
ಕೊಡಗು (ಆ.06): ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ. ಇದನ್ನು ತಪ್ಪು ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳುವ ಮೂಲಕ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ನಾಗೇಂದ್ರ ಅವರಿಗೆ ಸಚಿವಸ್ಥಾನ ಕೊಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ನದ್ದು ಸೂಟ್ ಕೇಸ್ ಕ್ಯಾಬಿನೆಟ್ ಎಂದು ಬಿಜೆಪಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ನಾನು ಸಿದ್ಧಾಂತಕ್ಕೆ ಅಂಟಿಕೊಂಡಿರುವವ.
ನಾನು ಎನ್ಎಸ್ಯುಐನಿಂದ ಬಂದವನು. ಮೂರು ಬಾರಿ ಸೋತು, ಮೂರು ಬಾರಿ ಶಾಸಕನಾದವನು. 2023 ರಲ್ಲಿಯೇ ನನಗೆ ಸಚಿವಸ್ಥಾನ ಕೊಡುವುದಕ್ಕೆ ನನ್ನ ಹೆಸರಿತ್ತು. ಆದರೆ ಕಾರಣಾಂತರಗಳಿಂದ ನನ್ನ ಹೆಸರನ್ನು ಬಿಡಲಾಯಿತು. ಆಗ ನಾನು ಸಮಾಧಾನದಿಂದ ಇದ್ದೆ ಅಲ್ವಾ..? ಆದರೆ ಈಗ ಗುರುತಿಸಿ ಸ್ಥಾನಮಾನ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಸಮರ್ಥರೇ ಇದ್ದಾರೆ. ಆದರೆ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಅಷ್ಟೇ ಎಂದು ಕೊಡಗಿನ ತಲಕಾವೇರಿಯಲ್ಲಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ.
ಸಚಿವ ಸ್ಥಾನ ತಪ್ಪಿರುವುದನ್ನ ಖಂಡಿಸಿ ಹಲವೆಡೆ ಹೋರಾಟ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಒಂದೇ ತಂದೆ, ತಾಯಿಗೆ ಹುಟ್ಟಿದ ಮಕ್ಕಳೇ ಸಿಹಿ ಹಂಚಿದಾಗಲೋ ಅಥವಾ ಏನಾದರೂ ತಿಂಡಿ ಕೊಟ್ಟಾಗಲೋ ಕಿತ್ತಾಡುವುದು, ಮುನಿಸು ಬರುವುದು ಸಹಜ ಅಲ್ಲವೆ. ಅದೇ ರೀತಿ ಸಚಿವ ಸ್ಥಾನ ಸಿಗದಿದ್ದಾಗಲೂ ಆಗಿದೆ ಅಷ್ಟೇ ಎಂದು ಸಚಿವ ನರೇಂದ್ರಸ್ವಾಮಿ ಹೇಳಿದ್ದಾರೆ. ಒಂದೇ ತಂದೆ ತಾಯಿಗೆ ಹುಟ್ಟಿದ ಮಕ್ಕಳೇ ಮನೆಯಲ್ಲಿ ಕಿತ್ತಾಡುತ್ತಾರೆ. ಕಾಂಗ್ರೆಸ್ ಕೂಡ ಒಂದು ಮನೆ ಇದ್ದಂತೆ ಅಸಮಧಾನ ಬರುತ್ತೆ ಹೋಗುತ್ತದೆ. ಸಹಜವಾಗಿ ಎಲ್ಲರೂ ಆಕಾಂಕ್ಷಿಗಳು ಆಗಿದ್ದವರು. ಆದರೆ ಎಲ್ಲರಿಗೂ ಸಚಿವ ಸಿಗಲು ಸಾಧ್ಯವಿಲ್ಲ ಅಲ್ಲವೇ. ಏನೇ ಸಮಸ್ಯೆಗಳಿದ್ದರೂ ಅದೆಲ್ಲವೂ ಇಂದು ಸಂಜೆ ಒಳಗೆ ಬಗೆಹರಿಯುತ್ತದೆ ಎಂದು ಪಿ ಎಂ ನರೇಂದ್ರ ಸ್ವಾಮಿ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯರಿಗೂ ಸಚಿವ ಸ್ಥಾನ ಕೊಡದಿರುವುದಕ್ಕೆ ಇದೊಂದು ಮಹಿಳಾ ವಿರೋಧಿ ಸರ್ಕಾರ ಎಂದು ಬಿಜೆಪಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನೀಟ್ ಹೋರಾಟದ ವಿಚಾರದಲ್ಲಿ ಇವರು ಮಾತಾಡಲಿಲ್ಲ.
