ಕಲ್ಬುರ್ಗಿಯ ಎಸ್ ಎನ್ ಹಿಪ್ಪರಗಾ ಬಳಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ | ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು |
ಕಲಬುರಗಿ (ಸೆ. 01): ಇಲ್ಲಿನ ಜೇವರ್ಗಿ ತಾಲೂಕಿನ ಎಸ್.ಎನ್. ಹಿಪ್ಪರಗಾ ಕ್ರಾಸ್ ಬಳಿ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಹಿಪ್ಪರಗಾ ಸೇತುವೆ ಬಳಿ ರಿಲಯನ್ಸ್ ಕಂಪನಿಗೆ ಸೇರಿದ ಪೆಟ್ರೋಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ವಿಜಯಪುರದಿಂದ ಕಲಬುರ್ಗಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಇದಾಗಿತ್ತು. ಟ್ಯಾಂಕರ್ ಪಲ್ಟಿಯಿಂದ ರಸ್ತೆ ಮೇಲೆ ಪೆಟ್ರೋಲ್ ಸೋರಿ ಹೋಗುತ್ತಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ಕ-ಪಕ್ಕದ ಊರಿನ ಜನ ಕೊಡ, ಬಕೇಟ್ ಹಿಡಿದು ಸ್ಥಳಕ್ಕೆ ದೌಡಾಯಿಸಿ ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ರಸ್ತೆ ಮೇಲೆ ಹೋಗುವ ಬೈಕ್ ಸವಾರರು ಬಾಟಲಿಯಿಂದ ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದರು.
ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದವರು ನೀರು ಹಾಗೂ ಪಾಮ್ ಸಿಡಿಸಿ ಬೆಂಕಿ ಹತ್ತದಂತೆ ಕ್ರಮ ವಹಿಸಿದರು.
ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಹೆದ್ದಾರಿ ರಸ್ತೆ ಸುಮಾರು ಹೊತ್ತು ಸ್ಥಗಿತಗೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.