ಮಾಡುತ್ತೇವೆ. ಸಂತ್ರಸ್ತ ಸಮುದಾಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಸರಕಾರ ಕೊರಗ ಕುಟುಂಬದ ಜೊತೆ ಇದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಹಾಗೂ ಸಂತ್ರಸ್ತ 6 ಕುಟುಂಬಕ್ಕೆ 50 ಸಾವಿರ ಚೆಕ್‌ನ್ನು ಈ ವೇಳೆ ಆರಗ ಜ್ಞಾನೇಂದ್ರ  ಹಸ್ತಾಂತರಿಸಿದರು. ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಉಪಸ್ಥಿತರಿದ್ದರು.

ನಿಂದಿಸಿದ ಸವಾರನಿಗೆ ಬಿತ್ತು ಟ್ರಾಫಿಕ್ ಪೊಲೀಸರಿಂದ ಗೂಸಾ

ಏನಿದು ಘಟನೆ: ಕೊರಗ ಸಮುದಾಯದ ಯುವಕನ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ್ದನ್ನು ಆಕ್ಷೇಪಿಸಿ ಮದುಮಗನೂ ಸೇರಿದಂತೆ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಕೊರಗ ಸಮುದಾಯದವರ ಮೇಲೆ ಪೊಲೀಸರು(Police) ಮನಬಂದಂತೆ ಥಳಿಸಿದ ಘಟನೆ ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಾದ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಸೋಮವಾರ ತಡರಾತ್ರಿ ನಡೆದಿತ್ತು. ಘಟನೆಯಲ್ಲಿ ಮದುಮಗ ರಾಜೇಶ್‌, ಕೊರಗ ಸಮುದಾಯದ ಮುಖಂಡ ಗಣೇಶ್‌ ಕೊರಗ, ಸುಂದರಿ, ಲಕ್ಷ್ಮೇ, ಬೇಬಿ, 12 ವರ್ಷ ಪ್ರಾಯದ ಬಾಲಕಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್‌, ಶೇಖರ್‌ ಮೊದಲಾದವರಿಗೆ ಕೈ, ಕಾಲು, ತಲೆ, ಕುತ್ತಿಗೆ ಮೊದಲಾದೆಡೆ ಗಾಯಗಳಾಗಿವೆ.

ಸೋಮವಾರ ರಾತ್ರಿ ನಡೆದಿದ್ದೇನು?: ಕೋಟತಟ್ಟು ಪ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ರಾಜೇಶ್‌ ಎನ್ನುವವರ ಮದುವೆ ಡಿ.29ಕ್ಕೆ ಕುಮಟಾದಲ್ಲಿ ನಡೆಯಲಿದ್ದು, ಸೋಮವಾರ ಮನೆಯಲ್ಲಿಯೇ ಅದ್ದೂರಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೊಲೀಸ್‌ ಆಗಮಿಸಿ ಡಿಜೆ ತೆಗೆಯುವಂತೆ ಸೂಚಿಸಿದ್ದು, ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್‌ಐ ಸಂತೋಷ್‌ ಬಿ.ಪಿ ಹಾಗೂ ಇತರ ಕೆಲ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ. ಈ ವೇಳೆಯಲ್ಲಿ ತಪ್ಪಿಸಲು ಹೋದ ಮಹಿಳೆಯರ ಮೇಲೂ ಥಳಿಸಿದ ಪೊಲೀಸರು, ವಿಡಿಯೋ ಚಿತ್ರೀಕರಣ ಮಾಡಿದವರ ಮೊಬೈಲ್‌ ಕಸಿದುಕೊಂಡು ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

Police Brutality: ಕೊರಗರ ಮದುವೆಗೆ ನುಗ್ಗಿ ಪೊಲೀಸ್‌ ದಾಂಧಲೆ: ಮಹಿಳೆಯರ ಮೇಲೂ ಮನಬಂದಂತೆ ಥಳಿತ

ಮೂತ್ರ ವಿಸರ್ಜನೆಗೆ ತೆರಳಿದ್ದ ಮಹಿಳೆಯರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ಕೊರಗ ಮುಖಂಡ ಗಣೇಶ್‌ ಬಾರಕೂರು ಸೇರಿದಂತೆ ನಾಲ್ಕೈದು ಕೊರಗ ಸಮುದಾಯದ ಯುವಕರನ್ನು ಠಾಣೆಗೆ ಕರೆದೊಯ್ದು ಶರ್ಟ್‌ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದುಮಗನ ಅಣ್ಣ ಗಿರೀಶ್‌, ಸುದರ್ಶನ ಹಾಗೂ ಸಚಿನ್‌ ಎನ್ನುವವರನ್ನು ಕೂಡ ಠಾಣೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ. ಈ ಬಗ್ಗೆ ಗಣೇಶ್‌ ಕೊರಗ ಪ್ರತಿಕ್ರಿಯೆ ನೀಡಿ, ಡಿಜೆ ಶಬ್ದ ಕಡಿಮೆ ಮಾಡಲು ಹೇಳಿ ತೆರಳುವಾಗಲೇ ಏಳೆಂಟು ಮಂದಿ ಪೊಲೀಸರು ಬಂದು ಏಕಾಏಕಿ ಜೀಪಿಗೆ ಎಳೆದೊಯ್ದರು. ಬಾಯಿಗೆ ಬಂದಂತೆ ಅವ್ಯಾಚವಾಗಿ ಬೈದರು. ಹೆಂಗಸರು, ಮಕ್ಕಳು, ವೃದ್ಧರು ಎಂದು ನೋಡದೆ ಹಲ್ಲೆ ಮಾಡಿದ್ದಾರೆ. ಕೊರಗ ಚಳವಳಿಯ ನನ್ನ ಸುದೀರ್ಘ ಜೀವನದಲ್ಲಿ ಪೊಲೀಸರಿಂದ ಈ ರೀತಿಯಾಗಿ ಅಮಾನವೀಯ ಹಲ್ಲೆ ನಾನು ಇದುವರೆಗೂ ಕಂಡಿಲ್ಲ ಎಂದು ಹೇಳಿದ್ದಾರೆ.

click me!