ದೆಹಲಿಯಲ್ಲಿ ಅಷ್ಟೊಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರು, ಇವರು ಸುಮ್ಮನಿದ್ದರು. ಅಲ್ಲಿ ಅಷ್ಟೊಂದು ಹೆಣ್ಣುಮಕ್ಕಳಿಗೆ ಲಾಠಿ ಚಾರ್ಜ್ ಮಾಡಿ ನಿರ್ಧಯವಾಗಿ ನಡೆದುಕೊಂಡರು. ಲಾಠಿಗೆ ಮೊಳೆ ಹೊಡೆದುಕೊಂಡು ಪ್ರತಿಭಟನಾನಿರತ ಹೆಣ್ಣು ಮಕ್ಕಳಿಗೆ ಹೊಡೆದರು. ಇಂತಹವರಿಂದ ಮಹಿಳಾ ಸ್ಥಾನಮಾನದ ಬಗ್ಗೆ ಪಾಠ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಸಂಪುಟದಲ್ಲಿ & ಇತರೆಡೆ ಸ್ಥಾನಮಾನ ಕೊಟ್ಟೇ ಕೊಡುತ್ತದೆ. ಕಾಂಗ್ರೆಸ್ ಈಗಾಗಲೇ ಜಾರಿ ಮಾಡಿರುವ ಎಲ್ಲಾ ಕಾರ್ಯಕ್ರಮಗಳು ಮಹಿಳೆಯರ ಪರವಾಗಿವೆ ಎಂದು ಸಚಿವ ಪಿ ಎಂ ನರೇಂದ್ರಸ್ವಾಮಿ ಹೇಳಿದರು.
ಎಲ್ಲದಕ್ಕೂ ಮುಂಚಿತವಾಗಿ ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ತ್ರಿವೇಣಿ ಸಂಗಮಕ್ಕೆ ಭೇಟಿ ವೀಕ್ಷಿಸಿ ಬಳಿಕ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಂಡ್ಯದವನಾಗಿ ಕಾವೇರಿ ಮಾತೆಗೆ ಮೊದಲು ನಮಿಸುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ತಲಕಾವೇರಿಗೆ ಬಂದು ತಾಯಿಗೆ ನಮಿಸಿದ್ದೇನೆ ಎಂದು ಬರ, ನೆರೆ ವೀಕ್ಷಣೆ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.
ನಾಡಿನಲ್ಲಿ ಬರ ಬರಬಹುದು ಎಂಬ ಭಯ ಇಡೀ ನಾಡನ್ನು ಕಾಡಿತ್ತು. ನಾಡಿಗೆ ಜೀವಜಲ ಒದಗಿಸುವ ತಾಯಿ ಕಾವೇರಿ ವರ ನೀಡಿದ್ದಾಳೆ. ಕಾವೇರಿ ಕೃಪೆ ತೋರಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ತಾಯಿಗೆ ನಮಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಕಾವೇರಿ ರಾಜ್ಯ ಮಾತ್ರವಲ್ಲದೆ, ನೆರೆ ರಾಜ್ಯದ ದಾಹವನ್ನು ತಣಿಸುವ ಮಾತೆ. ಬರ ಅಥವಾ ನೆರೆ ವೀಕ್ಷಿಸಿ ವರದಿ ನೀಡುವಂತೆ ಸಿಎಂ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದವನು ಭಾಗಮಂಡಲ ಮತ್ತು ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.