ಚಿಕ್ಕಮಗಳೂರು: ಬತ್ತದ ದುಡಿಯುವ ಉತ್ಸಾಹ, ಛಲದಂಕ ಮಲ್ಲನಂತೆ ಅಂಗವಿಕಲತೆ ಮೆಟ್ಟಿನಿಂತ ಧೀರ..!

By Girish Goudar  |  First Published Jan 4, 2023, 9:03 PM IST

ಒಂದು ಕೈ ಸ್ವಾಧೀನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ, ಛಲದಂಕ ಮಲ್ಲನಂತೆ ಅಂಗವಿಕಲತೆಯನ್ನು ಮೆಟ್ಟಿನಿಂತು ಬದುಕಿ ತೋರಿಸುತ್ತಿದ್ದಾರೆ. ವಿಶೇಷ ಚೇತನರಿಗೆ ಮಾದರಿಯಾದ ಸ್ವಾಮಿ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.04):  ದೇಹದ ಯಾವುದೇ ಭಾಗ ಊನವಾಗಿದ್ದರೆ ಸಾಕು ಅದನ್ನೆ ನೆಪಮಾಡಿಕೊಂಡು ಉದರ ಪೋಷಣೆಗೆ ನಾನಾ ಹಗಲುವೇಷಗಳನ್ನು ತೊಟ್ಟು, ಸಾರ್ವಜನಿಕರೆದುರು ಕೈಯೊಡ್ಡುವುದನ್ನು ನೋಡಿದ್ದೇವೆ. ಕೈಕಾಲುಗಳಿಗೆ ಯಾವ ಗಾಯವಾಗದಿದ್ದರೂ ಬ್ಯಾಂಡೇಜ್ ಬಟ್ಟೆ ಸುತ್ತಿಕೊಂಡು ಬೇಡುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬರು ವಿಶೇಷಚೇತನರಾಗಿದ್ದರೂ, ಕೈಯೊಡ್ಡಿ ಬೇಡುತ್ತಿಲ್ಲ, ಇನ್ನೊಬ್ಬರು ಹಂಗಿನಕೂಳು ತಿನ್ನುತ್ತಿಲ್ಲ, ತನಗೆ ಎದುರಾದ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸುವ ಮೂಲಕ ಬದುಕಿನ ಬಂಡಿಎಂಬ ನೊಗಕ್ಕೆ ಹೆಗಲುಕೊಟ್ಟು ಜೀವನವೆಂಬ ರಥವನ್ನು ಎಳೆಯುತ್ತಿದ್ದಾರೆ. ಆ ವ್ಯಕ್ತಿಯನ್ನು ನೋಡಬೇಕೆಂದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಹೋಗಬೇಕು. ಒಂದು ಕೈ ಸ್ವಾಧೀನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ, ಛಲದಂಕ ಮಲ್ಲನಂತೆ ಅಂಗವಿಕಲತೆಯನ್ನು ಮೆಟ್ಟಿನಿಂತು ಬದುಕಿ ತೋರಿಸುತ್ತಿದ್ದಾರೆ. ವಿಶೇಷ ಚೇತನರಿಗೆ ಮಾದರಿಯಾಗಿದ್ದಾರೆ.

Tap to resize

Latest Videos

ಸ್ವಾವಲಂಬಿ ಬದುಕು ನಡೆಸುವ ಮೂಲಕ ಇತರರಿಗೆ ಸ್ಪೂರ್ತಿ: 

