ಈ ಬಾರಿ ನನ್ನ ರಾಜಕೀಯ ಜೀವನ ಸಂಪೂರ್ಣವಾಗಿ ಅಂತ್ಯಗೊಂಡಿತು ಎಂದು ಅಂದುಕೊಂಡಿದ್ದೆ. ಆದರೆ ನನ್ನ ಜೆಡಿಎಸ್ ಕಾರ್ಯಕರ್ತರು ಕೈ ಬಿಡಲಿಲ್ಲ. ನನ್ನನ್ನು ಶಾಸಕರನ್ನಾಗಿ ಮಾಡಲೇಬೇಕೆಂದು ನಿರ್ಧರಿಸಿ ಸಮರ ಸಾರಿ ಯೋಧರಂತೆ ಹೋರಾಡಿ ನನ್ನನ್ನು ಗೆಲ್ಲಿಸಿದುದನ್ನು ನಾನೆಂದೂ ಮರೆಯಲಾರೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತುರುವೇಕೆರೆ : ಈ ಬಾರಿ ನನ್ನ ರಾಜಕೀಯ ಜೀವನ ಸಂಪೂರ್ಣವಾಗಿ ಅಂತ್ಯಗೊಂಡಿತು ಎಂದು ಅಂದುಕೊಂಡಿದ್ದೆ. ಆದರೆ ನನ್ನ ಜೆಡಿಎಸ್ ಕಾರ್ಯಕರ್ತರು ಕೈ ಬಿಡಲಿಲ್ಲ. ನನ್ನನ್ನು ಶಾಸಕರನ್ನಾಗಿ ಮಾಡಲೇಬೇಕೆಂದು ನಿರ್ಧರಿಸಿ ಸಮರ ಸಾರಿ ಯೋಧರಂತೆ ಹೋರಾಡಿ ನನ್ನನ್ನು ಗೆಲ್ಲಿಸಿದುದನ್ನು ನಾನೆಂದೂ ಮರೆಯಲಾರೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಗುತ್ತಿಗೆದಾರರು ಆಯೋಜಿಸಿದ್ದ ತಮ್ಮ 73ನೇ ವರ್ಷದ ಹುಟ್ಟುಹಬ್ಬ ಆಚರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 7 ಚುನಾವಣೆಗಳನ್ನು ನಾನೇ ಸ್ವಂತ ಜವಾಬ್ದಾರಿಯಿಂದ ನಿರ್ವಹಿಸಿದ್ದೆ. ಆದರೆ ಈ ಬಾರಿಯ ಚುನಾವಣೆ ನನ್ನದು ಕೊನೆಯ ಚುನಾವಣೆಯೂ ಆಗಿತ್ತು. ಈ ಚುನಾವಣೆಗೆ ಇನ್ನು ಎರಡು ಮೂರು ದಿನಗಳು ಇದ್ದ ಸಂದರ್ಭದಲ್ಲಿ ಆದ ಆರ್ಥಿಕ ಸಮಸ್ಯೆ ನನ್ನನ್ನು ಅಧೀರನನ್ನಾಗಿಸಿತ್ತು. ಚುನಾವಣೆಯಿಂದ ನಿವೃತ್ತಿ ಘೋಷಿಸಿ ಬಿಡುವ ಮಟ್ಟಕ್ಕೂ ತಂದಿತ್ತು. ಆದರೆ ನನ್ನ ಅಸಹಾಯಕತೆಯನ್ನು ಕಂಡ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಮಾತ್ರ ನನ್ನ ಕೈ ಬಿಡಲಿಲ್ಲ. ನನ್ನ ನೋವಿಗೆ ಸ್ಪಂದಿಸಿದ ಅವರು ಹಗಲಿರುಳು ಹೋರಾಡಿ ನನ್ನನ್ನು ಗೆಲ್ಲಿಸಲು ಕಾರಣೀಭೂತರಾದರು ಎಂದು ಕೃಷ್ಣಪ್ಪ ಭಾವುಕವಾಗಿ ನುಡಿದರು.
