
ಬೆಂಗಳೂರು (ಜ.21): ‘ನವ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗಾಗಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯುವಕರು ಸನ್ನದ್ಧರಾಗಬೇಕು. ಪರೀಕ್ಷೆಗಳಿಗೆ ಹೆದರದೆ, ಸವಾಲಾಗಿ ಸ್ವೀಕರಿಸಲು ಸಿದ್ಧರಾಗಬೇಕು’ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರಾಜೀವ್ ಚಂದ್ರಶೇಖರ್ ಮಕ್ಕಳಿಗೆ ಕರೆ ನೀಡಿದ್ದಾರೆ. ಶುಕ್ರವಾರ ಬೆಂಗಳೂರಿನ ಉತ್ತರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಪರೀಕ್ಷಾ ಪೇ ಚರ್ಚೆ’ ಹಾಗೂ ‘ಪರೀಕ್ಷಾ ಯೋಧ’ (ಎಕ್ಸಾಂ ವಾರಿಯರ್) ವಿಷಯಗಳ ಕುರಿತು ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿಗಳು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ರೂಪಿಸಿದ್ದಾರೆ. ಇದರ ಮೂಲಕ ಪರೀಕ್ಷೆಯ ಒತ್ತಡ ಹೇಗೆ ನಿಭಾಯಿಸಬೇಕು, ಪರೀಕ್ಷೆ ಹೇಗೆ ಎದುರಿಸಬೇಕು ಎಂದು ಮಕ್ಕಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಇದರ ಭಾಗವಾಗಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಾದ ಜಯಾ ಜಗದೀಶ್, ಅಪ್ರಮೇಯ ರಾಧಾಕೃಷ್ಣನ್, ನಿವೃತಿ ರಾಯ್‌ರಂತಹ ಮಾದರಿ ವ್ಯಕ್ತಿಗಳು ಮಕ್ಕಳಿಗೆ ಪರೀಕ್ಷೆ ಎದುರಿಸುವ ಧೈರ್ಯ ತುಂಬಿದ್ದಾರೆ. ಈ ವೇಳೆ ಮಕ್ಕಳು ತೋರಿದ ಜೋಶ್ ಖುಷಿ ಕೊಟ್ಟಿದೆ ಎಂದು ಹೇಳಿದರು. ಇನ್ನು ನವ ಭಾರತದಲ್ಲಿ ಪ್ರಧಾನಿಗಳು ಯುವಕರಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯುವಕರು ಸಿದ್ಧರಾಗಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಮಕ್ಕಳು ಒತ್ತಡಕ್ಕೆ ಸಿಲುಕಬಾರದು ಎಂಬುದು ಪ್ರಧಾನಮಂತ್ರಿಗಳ ಉದ್ದೇಶ ಎಂದರು.
ಕಾನೂನು ಪಾಲಿಸಿದರೆ ಕ್ರಿಪ್ಟೊ ಕರೆನ್ಸಿಯಿಂದ ಸಮಸ್ಯೆಯಿಲ್ಲ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಮಕ್ಕಳ ಚಿತ್ರ ಮೋದಿಗೆ: ಇದೇ ವೇಳೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಕಲಾಕೃತಿಗಳನ್ನು ಸಂಗ್ರಹಿಸಿದ ರಾಜೀವ್ ಚಂದ್ರಶೇಖರ್ ಅವರು ಇವುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದರು. ಜತೆಗೆ ಜ.27 ರಂದು ನಡೆಯಲಿರುವ ಪರೀಕ್ಷಾ ಪೇ ಚರ್ಚೆಗೆ ಆಯ್ಕೆಯಾಗಿರುವ ಶಾಲೆಯ ಐದು ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇದೇ ವೇಳೆ ಪ್ರಥಮ ಮೂರು ಸ್ಥಾನ ಹಾಗೂ ಮೂರು ಸಮಾಧಾನಕರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಉಡುಗೊರೆ ವಿತರಿಸಲಾಯಿತು. ದೊಡ್ಡಕಲ್ಲಸಂದ್ರ ಸರ್ಕಾರಿ ಶಾಲೆಯ ವಿಜಯಲಕ್ಷ್ಮಿ, ರಘುವನಹಳ್ಳಿ ಶಾಯ ಸತ್ಯೇಂದರ್, ದೊಡ್ಡಕಲ್ಲಸಂದ್ರ ಸರ್ಕಾರಿ ಶಾಲೆಯ ಯಮುನಾ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.
ಉತ್ತಮ ಸಂದೇಶ: ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮೂಲಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮಕ್ಕಳು ಬಿಡಿಸಿರುವ ಚಿತ್ರಗಳು ಬೇರೆ ಮಕ್ಕಳು ಹಾಗೂ ಪೋಷಕರಿಗೆ ಈ ನಿಟ್ಟಿನಲ್ಲಿ ಉತ್ತಮ ಸಂದೇಶಗಳನ್ನು ಕೊಡುವಂತಿವೆ. ಪರೀಕ್ಷೆಗಳಲ್ಲಿ ಒತ್ತಡ ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಪರೀಕ್ಷೆ ಬರೆಯಿರಿ ಎಂದು ಗಣ್ಯರು ಪ್ರೋತ್ಸಾಹ ನೀಡಿದ್ದಾರೆ ಎಂದರು.
