ಬೋನ್ ಅಳವಡಿಸಿದರೂ ಅರಣ್ಯ ಇಲಾಖೆಗೆ ಚೆಳ್ಳೆ ಹಣ್ಣು ತಿನಿಸುತ್ತಿರುವ ಚಿರತೆ| ಐತಿಹಾಸಿಕ ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಪ್ರವೇಶ ನಿಷೇಧ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿ ಆನೆಗೊಂದಿ| ಮನೆಯಿಂದ ಹೊರ ಬಾರದ ಜನರು|
ರಾಮಮೂರ್ತಿ ನವಲಿ
ಗಂಗಾವತಿ(ನ.09): ಕಳೆದ ಒಂದು ವಾರದಿಂದ ಗಂಗಾವತಿ ತಾಲೂಕಿನ ಆನೆಗೊಂದಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆಯವರು ಬೋನ್ ಅಳವಡಿಸಿದರೂ ಚಿರತೆ ಸೆರೆ ಸಿಗದೆ ಸಿಬ್ಬಂದಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿದೆ.
ವಾರದ ಹಿಂದೆ ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿ ದುರ್ಗಾ ದೇವಸ್ಥಾನದ ಅಡುಗೆದಾರನ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೆ ಮತ್ತೇ ವಿರೂಪಾಪುರ ಗಡ್ಡೆ ಬಳಿ ದನಕರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಅಲ್ಲದೇ ಕಳೆದ ತಿಂಗಳು ಮಹಿಯೊಬ್ಬರು ಕೃಷಿ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಗಾಯಗೊಳಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ.
ಜಂಗ್ಲಿ ರಂಗಾಪುರ ಬಳಿ ಅರಣ್ಯ ಇಲಾಖೆಯವರು ಬೋನ್‌ನಲ್ಲಿ ಕುರಿ ಮರಿಯನ್ನು ಇಟ್ಟು ಚಿರತೆಗೆ ಆಸೆ ಹುಟ್ಟಿಸಿದ್ದರು. ಆದರೆ, ಚಿರತೆ ಚಾಣಕ್ಷತನದಿಂದ ಬೋನ್ ಒಳಗೆ ಬೀಳದೆ ಕುರಿ ಎತ್ತಿಕೊಂಡು ಹೋಗಿದೆ.
ಬೋನ್‌ಗಳ ಅಳವಡಿಕೆ:
ಆನೆಗೊಂದಿಯ ಬೆಟ್ಟಗುಡ್ಡಗಳು ಮತ್ತು ಬತ್ತದ ಗದ್ದೆಗಳಲ್ಲಿ ವಾಸವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು 7 ಬೋನ್‌ಗಳನ್ನು ಅಳವಡಿಸಿದ್ದಾರೆ. ಚಿರತೆ ಚಲನವಲನಗಳನ್ನು ಗುರುತಿಸಿರುವ ಇಲಾಖೆ ದುರ್ಗಾ ಬೆಟ್ಟದ ಬಳಿ 3 ಬೋನ್‌ಗಳು, ತಳವಾರ ಘಟ್ಟ1, ಸುದರ್ಶನ ವರ್ಮ ಎನ್ನುವವರ ತೋಟದ ಬಳಿ 1, ಕರಿಯಮ್ಮನ ಗಡ್ಡಿ ಬಳಿ 1, ಬೆಂಚಕುಟ್ರಿ ಎನ್ನುವ ಪ್ರದೇಶಗಳಲ್ಲಿ 1 ಬೋನ್ ಅಳವಡಿಸಿದೆ. ಈಗಾಗಲೇ ಡ್ರೋಣ್ ಕ್ಯಾಮೆರಾ ಮೂಲಕ ಅರಣ್ಯ ಇಲಾಖೆಯವರು 2 ದಿನಗಳ ಕಾಲ ವೀಕ್ಷಿಸಿದ್ದರೂ ಚಿರತೆ ಮಾತ್ರ ಕಾಣಿಸಿಕೊಂಡಿಲ್ಲ. ಈಗ ರಾತ್ರಿ ಸಮಯದಲ್ಲಿ ಚಿರತೆ ಬರುತ್ತದೆ ಎಂಬ ಕಾರಣಕ್ಕೆ ಕೆಲ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಗಂಗಾವತಿ: ಚಿರತೆ ದಾಳಿಗೆ ಯುವಕ ಬಲಿ, ಬೆಚ್ಚಿಬಿದ್ದ ಜನತೆ..!
