ಗ್ರಾಮ ಪಂಚಾಯಿತಿ ಪೂರೈಸೋ ಕುಡಿಯೋ ನೀರಿನ ಟ್ಯಾಂಕ್‌ನಲ್ಲೇ ವಿಷ..!

By Kannadaprabha News  |  First Published Dec 14, 2019, 9:48 AM IST

ಶಿಬಾಜೆ ಪೆರ್ಲ ಸರಕಾರಿ ಉ.ಹಿ.ಪ್ರಾ. ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡಿರುವ ಪ್ರಕರಣದ ಬೆನ್ನಲ್ಲೇ ಶಿಬಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಟ್ಯಾಂಕ್‌ಗೂ ವಿಷ ಬೆರೆಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.


ಮಂಗಳೂರು(ಡಿ.14): ಶಿಬಾಜೆ ಪೆರ್ಲ ಸರಕಾರಿ ಉ.ಹಿ.ಪ್ರಾ. ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡಿರುವ ಪ್ರಕರಣದ ಬೆನ್ನಲ್ಲೇ ಶಿಬಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಟ್ಯಾಂಕ್‌ಗೂ ವಿಷ ಬೆರೆಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ ಪೆರ್ಲ ಸಮೀಪದ ಬಟ್ಟಾಜೆ ಎಂಬಲ್ಲಿ ಕಪಿಲಾ ನದಿಯ ದಡದಲ್ಲಿ ಶಿಬಾಜೆ ಗ್ರಾಪಂ ವತಿಯಿಂದ ಕುಡಿಯುವ ನೀರಿಗಾಗಿ ನಿರ್ಮಾಣವಾಗಿರುವ ಟ್ಯಾಂಕ್‌ಗೂ ವಿಷ ಬೆರೆಸಲಾಗಿದೆ. ನದಿ ದಡದಲ್ಲಿರುವ ಈ ಬೃಹತ್‌ ಟ್ಯಾಂಕ್‌ನಿಂದ ಪಂಪ್‌ ಮೂಲಕ ನೀರು ಲಿಫ್ಟ್‌ ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್‌ಗೆ ತುಂಬಿಸಲಾಗುತ್ತದೆ. ಈ ಟ್ಯಾಂಕ್‌ನಿಂದ ಪೆರ್ಲ ಸರಕಾರಿ ಹಿ.ಪ್ರಾ.ಶಾಲೆ ಸೇರಿದಂತೆ ಸುತ್ತಲಿನ ಸುಮಾರು 70 ಮನೆಗಳಿಗೆ ನೀರು ಪೂರೈಕೆಯಾಗುತ್ತದೆ.

Latest Videos

undefined

 

ಶುಕ್ರವಾರ ಬೆಳಗ್ಗೆ ಟ್ಯಾಂಕ್‌ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವ ಬಗ್ಗೆ ನೀರು ನಿರ್ವಾಹಕ ನಾರಾಯಣ ಪೂಜಾರಿ ಅವರ ಗಮನಕ್ಕೆ ಬಂದಿದ್ದು ಅವರು ಟ್ಯಾಂಕ್‌ನ ನೀರನ್ನು ಪರಿಶೀಲನೆ ನಡೆಸಿದಾಗ ಟ್ಯಾಂಕ್‌ನ ನೀರು ವಾಸನೆ ಹಾಗೂ ನೊಣಗಳು ತುಂಬಿರುವುದು ಕಂಡು ಬಂದಿದೆ.

ಬಳಿಕ ಅವರು ಕಪಿಲಾ ನದಿದಡದಲ್ಲಿ ಪಂಪ್‌ ಅಳವಡಿಸಿದ ಟ್ಯಾಂಕ್‌ನ್ನು ಪರಿಶೀಲಿಸಿದಾಗ ಅದರೊಳಗೆ ಮೀನುಗಳು ಸತ್ತುಬಿದ್ದಿರುವುದು ಕಂಡು ಬಂದಿದೆ. ಅಲ್ಲದೇ ಟ್ಯಾಂಕ್‌ನ ನೀರಿನ ಬಣ್ಣವೂ ಬದಲಾಗಿದ್ದು, ನೊಣಗಳು ಹಾರುತ್ತಿರುವುದು ಕಂಡು ಬಂದಿದೆ. ನದಿಯಲ್ಲಿ ಟ್ಯಾಂಕ್‌ಗೆ ಬರುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಕಂಡುಬಂದಿದ್ದು ಮತ್ತು ಕೆಲವರು ಓಡಾಡಿರುವ ಹೆಜ್ಜೆ ಗುರುತು ಕಂಡುಬಂದಿದೆ. ಮನೆಗಳಿಗೆ ಬಳಸುವ ಟ್ಯಾಂಕ್‌ಗೂ ವಿಷಬೆರೆಸಿರುವ ಪ್ರಕರಣ ನಡೆದಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

 

ಘಟನಾ ಸ್ಥಳಕ್ಕೆ ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಸದಸ್ಯ ರಮೇಶ್‌ ಗೌಡ ಕುರುಂಜ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ವೃತ್ತ ನಿರೀಕ್ಷಕ ಸಂದೇಶ್‌, ಧರ್ಮಸ್ಥಳ ಠಾಣಾ ಎಸ್‌ಐ ಓಡಿಯಪ್ಪ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!