ಜೀವನದಲ್ಲಿ ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಅಂಗವಿಕಲತೆ ಹೊಂದಿರುವ ವ್ಯಕ್ತಿಯೊಬ್ಬರ ಸಾಹಸಗಾಥೆ ಇದು. ಬಲಗೈ ಸ್ವಾಧೀನ ಕಳೆದುಕೊಂಡಿದ್ದರೂ ಅದನ್ನು ನೆಪಮಾಡಿ ಕೊಂಡು ಕೊರಗುತ್ತಾ ಮೂಲೆಯಲ್ಲಿ ಕೂರದೆ,ಸ್ವಾವಲಂಬಿ ಬದುಕು ನಡೆಸುವ ಮೂಲಕ ಇತರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಈ ಛಲಗಾರ ವಿಶೇಷಚೇತನರನ್ನು ಕಾಣಬೇಕಾದರೆ ಬಣಕಲ್ ಗ್ರಾಮಕ್ಕೆ ತೆರಳಬೇಕು. ಅಲ್ಲಿ ಕಾಣಸಿಗುವ ವ್ಯಕ್ತಿಯೇ ಹೆಸರೆ ಸ್ವಾಮಿ.ಕ್ರೀಡಾಕ್ಷೇತ್ರವಿರಲಿ, ಶಿಖರರೋಹಿಗಳಾಗಿರಲಿ, ಇತರೆ ಕ್ಷೇತ್ರದಲ್ಲಿ ವಿಶೇಷ ಚೇತನರು ತಮ್ಮ ಚಾಪನ್ನು ಮೂಡಿಸಿದ್ದಾರೆ. ಅವರಂತೆಯೇ ಕೂಲಿ ಕೆಲಸದಲ್ಲೂ ಸ್ವಾಮಿ ಎಂಬುವವರು ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಇತರರಿಗೆ ಮಾದರಿಯಾಗಿ ನಿಂತಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ.

DEPARTMENT OF FISHERIES: ದೇಶದಲ್ಲೆ ರಾಜ್ಯ ಮೀನುಗಾರಿಕೆ ಇಲಾಖೆಗೆ ಪ್ರಥಮ ಸ್ಥಾನ

ಸಂಸಾರವೆಂಬ ರಥವನ್ನು ಸರಾಗವಾಗಿ ಎಳೆದೊಯ್ಯುತ್ತಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನಂಜೇಗೌಡ ಮತ್ತು ಸಣ್ಣಮ್ಮ ದಂಪತಿಯ 4  ಜನ ಮಕ್ಕಳಲ್ಲಿ ಎರಡನೇಯವರೆ ಸ್ವಾಮಿ. ಹುಟ್ಟುವಾಗಲೇ ಅವರ ಒಂದು ಕೈ ಬೆಳವಣಿಗೆ ಇರಲಿಲ್ಲ, ಸ್ವಾಮಿಯವರು ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಪುಟ್ಟ ಸಂಸಾರವೆಂಬ ಬಂಡಿಯನ್ನು  ಎಳೆದೊಯ್ಯುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ತನಗೆ ಒಂದು ಕೈನಲ್ಲಿ ಮಾತ್ರ ದಿನಿತ್ಯದ ಚಟುವಟಿಕೆ ಮಾಡಲಾಗುವುದು ಎಂದು ಯಾವತ್ತಿಗೂ ತಲೆಮೇಲೆ ಕೈಹೊತ್ತು ಕೂರದೆ, ಕೊರಗದೆ ತನಗೆ ಎದುರಾದ ಸಮಸ್ಯೆ, ಸವಾಲುಗಳನ್ನು ಧೈರ್ಯದಿಂದ ಎದುರಿಸಿದ್ದಾರೆ. ಎಲ್ಲರಂತೆ ಬದುಕು ಸಾಗಿಸಲಾರಂಭಿಸಿದ್ದಾರೆ. 

20 ವರ್ಷದಿಂದ ಕೂಲಿ ಕೆಲಸ: 

