
ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮಾ.19): ಬೆಂಗಳೂರಿಗರಿಗೆ ಬಿಸಿಲಿನ ಭಯನ ನಡುವೆ ಮತ್ತೊಂದು ಭಯ ಶುರುವಾಗಿದೆ. ಇಡೀ ದಿನ ಬಿಸಿಲಿನ ಝಳ. ಮನೆಯ ಸುತ್ತ ಹಾವುಗಳ (Snakes) ಉಪಟಳ. ಜನ ಜೀವ ಭಯದಲ್ಲಿ ಇರುವಂತೆ ಮಾಡಿವೆ ಹಾವುಗಳ ಕಾಟ. ಮನೆಯ ಅಡುಗೆ ಕೋಣೆ, ದೇವರ ಕೋಟೆ, ಶೂ ರ್‍ಯಾಕ್, ಬಾತ್ ರೂಂ ಹೀಗೆ ಎಲ್ಲೆಂದರಲ್ಲಿ ಹಾವುಗಳ ಕಾಟ ಶುರುವಾಗಿದೆ. ಬೆಂಗಳೂರಿನ (Bengaluru) ವೈಟ್ ಫೀಲ್ಡ್, ಮಾರತ್ತಹಳ್ಳಿ, ಎಚ್ ಬಿಆರ್ ಲೇಔಟ್ ಮಹದೇವಪುರ, ಬಾಣಸವಾಡಿ, ಕೆಆರ್ ಪುರ, ಪೀಣ್ಯ, ಸೇರಿದಂತೆ ಹಲವು ಏರಿಯಾಗಳಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ.
ಬೆಂಗಳೂರಲ್ಲಿ ತಾಪಮಾನ ಏರಿಕೆ ಇಂದ ಹಾವುಗಳ ಕಾಟ ಹೆಚ್ಚಳವಾಗಿದೆ. ಬೆಂಗಳೂರಲ್ಲಿ ಗರಿಷ್ಠ 34 ರಿಂದ 36 ಡಿಗ್ರಿ ತನಕ ತಲುಪುತ್ತಿದೆ. ಮನುಷ್ಯ ಬಿಸಿಲಿನ ಝಳಕ್ಕೆ ಎಳನೀರು, ಜ್ಯೂಸ್, ಮಜ್ಜಿಗೆ ಮೊರೆ ಹೋದಂತೆ ಹಾವುಗಳು ಕೂಡ ತಣ್ಣನೆಯ ಪ್ರದೇಶವನ್ನ ಆಶ್ರಯಕ್ಕಾಗಿ ಹುಡುಕುತ್ತವೆ. ಹೀಗಾಗಿ ಮನೆಯ ಆವರಣ, ಶೂ ರ್‍ಯಾಕ್, ದೇವರ ಕೋಣೆ, ಬಾತ್ ರೂಮ್, ಕಿಟಕಿ, ಹಳೇ ಸಾಮಾಗ್ರಿ ತುಂಬಿರುವ ಕೊಠಡಿ, ಸಂಪ್ ಗಳತ್ತ ಬರುತ್ತಿವೆ. ಹೀಗಾಗಿ ಬೆಂಗಳೂರು ಮಂದಿಗೆ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಬೆಳಗ್ಗೆ ಆರಾಮಾಗಿ ಓಡಾಡುವಂತಿಲ್ಲ ಎಂಬ ಪರಿಸ್ಥಿತಿ ಇದೆ.
ಹಾವುಗಳ ಜೊತೆ ಸರಸವಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ: ವಿಡಿಯೋ ವೈರಲ್
ಇದರ ಜೊತೆಗೆ ಬಿಬಿಎಂಪಿ (BBMP) ವನ್ಯಜೀವಿ ವಿಭಾಗದ ಸ್ವಯಂ ಸೇವಕರಿಗೆ ಹಾವು ಹಿಡಿಯೋದು ಫುಲ್ ಟೈಮ್ ಕೆಲಸ ಆಗಿದೆ. ಒಂದು ವಿಭಾಗದಿಂದ ದಿನವೊಂದಕ್ಕೆ 15 ರಿಂದ 20 ಹಾವು ಹಿಡಿಯುವಂತೆ ಕರೆಗಳು ಬರ್ತಿದೆ. ಇದರಲ್ಲಿ ಮನೆಯಲ್ಲಿ ಹಾವುಗಳಿರುವ ಕರೆಗಳೇ ಹೆಚ್ಚಾಗಿದೆ. ಕಳೆದ ಒಂದು ವಾರದಿಂದಲೂ ಬಿಬಿಎಂಪಿ ವನ್ಯಜೀವಿ ಸಂರಕ್ಷಕರಿಗೆ ಹಾವು ರಕ್ಷಣೆ ಮಾಡೋದೆ ಸಾವಲಿನ ಕೆಲಸವಾಗಿದೆ.
