ಬೆಳಗಾವಿ: ಬಾಡೂಟಕ್ಕೆ ಕರೆಯದಕ್ಕೆ ಹೀಗ್ ಮಾಡೋದಾ?

By Kannadaprabha NewsFirst Published Feb 29, 2020, 9:50 AM IST
Highlights

ಬೆಳಗಾವಿಯ ಹನುಮಾನವಾಡಿಯ ರಾಜಾರಾಮ ಕೃಷ್ಣ ಸುತಾರ ಮನೆಯಲ್ಲಿ ನಡೆದ ಘಟನೆ| ಬಾಡೂಟಕ್ಕೆ ಕರೆದಿಲ್ಲವೆಂದು ಮನೆಗೆ ಕನ್ನ: ಇಬ್ಬರ ಸೆರೆ| ತಲೆಮರೆಸಿಕೊಂಡಿರುವ ಇನ್ನಿಬ್ಬಗಾಗಿ ಜಾಲ ಬೀಸಿದ ಪೊಲೀಸರು| 

ಬೆಳಗಾವಿ(ಫೆ.29): ಕೆಲಸ ಮಾಡಿಸಿಕೊಂಡು ಬಾಡೂಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮನೆಗೆ ನುಗ್ಗಿ ಕಳ್ಳತನ ಮಾಡಿದ ನಾಲ್ಕು ಜನರ ಪೈಕಿ ಇಬ್ಬರನ್ನು ಬಂಧಿಸಿ ಅವರಿಂದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. 

ಬೆಳಗಾವಿ ಉದ್ಯಮಬಾಗ ಪ್ರದೇಶದ ರಾಜಾರಾಮ ನಗರದ ಈಶ್ವರ ಶಿವರಾಯಪ್ಪ ಉದಗಟ್ಟಿ (28) ಹಾಗೂ ವಡಗಾಂವಿ ದತ್ತ ಗಲ್ಲಿಯ ಸಂತೋಷ ವಸಂತ ಬೇಟಗೇರಿ (37) ಬಂಧಿತ ಆರೋಪಿಗಳು. ಹನುಮಾನವಾಡಿಯ ರಾಜಾರಾಮ ಕೃಷ್ಣ ಸುತಾರ ಎಂಬುವರ ಮನೆಯಲ್ಲಿ ಫೆ.24 ರಂದು ಕಳ್ಳತನ ನಡೆದಿತ್ತು. ಈ ಕುರಿತು ರಾಜರಾಮ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ದೂರಿನನ್ವಯ ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಬಂಧಿತ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಜರಾಮ ತಮ್ಮಿಂದ ಕೆಲಸ ಮಾಡಿಸಿಕೊಂಡು ನಂತರ ಬಾಡೂಟಕ್ಕೆ ಕರೆಯದ ಹಿನ್ನೆಲೆಯಲ್ಲಿ ಅಸಮಾಧಾನ ಉಂಟಾಗಿತ್ತು. ಇದರಿಂದಾಗಿ ರಾಜಾರಾಮ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮನೆಯಲ್ಲಿ ವಿವಿಧ ಆರಭಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ತಮ್ಮೊಂದಿಗೆ ಇನ್ನಿಬ್ಬರು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

ಬಂಧಿತರಿಂದ 1.5 ಲಕ್ಷ ಮೌಲ್ಯದ ಚಿನ್ನದ ಮಂಗಳಸೂತ್ರ, ಕಿವಿಯೋಲೆ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬಗಾಗಿ ಪೊಲೀಸರು ಜಾಲ ಬೀಸಿದ್ದಾರೆ. 

ಖಡೇಬಜಾರ ಎಸಿಪಿ ಎ. ಚಂದ್ರಪ್ಪ ಮಾರ್ಗದರ್ಶ ನದಲ್ಲಿ ಉದ್ಯಮಬಾಗ ಠಾಣೆಯ ಪೊಲೀಸ್ ಇನ್ಸಸ್ಪೆಕ್ಟರ್ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿ ಕಾಂತೇಶ ಸವದತ್ತಿ, ತವನಪ್ಪ ಕುಂಚನೂ ರ, ಮಾಳಪ್ಪ ಪೂಜಾರಿ, ಶಶಿಕುಮಾರ ಗೌಡರ, ಜಗದೀಶ ಹಾದಿಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಈ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ ಶ್ಲಾಘಿಸಿದ್ದಾರೆ.
 

click me!