ನಾನೊಬ್ಬ ವಿಶೇಷಚೇತನ ಎಂಬುದನ್ನು ಮರೆತು. ಜೀವನವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತಿದ್ದಾರೆ.ಚಿಕ್ಕಂದಿನಲ್ಲೆ ತಂದೆಯೊಂದಿಗೆ ಹೊಲದಲ್ಲಿ ಸಹಾಯ ಮಾಡುತ್ತಿದ್ದ ಇವರು ಬಳಿಕ ಸಣ್ಣಪುಟ್ಟ ಕೂಲಿ ಕೆಲಸ ಮಾಡಲಾರಂಭಿಸಿದರು. ಮನೆಯಲ್ಲಿ ಕಡುಬಡತನವಿದ್ದುದರಿಂದ ಸ್ವಾಮಿಯವರಿಗೆ ಹೆಚ್ಚುಓದಲು ಸಾಧ್ಯವಾಗಲಿಲ್ಲ, ಅಂಕವೈಕಲ್ಯವೆಂದು ಇವರನ್ನು ಕೂಲಿಕೆಲಸಕ್ಕೂ ಜನ ಕರೆಯಲು ಮುಂದಾಗುತ್ತಿರಲಿಲ್ಲ. ಆದರೆ ಇವರು ಇದನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತೆಮಾಡುತ್ತಾ ಕಾಲಕಳೆಯಲಿಲ್ಲ, ಧೃತಿಗೆಡಲಿಲ್ಲ. ಬದುಕಲು ನೂರಾರು ದಾರಿಗಳಿವೆ ಎಂಬುದನ್ನು ಕಂಡುಕೊಂಡರು. ಮೊದಲು ಮೂಟೆ ಹೊರಲಾರಂಭಿಸಿದರು. ಬಳಿಕ ಕೂಲಿಮಾಡುವುದನ್ನು ಕಲಿತರು. ಬಣಕಲ್ನಲ್ಲಿ ಕಳೆದ 20ವರ್ಷಗಳಿಂದ ಮೂಟೆಹೊರುವ ಕಾಯಕಮಾಡುತ್ತಿದ್ದಾರೆ. ಯಾರೇ ಕೆಲಸಕ್ಕೆ ಕರೆದರೂ ನಿಯತ್ತಿನಿಂದ ದುಡಿಯುತ್ತಿದ್ದಾರೆ. ಕೆಲಸದಲ್ಲಿ ನೈಪುಣ್ಯತೆಯನ್ನು ಕಂಡು ಕೊಂಡಿದ್ದಾರೆ.ಎಷ್ಟೆ ಕಷ್ಟದ ಕೆಲಸವಿರಲಿ ಅಚ್ಚುಕಟ್ಟಿನಿಂದ ಮಾಡುವ ಮೂಲಕ ಜನಪ್ರಿಯತೆಗಳಿಸುತ್ತಾ ಬಂದಿದ್ದಾರೆ. 

ಒಬ್ಬೊಬ್ಬರಾಗಿ ಇವರನ್ನು ಕೂಲಿ ಕೆಲಸಕ್ಕೆ ಕರೆಯಲು ಮುಂದಾಗುತ್ತಿದ್ದಾರೆ. ಜನ ನನ್ನನ್ನು ಗುರುತಿಸುತ್ತಿದ್ದಾರೆಂಬ ಸಂತೋಷ ಇವರ ಮನದಲ್ಲಿ ಮೂಡಿದೆ. ಪತ್ನಿ, ಇಬ್ಬರು ಪುತ್ರಿಯರಿರುವ ಪುಟ್ಟ ಸಂಸಾರವನ್ನು ಹೊಂದಿದ್ದಾರೆ. ಒಂದು ದಿನವೂ ಮನೆಯಲ್ಲಿ ಕೂರದೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇಷ್ಟು ವರ್ಷ ಯಾರಬಳಿಯೂ ಕೈಚಾಚಲೇ ಇಲ್ಲ. ಸರ್ಕಾರದಿಂದ 1200 ರೂ. ಮಾಸಿಕ ವೇತನ ಬರುತ್ತಿದೆ. ಒಂದು ಕೈ ಸ್ವಾಧೀನ ಇಲ್ಲದಿದ್ದರೇನಂತೆ ಇಷ್ಟು ದಿನ ಶಕ್ತಿ ಇಲ್ಲದ ಎಡಗೈ ಯಾವ ತೊಂದರೆಯನ್ನು ನೀಡಿಲ್ಲ  ಎನ್ನುತ್ತಾರೆ ಸ್ವಾಮಿ.ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದರೂ ಅವರು ಎಂದೂ ಬದುಕಿನಲ್ಲಿ ಸೋಲು ಕಾಣಲಿಲ್ಲ, ಸರ್ಕಾದಿಂದ ಸಿಗುವ ಮಾಸಿಕವೇತನ ಮತ್ತು ದುಡಿಮೆಯಿಂದ ಬರುವ ಒಂದಷ್ಟು ಹಣದಿಂದ ಕುಟುಂಬವನ್ನು ಸಲಹಿ, ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಇದು ಅವರಿಗೆ ನೆಮ್ಮದಿ ತರಿಸಿದೆ.

click me!