ಬೆಂಗಳೂರಿನ 3 ಕಡೆ ಕಲುಷಿತ ನೀರಿನಿಂದ ಜನರು ಅಸ್ವಸ್ಥ: ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ

By Kannadaprabha News  |  First Published Jun 12, 2023, 6:43 AM IST

ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿಯ ಕಲುಷಿತ ನೀರು ಸೇರ್ಪಡೆಯಾಗಿ ಹಲವಾರು ಮಂದಿ ಹೊಟ್ಟೆ ನೋವಿನಿಂದ ಬಳಲುತ್ತಿರುವ ಸಂಗತಿ ವರದಿಯಾಗಿದೆ.


ಬೆಂಗಳೂರು (ಜೂ.12): ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿಯ ಕಲುಷಿತ ನೀರು ಸೇರ್ಪಡೆಯಾಗಿ ಹಲವಾರು ಮಂದಿ ಹೊಟ್ಟೆ ನೋವಿನಿಂದ ಬಳಲುತ್ತಿರುವ ಸಂಗತಿ ವರದಿಯಾಗಿದೆ. ಪ್ರಮುಖ ಪ್ರದೇಶವಾಗಿರುವ ಬಸವನಗುಡಿಯ ಬುಲ್‌ ಟೆಂಪಲ್‌ ರಸ್ತೆಯಲ್ಲಿ ಹಾದುಹೋಗಿರುವ ಕುಡಿಯುವ ನೀರಿನ ಕೊಳವೆಗೆ ಒಳಚರಂಡಿಯ ಕಲುಷಿತ ನೀರು ಸೇರಿ ಎನ್‌.ಆರ್‌.ಕಾಲೋನಿ, ತ್ಯಾಗರಾಜನಗರ, ಹನುಮಂತನಗರದ ಕೆಲವು ಭಾಗಗಳಿಗೆ ಪೂರೈಕೆಯಾಗಿದೆ. ಇದರಿಂದ ಈ ಪ್ರದೇಶದ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 

ಬಹುತೇಕರು ಹೊಟ್ಟೆನೋವಿನಿಂದ ಬಳಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎನ್‌.ಆರ್‌. ಕಾಲೋನಿಯ ರಾಮಲೀಲಾ ಅಪಾರ್ಟ್‌ಮೆಂಟ್‌, ಕೃಷ್ಣಲೀಲಾ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇನ್ನು ಸ್ನಾನಕ್ಕೆ ಬಳಕೆ ಮಾಡಿದವರು ಚರ್ಮದ ಸಮಸ್ಯೆಗೆ ಒಳಗಾಗಿದ್ದಾರೆ. ಇದರಿಂದ ಕಳೆದ ನಾಲ್ಕು ದಿನಗಳಿಂದ ಕಾವೇರಿ ನೀರು ಬಳಕೆ ಮಾಡುವುದನ್ನು ಸ್ಥಗಿತ ಮಾಡಲಾಗಿದೆ.

Tap to resize

Latest Videos

ಯಾರಲ್ಲಿ... ಫ್ರೀ ಟಿಕೆಟ್‌ ಟಿಕೆಟ್‌: ರಾಜ್ಯಾದ್ಯಂತ ಏಕಕಾಲಕ್ಕೆ ಮಹಿಳೆಯರ ಉಚಿತ ಬಸ್‌ ಪ್ರಯಾಣಕ್ಕೆ ಚಾಲನೆ

ಕಲುಷಿತ ನೀರಿನ ಸರಬರಾಜು ಆಗುತ್ತಿರುವ ಕುರಿತು ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳು ಸ್ಪಷ್ಟನೆ ನೀಡಿ ಎಲ್ಲ ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕಲುಷಿತ ನೀರು ಸರಬರಾಜು ಮುಂದುವರಿದಿದೆ. ಇದರಿಂದ ಈ ಭಾಗದ ಜನ ಕಾವೇರಿ ನೀರಿನ ಬಳಕೆ ನಿಲ್ಲಿಸಿ ಖಾಸಗಿ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ.

ಖಾಸಗಿ ಟ್ಯಾಂಕರ್‌ಗಳ ಮಾಲಿಕರು ಕೂಡಾ ಇದನ್ನೇ ಬಂಡವಾಳ ಮಾಡಿಕೊಂಡು ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ವಿಷಯವಾಗಿಯೂ ಜಲಮಂಡಳಿ ಗಮನವನ್ನೇ ನೀಡಿಲ್ಲ. ಕಲುಷಿತ ನೀರು ಸೇವನೆಯಿಂದ ಹಲವಾರು ಮಂದಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗಲೂ ಕೆಲವರು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಎಂಬ ವಿಷಯವನ್ನು ಬಿಬಿಎಂಪಿ ಅಧಿಕಾರಿಗಳಿಗೂ ಮುಟ್ಟಿಸಿದ್ದಾರೆ. ಆದರೆ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

1ನೇ ಗ್ಯಾರಂಟಿ ಜಾರಿ, ನುಡಿದಂತೆ ನಡೆದಿದ್ದೇವೆ: ಸಚಿವ ಪ್ರಿಯಾಂಕ್‌ ಖರ್ಗೆ

ಕಳೆದ ಗುರುವಾರ ನೀರು ಸರಬರಾಜು ಮಾಡುವ ಕೊಳವೆಯಲ್ಲಿ ಮಳೆ ನೀರು ಹಾಗೂ ಕಲುಷಿತ ನೀರು ಪೂರೈಕೆ ಆಗಿತ್ತು. ಅದನ್ನು ಸರಿಪಡಿಸಲಾಗಿದೆ. ಜತೆಗೆ, ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆದರೆ, ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
-ವೆಂಕಟೇಶ್‌, ಎಂಜಿನಿಯರ್‌, ದಕ್ಷಿಣ ವಲಯ, ಜಲ ಮಂಡಳಿ.

click me!