ಅಧಿಕಾರಿಗಳ ಎಚ್ಚರ:
ದನ ಕರುಗಳು ಮತ್ತು ಕುರಿಗಳನ್ನು ಕಟ್ಟಿಕೊಂಡು ಹೊಲ, ಗದ್ದೆ ಮತ್ತು ಗುಡ್ಡದ ಅಂಚಿನಲ್ಲಿ ವಾಸ ಮಾಡುವ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆ ಸಹಾಯಕ ಆಯುಕ್ತರು, ಜಿಲ್ಲಾ ಅರಣ್ಯಾಧಿಕಾರಿಗಳು ಮತ್ತು ತಹಸೀಲ್ದಾರರು ಭೇಟಿ ನೀಡಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿ ವಾಸ ಮಾಡುವರಿಗೆ ಇಲಾಖೆ ಅಂತಿಮ ನೋಟಿಸ್ ನೀಡಿದ್ದು, ಕೂಡಲೇ ತೆರುವುಗೊಳಿಸಿ ಗ್ರಾಮಗಳಲ್ಲಿ ವಾಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಸಿಗದ ಆಹಾರ
ಆನೆಗೊಂದಿ ಪ್ರದೇಶದಲ್ಲಿ 3 ರಿಂದ 5 ಚಿರತೆಗಳು ಇರಬಹುದೆಂದು ಅರಣ್ಯ ಇಲಾಖೆಯವರು ಸರ್ವೇ ಮಾಡಿದ್ದು, ಹಸಿವಿಗಾಗಿ ಚಿರತೆಗಳು ಗುಡ್ಡ ಬೆಟ್ಟಗಳಿಂದ ಗ್ರಾಮಗಳತ್ತ ಬರಲು ಕಾರಣ ಎಂದು ಹೇಳುತ್ತಿದ್ದಾರೆ. ಬೆಟ್ಟಗಳಲ್ಲಿ ಚಿರತೆಗಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಆದ್ದರಿಂದ ಬೇರೆ ಬೇರೆ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಇನ್ನೊಂದಡೆ ಸಂತಾನೋತ್ಪತ್ತಿಗೋಸ್ಕರವೂ ಚಿರತೆಗಳು ಸಂಚರಿಸುತ್ತವೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕೇಳಿ ಬರುತ್ತದೆ.
ಗಂಗಾವತಿ: ಜಂಗ್ಲಿ-ರಂಗಾಪುರದ ಬಳಿ ಮತ್ತೆ ಚಿರತೆ ಪ್ರತ್ಯಕ್ಷ, ಬೆಚ್ಚಿಬಿದ್ದ ಗ್ರಾಮಸ್ಥರು
ಮನೆಯಿಂದ ಹೊರ ಬಾರದ ಜನರು:
ಚಿರತೆ ಬರುತ್ತದೆ ಎಂಬ ಸುದ್ದಿ ತಿಳಿಯುತ್ತಿರುವ ಜನರು ಮನೆಯಿಂದ ಹೊರ ಬರುತ್ತಿಲ್ಲ. ತಳವಾರ ಘಟ್ಟ, ರಂಗಾಪುರ ಜಂಗ್ಲಿ, ಕರಿಯಮ್ಮನ ಗಡ್ಡೆ, ಹನುಮನಹಳ್ಳಿ ಪ್ರದೇಶಗಳಲ್ಲಿ ಜನರು ಭಯ ಭೀತರಾಗಿದ್ದು, ಕೈಯಲ್ಲಿ ಬೆತ್ತಗಳನ್ನು ಹಿಡಿದುಕೊಂಡು ಮನೆಯಿಂದ ಹೊರ ಬರುತ್ತಿರುವದು ಸಾಮನ್ಯವಾಗಿದೆ. ಇನ್ನು ಕೆಲವರು ಸಿಡಿ ಮದ್ದುಗಳನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಾರೆ.
ಭಕ್ತರಿಗೆ ಪ್ರವೇಶ ನಿಷೇಧ:
ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನ (ಮೆಗೋಟಿ)ಕ್ಕೆ ಹೋಗುವ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ದುರ್ಗಾ ಬೆಟ್ಟದ ಬಳಿ ಚಿರತೆ ಸಂಚರಿಸುತ್ತಿದ್ದರಿಂದ ಆತಂಕದ ವಾತಾವರಣ ಮೂಡಿದೆ. ಅಲ್ಲದೆ ಅಲ್ಲಿಯ ಅಡುಗೆದಾರನ್ನು ಕೊಂದು ಹಾಕಿದೆ. ಈ ಕಾರಣಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರವೇಶ ರದ್ದು ಪಡಿಸಲಾಗಿದ್ದು, ಅಲ್ಲಿರುವ ಅರ್ಚಕರಿಗೂ ಮತ್ತು ಭಕ್ತರು ಜಾಗೃತಿಯಿಂದ ಇರಬೇಕೆಂದು ತಹಸೀಲ್ದಾರರು ಸೂಚನೆ ನೀಡಿದ್ದಾರೆ.
ಈಗಾಗಲೇ ಆನೆಗೊಂದಿ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. 7 ಬೋನ್‌ಗಳನ್ನು ಅಳವಡಿಸಲಾಗಿದೆ. ಜನರ ಗದ್ದಲದಿಂದ ಬಲೆಗೆ ಬೀಳುತ್ತಿಲ್ಲ. ಶೀಘ್ರದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ವಲಯಾಧಿಕಾರಿ ಶಿವರಾಜ ಮೇಟಿ ತಿಳಿಸಿದ್ದಾರೆ.