ಯಾಕೆ ಹೆಚ್ಚಾಗ್ತಿದೆ ಹಾವುಗಳ ಕಾಟ?: ಹಾವುಗಳು ಹೆಚ್ಚು ತಣ್ಣನೆಯ ಹಾಗೂ ಹೆಚ್ಚು ಬಿಸಿಲಿನ ವಾತಾವರಣದಲ್ಲಿ ಇರುವುದಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆ ಬಿಸಿಲಿನ ಝಳ ಹೆಚ್ಚಾದಾಗ ಹಾವುಗಳು ಹೊರಗೆ ಬರುತ್ವೆ. ಮನೆಯ ತಣ್ಣನೆಯ ಪ್ರದೇಶಗಳಾದ ಅಡುಗೆ ಮನೆ, ದೇವರ ಕೋಣೆ ಮನೆಯ ವಾತವರಣ ಹಾವುಗಳಿಗೆ ಪೂರಕವಾಗಿದೆ. ಹೀಗಾಗಿ ಆಶ್ರಯ ಹುಡುಕಿ ಮನೆಗಳತ್ತ ಹಾವುಗಳು ನುಗ್ಗುತ್ತಿವೆ. ತಾಪಮಾನ ಹೆಚ್ಚಳವಾದಂತೆಲ್ಲಾ ಹಾವುಗಳು ಹೆಚ್ಚಾಗಿ ಮನೆಯಂಗಳಕ್ಕೆ ಲಗ್ಗೆ ಇಡುತ್ತವೆ. ಮನೆಯ ವಾತಾವರಣ ಹಾವುಗಳಿಗೆ ಪೂರಕವಾಗಿರೋದೆ ಇದಕ್ಕೆ ಕಾರಣ ಹಾವುಗಳಿಗೆ ಹಾನಿ ಮಾಡದೆ ಸ್ವಯಂ ಸೇವಕರಿಗೆ ಕರೆ ಮಾಡಿ ರಕ್ಷಿಸುವ ಕೆಲಸ ಪ್ರತಿಯೊಬ್ಬ ನಾಗರೀಕನೂ ಮಾಡಬೇಕಿದೆ.
ಹಾವು ಕಡಿತಕ್ಕೆ ಬೆಂಗಳೂರಲ್ಲಿ ಔಷಧಿ ತಯಾರಿಕೆ: ರಾಜ್ಯದಲ್ಲಿ ವಿಷ ಸರ್ಪದ ನಂಜಿನಿಂದ ಉಂಟಾಗುವ ಸಾವು ಹಾಗೂ ಅನಾರೋಗ್ಯ ಸಮಸ್ಯೆಗಳನ್ನು 2030ರ ವೇಳೆಗೆ ಶೇ.50 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನ ಪ್ರತಿ ನಂಜು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾರ ಚಾಲನೆ ನೀಡಿದೆ.2021-22ನೇ ಸಾಲಿನ ಬಜೆಟ್‌ನಲ್ಲಿ 7 ಕೋಟಿ ವೆಚ್ಚದಲ್ಲಿ ಪ್ರತಿ ನಂಜು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿ 2 ಕೋಟಿ ರು. ಹಣವನ್ನೂ ಮೀಸಲಿಟ್ಟಿತ್ತು.
ಕಸ್ಟಮ್ಸ್ ಅಧಿಕಾರಿಗಳಿಗೆ ವ್ಯಕ್ತಿಯ ಬಟ್ಟೆಯೊಳಗೆ ಸಿಕ್ತು 52 ಜೀವಂತ ಹಾವು, ಹಲ್ಲಿ
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಗಳೂರಿನ ಹೆಲಿಕ್ಸ್ ಬಯೋಟೆಕ್ ಪಾರ್ಕ್ನಲ್ಲಿರುವ ಐಬಿಎಬಿ ಸಂಸ್ಥೆ ಆವರಣದಲ್ಲಿ ಪ್ರತಿನಂಜು ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾವು ಕಡಿತದಿಂದ ಉಂಟಾಗುವ ಸಾವು - ನೋವು ಕಡಿಮೆ ಮಾಡಲು ಕೈಗೆಟಕುವ ದರದಲ್ಲಿ ಹಾಗೂ ಸುಲಭವಾಗಿ ದೊರಕುವ ಪ್ರತಿ ನಂಜನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ. ಐಐಎಸ್‌ಸಿಯ ಎಕಲಾಜಿಕಲ್ ಸೈನ್ಸ್‌ನಲ್ಲಿರುವ ‘ಎವಲ್ಯೂಷನರಿ ವೆನಾಮಿಕ್ಸ್ ಲ್ಯಾಬ್’ ಸಹಯೋಗದಲ್ಲಿ ಕೇಂದ್ರ ಸ್ಥಾಪಿಸುತ್ತಿದ್ದು, ಐಬಿಎಬಿ (IBAB) ಸಂಸ್ಥೆಯು ನೋಡಲ್ ಅನುಷ್ಠಾನ ಸಂಸ್ಥೆ ಆಗಿ ಹಾಗೂ ಐಐಎಸ್‌ಸಿ ಪಾಲುದಾರ ಸಂಸ್ಥೆಯ ಆಗಿ ಕಾರ್ಯನಿರ್ವಹಿಸಲಿದೆ.