ರಾಜಕೀಯ ಸಭೆ - ಸಮಾರಂಭಗಳಲ್ಲಿ ನೀರು, ಮಜ್ಜಿಗೆ ನೀಡಲು ಮಾತ್ರ ಅವಕಾಶವಿದೆ. ಆಹಾರ ನೀಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತುಮಕೂರು : ರಾಜಕೀಯ ಸಭೆ - ಸಮಾರಂಭಗಳಲ್ಲಿ ನೀರು, ಮಜ್ಜಿಗೆ ನೀಡಲು ಮಾತ್ರ ಅವಕಾಶವಿದೆ. ಆಹಾರ ನೀಡಿದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದ ಜಿಲ್ಲೆಯ ಎಲ್ಲಾಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದರು.
ವಿಧಾನಸಭಾ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಸಭೆ - ಸಮಾರಂಭಗಳನ್ನು ಏರ್ಪಡಿಸುವ ಮುನ್ನ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಅನುಮತಿ ಪಡೆದು ಬಹಿರಂಗ ಸಭೆ, ಸಮಾರಂಭ ನಡೆಸಲು ಅವಕಾಶವಿದೆ. ನಾಮಪತ್ರಕ್ಕಿಂತ ಪೂರ್ವದಲ್ಲಿ ಕೇವಲ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಚುನಾವಣಾಧಿಕಾರಿಗಳ ಅನುಮತಿ ಪಡೆದು ಪಕ್ಷದ ಪರವಾಗಿ ಪ್ರಚಾರ ಮಾಡಬಹುದಾಗಿದೆ. ಆದರೆ ಒಬ್ಬ ಅಭ್ಯರ್ಥಿ ಪರವಾಗಿ ಕಾರ್ಯಕ್ರಮ ಮಾಡಿದರೆ ಅದರ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚದ ಖಾತೆಗೆ ದಾಖಲು ಮಾಡಲಾಗುವುದು. ಸಭೆ, ಸಮಾರಂಭ ಮತ್ತು ರಾರಯಲಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಕೈಗೊಳ್ಳಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ:
ಚುನಾವಣಾ ಪ್ರಚಾರಕ್ಕಾಗಿ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಚುನಾವಣಾ ಮುಕ್ತಾಯವಾಗುವ 48 ಗಂಟೆಗಳ ಮುಂಚೆ ಕ್ಷೇತ್ರವನ್ನು ತೊರೆಯಬೇಕು ಎಂದು ತಿಳಿಸಿದರು.
ಚುನಾವಣೆಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿ 3 ವಾಹನಗಳನ್ನು ಮಾತ್ರ ಬಳಸಲು ಅವಕಾಶವಿದೆ. ನಾಮಪತ್ರ ಸಲ್ಲಿಕೆಯಾದ ನಂತರ ಅನುಮತಿ ಪಡೆದು ತಮ್ಮ ಇಚ್ಛೆಯನುಸಾರ ವಾಹನಗಳನ್ನು ಬಳಸಬಹುದು. ಆದರೆ ವಾಹನ ಬಳಸುವ ಬಗ್ಗೆ ಅಭ್ಯರ್ಥಿಗಳು ಚುನಾವಣಾ ವೆಚ್ಚ ತಂಡಕ್ಕೆ ಮಾಹಿತಿ ನೀಡಬೇಕು. ಅನುಮತಿ ಮೇರೆಗೆ ಚುನಾವಣಾ ಪ್ರಚಾರಕ್ಕೆ ರಿಕ್ಷಾ ಮತ್ತು ಬೈಸಿಕಲ್‌ಗಳನ್ನು ಬಳಸಲು ಅವಕಾಶವಿದೆ. ಚುನಾವಣೆ ದಿನದಂದು ಅಭ್ಯರ್ಥಿ ಉಪಯೋಗಕ್ಕಾಗಿ 1, ಅಭ್ಯರ್ಥಿಯ ಚುನಾವಣಾ ಏಜೆಂಟ್ ಉಪಯೋಗಕ್ಕಾಗಿ 1 ಹಾಗೂ ಅಭ್ಯರ್ಥಿಯ ಕಾರ್ಯಕರ್ತರ ಉಪಯೋಗಕ್ಕಾಗಿ 1 ವಾಹನ ಸೇರಿದಂತೆ 3 ವಾಹನಗಳನ್ನು ಬಳಸಲು ಅವಕಾಶವಿದೆ ಎಂದು ಹೇಳಿದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ನಂತರ ವಿಡಿಯೋ ವ್ಯಾನ್ ಬಳಸಲು ಜಿಲ್ಲಾ ಮಟ್ಟದ ಎಂಸಿಎಂಸಿ(ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ) ತಂಡದಿಂದ ವೀಡಿಯೋದಲ್ಲಿನ ಮಾಹಿತಿ ಕುರಿತು ಅನುಮತಿ ಪಡೆದು ನಂತರ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನ, ರಿಕ್ಷಾಗಳ ಮೇಲೆ 1 ಬಾವುಟ, 2 ಸಣ್ಣ ಸ್ಟಿಕರ್ ಬಳಸಲು ಅವಕಾಶವಿದ್ದು, ಬ್ಯಾನರ್ ಬಳಸಲು ಅವಕಾಶ ಇರುವುದಿಲ್ಲ. ರೋಡ್‌ಶೋ ಸಂದರ್ಭದಲ್ಲಿ ವಾಹನದ ಮೇಲೆ 1 ಬ್ಯಾನರ್ ಬಳಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಮುದ್ರಣಾಲಯದವರು ಚುನಾವಣಾ ಕರಪತ್ರ ಮುದ್ರಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮುದ್ರಣ ಮಾಡಿದ ಪ್ರಮಾಣದ ವಿವರಗಳನ್ನು ನಮೂದಿಸಬೇಕು ಹಾಗೂ 4 ಪ್ರತಿಗಳಲ್ಲಿ ಅಪೆಂಡಿಕ್ಸ್-ಎ ಮತ್ತು ಬಿ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾ ಕರಪತ್ರದಲ್ಲಿ ವಿಷಯಗಳನ್ನು ಮುದ್ರಣ ಮಾಡಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಅನುಮತಿ ಪಡೆಯಬೇಕು. ಅಭ್ಯರ್ಥಿಗಳು ತಮ್ಮ ಅಥವಾ ಯಾವುದೇ ದೇವರ ಫೋಟೋ ಹೊಂದಿರುವ ಡೈರಿ, ಕ್ಯಾಲೆಂಡರ್, ಸ್ಟಿಕರ್‌ಗಳ ಮುದ್ರಣ ಹಾಗೂ ಹಂಚಿಕೆ ಮಾಡುವಂತಿಲ್ಲ.