ನನ್ನ ಈ ಶಾಸಕ ಪದವಿ ಬರಲು ಕಾರಣರಾಗಿರುವ ಜೆಡಿಎಸ್‌ನ ಕಾರ್ಯಕರ್ತರ ಋುಣವನ್ನು ಈ ಜನ್ಮದಲ್ಲಿ ತೀರಿಸಲಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದೇ ಅವರ ಪರ ನಿಲ್ಲುವೆ. ಹಾಗೆಯೇ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೂ ಶ್ರಮಿಸುವೆ. ಈ ಶಾಸಕ ಸ್ಥಾನದ ಗೆಲುವನ್ನು ನನ್ನ ಜೆಡಿಎಸ್ ಕಾರ್ಯಕರ್ತರಿಗೆ ಅರ್ಪಿಸುವೆ. ಕಾರ್ಯಕರ್ತರು ಇಲ್ಲದಿದ್ದರೆ ಈ ಶಾಸಕ ಪದವಿ ಇರುತ್ತಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ಮುಖಂಡರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಶಂಕರೇಗೌಡ, ವಿಶ್ವನಾಥ್, ತಾವರೇಕೆರೆ ತಿಮ್ಮೇಗೌಡ, ಸೊಪ್ಪಿನಹಳ್ಳಿ ರಂಗನಾಥ್, ವೆಂಕಟೇಶ್ ಕೃಷ್ಣಪ್ಪ, ಸಿ.ಎಸ್.ಪುರ ನಂಜೇಗೌಡ, ಸಿದ್ದೇಗೌಡ, ರೇಣುಕಯ್ಯ, ಲೀಲಾವತಿ ಗಿಡ್ಡಯ್ಯ, ಗುತ್ತಿಗೆದಾರರಾದ ತ್ಯಾಗರಾಜ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜ್, ಕಲ್ಲಬೋರನಹಳ್ಳಿ ಜಯರಾಮ್, ಜಕ್ಕನಹಳ್ಳಿ ಬಾಬು, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ಸೇರಿದಂತೆ ಹಲವರು ಇದ್ದರು.
ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಸಾದರಹಳ್ಳಿ ಡಿ. ದೊಡ್ಡೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಿಂದಿನ ಶಾಸಕರು ದಬ್ಬೇಘಟ್ಟಹೋಬಳಿಗೆ ಏತನೀರಾವರಿ ಯೋಜನೆ ತಂದಿದ್ದೇನೆಂದು ಹೇಳಿ ಭೂಮಿ ಪೂಜೆಯನ್ನೂ ಸಹ ಮಾಡಿದ್ದರು. ಆದರೆ ಸರ್ಕಾರದಿಂದ ಒಂದು ನಯಾ ಪೈಸೆ ಸಹ ಬಿಡುಗಡೆಯಾಗಿಲ್ಲ. ಅವರು ಮಾಡಿದ್ದು ಬೋಗಸ್ ಪೂಜೆ. ಆದರೂ ಸಹ ತಾವು ಮುಂಬರುವ ದಿನಗಳಲ್ಲಿ ನನ್ನ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದ ದಬ್ಬೇಘಟ್ಟಹೋಬಳಿಗೆ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ಸುಮಾರು 50 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡುವೆ. ಈ ಬಾರಿಯ ಚುನಾವಣೆ ಹಣ ಬಲದ ಮೇಲೆ ನಡೆಯುತ್ತದೆ ಎಂದು ಕೆಲವು ರಾಜಕಾರಣಿಗಳು ನಂಬಿದ್ದರು. ಆದರೆ ಅದು ಹುಸಿಯಾಯಿತು. ಜನರು ಹಣ ಬಲಕ್ಕೆ ಶಕ್ತಿ ತುಂಬದೇ, ಜನ ಬಲಕ್ಕೆ ಶಕ್ತಿ ತುಂಬಿದರು.