ಪ್ರಬುಬದ್ಧತೆಯ ಚಿತ್ರ: ಎಎಂಡಿ ಇಂಡಿಯಾದ ಮುಖ್ಯಸ್ಥೆ ಜಯಾ ಜಗದೀಶ್ ಮಾತನಾಡಿ, ಮಕ್ಕಳಿಗೆ ಪರೀಕ್ಷೆಯ ಸಮಯ ಹತ್ತಿರ ಬರುತ್ತಿದೆ. ವಿದ್ಯಾಭ್ಯಾಸದ ಮಹತ್ವ ಎಷ್ಟಿದೆ. ವಿದ್ಯಾಭ್ಯಾಸದಿಂದ ಮಾಡಬಹುದಾದ ಸಾಧನೆಗಳ ಬಗ್ಗೆ ತಿಳಿಸಲು ರಾಜೀವ್ ಚಂದ್ರಶೇಖರ್ ಅವರು ಅವಕಾಶ ಮಾಡಿಕೊಟ್ಟಿದ್ದರು. ಮಕ್ಕಳ ಉತ್ಸಾಹ ನೋಡಿ ನಮ್ಮ ಶಾಲಾ ದಿನಗಳು ನೆನಪಾಯಿತು. ಪೀಳಿಗೆಯಿಂದ ಪೀಳಿಗೆಗೆ ಮಕ್ಕಳಲ್ಲಿನ ವಿಶ್ವಾಸ ದುಪ್ಪಟ್ಟಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ಪ್ರತಿಯೊಂದನ್ನೂ ವೇಗವಾಗಿ ಕಲಿಯುವ ಅವರು ಭವಿಷ್ಯದಲ್ಲಿ ಮುಂದೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಹುಮಾನ ವಿಜೇತ ವಿದ್ಯಾರ್ಥಿಗಳ ಪೇಂಟಿಂಗ್ ನೋಡಿ ಅಚ್ಚರಿಯಾಯಿತು. ತುಂಬಾ ಪ್ರಬುದ್ಧತೆಯ ಕಲ್ಪನೆಗಳೊಂದಿಗೆ ಚಿತ್ರಗಳನ್ನು ಬಿಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಷ್ಟದಿಂದ ಫಲ: ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತಿ ರಾಯ್ ಮಾತನಾಡಿ, ಹಾಗಲಕಾಯಿ ಕಹಿಯಾಗಿದ್ದರೂ ದೇಹದ ಆರೋಗ್ಯಕ್ಕೆ ಒಳ್ಳೆಯದು. ಅದೇ ರೀತಿ ಪರೀಕ್ಷೆಗೆ ಸಿದ್ಧರಾಗುವುದನ್ನು ಕಷ್ಟಎನಿಸಿದರೂ ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ಹೀಗಾಗಿ ನಿಮಗೆ ಕಷ್ಟಎನಿಸಿದರೂ ಇಷ್ಟಪಟ್ಟು ಪರೀಕ್ಷೆಗೆ ಸಿದ್ಧತೆ ನಡೆಸಿ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಿ. ನಿಮ್ಮಲ್ಲೂ ಗೂಗಲ್, ಮೈಕ್ರೊಸಾಫ್‌್ಟನಂತಹ ಕಂಪನಿಗಳಿಗೆ ಮುಖ್ಯಸ್ಥರಾಗುವ ವ್ಯಕ್ತಿಗಳು ಇರಬಹುದು. ಇದಕ್ಕೆ ಕಠಿಣ ಶ್ರಮ ವಹಿಸಿ ಓದಬೇಕು. ಬೆಳಗ್ಗೆ ಎದ್ದು ಓದುವುದು ಕಷ್ಟವಾಗಬಹುದು. ಆದರೆ ಆ ಎರಡು ಗಂಟೆಯ ನಿಮ್ಮ ಶ್ರಮ ನಿಮ್ಮ ಭವಿಷ್ಯ ರೂಪಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ 100 ಕೋಟಿ: ಸಿಎಂ ಬೊಮ್ಮಾಯಿ
ಕಲಿಕೆ ನಿರಂತರ, ಅಪ್ರಮೇಯ: ಕೂ ಆ್ಯಪ್ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣನ್ ಮಾತನಾಡಿ, ನಾನು ಚಿಕ್ಕವನಿದ್ದಾಗ ಕಲಿಯುವುದು ಇಷ್ಟವಿತ್ತು, ಪರೀಕ್ಷೆ ಇಷ್ಟವಿರಲಿಲ್ಲ. ಆದರೆ ನಿಮಗೆಲ್ಲಾ ಪರೀಕ್ಷೆಯೂ ಇಷ್ಟವಾಗುತ್ತಿದೆ. ಅಷ್ಟರ ಮಟ್ಟಿಗೆ ನೀವು ಅಭಿವೃದ್ಧಿ ಹೊಂದಿದ್ದೀರಿ. ಕಲಿಕೆ ಹಾಗೂ ಪರೀಕ್ಷೆ ಎಂಬುದು ನಿರಂತರ ಪ್ರಕ್ರಿಯೆ. ಅದಕ್ಕೆ ನೀವು ಮಾತ್ರ ಫಲಾನುಭವಿಗಳಾಗಿರುವುದಿಲ್ಲ. ನಮಗೂ ಕಲಿಕೆ, ಪರೀಕ್ಷೆಗಳು ಇರುತ್ತವೆ. ಅವುಗಳ ರೀತಿ ಬೇರೆಯಷ್ಟೇ. ಹೀಗಾಗಿ ಕಲಿಯುತ್ತಲೇ ಇರಿ, ಇಷ್ಟಪಟ್ಟು ಕಲಿಯಿರಿ, ಕುತೂಹಲವನ್ನು ಕಾಯ್ದುಕೊಂಡು ಕಲಿಯಿರಿ. ನಿಮ್ಮಿಂದಲೇ ಕರ್ನಾಟಕ ಹಾಗೂ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.