
ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರೇಮಿಗಳ ಜೋಡಿ ಲಾಡ್ಜ್‌ನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಪರಿಣಾಮವಾಗಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರೂ ಜೀವ ಕಳೆದುಕೊಂಡಿದ್ದಾರೆ.
ಮೃತ ಪ್ರೇಮಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಸ್ಪಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಎನ್ನಲಾಗಿದೆ. ಇವರಿಬ್ಬರಿಗೂ ಹಲವು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಮನೆಯವರಿಂದ ಈ ಸಂಬಂಧಕ್ಕೆ ಒಪ್ಪಿಗೆ ಸಿಗದ ಹಿನ್ನೆಲೆ ಸಾವಿನ ನಿರ್ಧಾರ ಕೈಗೊಂಡರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇಂದು ಮಧ್ಯಾಹ್ನ ಇಬ್ಬರೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಿಚನ್ 6 ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದ ಮೂರನೇ ಮಹಡಿಯಲ್ಲಿ ಇರುವ ಲಾಡ್ಜ್‌ಗೆ ಬಂದಿದ್ದರು. ಲಾಡ್ಜ್‌ನಲ್ಲಿ ಕೊಠಡಿ ಪಡೆದ ಕೆಲವೇ ಸಮಯದಲ್ಲಿ, ಪೆಟ್ರೋಲ್ ತಂದು ತಮ್ಮ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಯುವಕ ಮತ್ತು ಯುವತಿ ಚೀರಾಡಿದ ಧ್ವನಿ ಕೇಳಿ ಲಾಡ್ಜ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಕ್ಷಿಪ್ರವಾಗಿ ಆಗಮಿಸಿ ಬೆಂಕಿ ನಿಯಂತ್ರಣಕ್ಕೆ ಮುಂದಾದರು. ಲ್ಯಾಡರ್ ಮೂಲಕ ಮೂರನೇ ಮಹಡಿಗೆ ಏರಿ, ಒಳಗೆ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಪ್ರಯತ್ನಿಸಲಾಯಿತು. ಆದರೆ ಆಗಾಗಲೇ ಬೆಂಕಿ ವ್ಯಾಪಕವಾಗಿ ಹರಡಿದ್ದರಿಂದ ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಲಾಡ್ಜ್ ಒಳಗಡೆ ದಟ್ಟ ಹೊಗೆ ವ್ಯಾಪಿಸಿ, ರೆಸ್ಟೋರೆಂಟ್‌ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರನ್ನೂ ಕೂಡ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಅಗ್ನಿಶಾಮಕ ದಳ ಬೆಂಕಿ ಸಂಪೂರ್ಣ ನಂದಿಸುವ ಕಾರ್ಯಾಚರಣೆ ಮುಂದುವರೆಸಿದೆ.
ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಹಿನ್ನೆಲೆ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಪ್ರೇಮಿಗಳ ಆತ್ಮಹತ್ಯೆಯ ಘಟನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೃತ ದೇಹಗಳನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.