ತಾತ್ಕಾಲಿಕ ಕಚೇರಿಗೆ ಅವಕಾಶ:
ಚುನಾವಣಾ ಪ್ರಚಾರಕ್ಕಾಗಿ ಚುನಾವಣಾಧಿಕಾರಿಗಳ ಅನುಮತಿ ಪಡೆದು ಪಕ್ಷ ಅಥವಾ ಅಭ್ಯರ್ಥಿಗಳಿಗೆ ತಾತ್ಕಾಲಿಕ ಕಚೇರಿ ತೆರೆಯಲು ಅವಕಾಶವಿದೆ. ಯಾವುದೇ ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಳ, ಆಸ್ಪತ್ರೆ ಹಾಗೂ ಮತಗಟ್ಟೆಸಮೀಪ 200 ಮೀ. ಒಳಗೆ ಕಚೇರಿ ತೆರೆಯಲು ಅವಕಾಶವಿಲ್ಲ. ಪ್ರಚಾರ ಸಂದರ್ಭದಲ್ಲಿ ಕ್ಯಾಪ್, ಮಾಸ್‌್ಕ, ಸ್ಕಾಫ್‌ರ್ ವಿತರಿಸಲು ಅವಕಾಶವಿದ್ದು, ಅದರ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೆ ದಾಖಲಿಸಲಾಗುವುದು. ಆದರೆ ಸೀರೆ, ಟೀ-ಷರ್ಚ್, ಶರ್ಚ್ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಸಿಸಿ ಟಿವಿ ಕೂಡಲೇ ಅಳವಡಿಸಿ:
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚೆಕ್‌ಪೋಸ್ಟ್‌ಗಳಲ್ಲಿ ಈವರೆಗೂ ಸಿಸಿ ಟಿವಿ ಅಳವಡಿಸದೆ ಇರುವವರು ಕೂಡಲೇ ಅಳವಡಿಸಬೇಕು. ಏ.11ರಂದು ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡಲು ಸೂಕ್ತ ವ್ಯವಸ್ಥೆ ಮಾಡಬೇಕು. ಸ್ಟ್ರಾಂಗ್‌ರೂಂನಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಎಲ್ಲಾ ಅರ್ಹ ವಿಕಲಚೇತನ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನ ಮಾಡಲು ಅನುವಾಗುವಂತೆ ನಮೂನೆ 12ಡಿ ವಿತರಿಸಿದ ಬಗ್ಗೆ ಪ್ರತಿ ದಿನ ಆಯಾ ತಾಲೂಕು ಮಟ್ಟದ ಭೂದಾಖಲೆಗಳ ಇಲಾಖಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಹೆಚ್. ಶಿವಪ್ಪ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ತುಮಕೂರು ವಿವಿ ಕುಲ ಸಚಿವೆ ನಹೀದಾ ಜಂಜಂ, ತಹಶೀಲ್ದಾರ್ ಸಿದ್ದೇಶ್ ಇತರೆ ಅಧಿಕಾರಿಗಳಿದ್ದರು.
ಮುಖ್ಯ ನಿಯಮಗಳು
* ಸಭೆ -ಸಮಾರಂಭಕ್ಕೆ ಅನುಮತಿ ಕಡ್ಡಾಯ
* ಆಹಾರ ವಿತರಿಸುವಂತಿಲ್ಲ
* ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ
* 3 ವಾಹನ ಮಾತ್ರ ಬಳಸಲು ಅವಕಾಶ
* ವಾಹನಗಳಲ್ಲಿ ಬ್ಯಾನರ್‌ಗೆ ಅವಕಾಶವಿಲ್ಲ
* ಮುದ್ರಣಾಲಯಗಳು ಮಾಹಿತಿ ನೀಡಬೇಕು
* ತಾತ್ಕಾಲಿಕ ಕಚೇರಿಗೆ ಮಾತ್ರ ಅವಕಾಶ