Earthquake in Chikkaballapura: ಮತ್ತೆ ಭೂಕಂಪನಕ್ಕೆ ನಡುಗಿದ ಜನತೆ: 3.6 ತೀವ್ರತೆ ದಾಖಲು

Kannadaprabha News   | Asianet News
Published : Dec 24, 2021, 05:04 AM IST
Earthquake in Chikkaballapura: ಮತ್ತೆ ಭೂಕಂಪನಕ್ಕೆ ನಡುಗಿದ ಜನತೆ:  3.6 ತೀವ್ರತೆ ದಾಖಲು

ಸಾರಾಂಶ

*   ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪ: ಅಧಿಕ ಮಳೆ ಕಾರಣ? *   ಅಧ್ಯಯನಕ್ಕಾಗಿ ವಿಪತ್ತು ನಿರ್ವಹಣಾ ತಂಡ ಇಂದು ಚಿಕ್ಕಬಳ್ಳಾಪುರಕ್ಕೆ *   ಶಾಲೆಯಿಂದ ಹೊರಗೆ ಓಡಿಬಂದ ಮಕ್ಕಳು  

ಬೆಂಗಳೂರು(ಡಿ.24):  ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಕೆಲವೆಡೆ ಗುರುವಾರ ಮತ್ತೆ ಭೂಕಂಪನ(Earthquake) ಸಂಭವಿಸಿದ್ದು, ಇದು ಅಂತರ್ಜಲ ಹೆಚ್ಚಾಗುವುದರಿಂದ (ಹೈಡ್ರೋ ಸೆಸ್ಮೊಸಿಟಿ) ಉಂಟಾಗುವ ಸಾಮಾನ್ಯ ಕಂಪನವೋ ಅಥವಾ ಬೇರೆ ಕಾರಣವಿದೆಯೋ ಎಂಬುದರ ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮುಂದಾಗಿದೆ. ಬುಧವಾರವಷ್ಟೇ ಭೂಕಂಪನ ಸಂಭವಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾದೇನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ 2.16ಕ್ಕೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಬುಧವಾರ ಬೆಳಗ್ಗೆ 7.10ರಿಂದ 7.15 ಗಂಟೆಯ ಅವಧಿಯಲ್ಲಿ ಜಿಲ್ಲೆಯ ಮಂಡಿಕಲ್‌ ಮತ್ತು ಭೋಗಪರ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 2.9 ಮತ್ತು 3 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ಸತತವಾಗಿ ಎರಡನೇ ದಿನವೂ ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಇಬ್ಬರು ವಿಜ್ಞಾನಿಗಳು(Scientists) ಅಧ್ಯಯನ ನಡೆಸಲು ಶುಕ್ರವಾರ ಘಟನಾ ಸ್ಥಳಕ್ಕೆ ತೆರಳಲಿದ್ದಾರೆ. ಅವರು ನೀಡುವ ವರದಿ ಆಧರಿಸಿ ಈ ಹಿಂದೆ ಉತ್ತರ ಕರ್ನಾಟಕದಲ್ಲಿ(North Karnataka) ನಡೆಸಿದಂತೆ ಒಂದು ತಿಂಗಳ ಕೂಲಂಕಷ ಅಧ್ಯಯನ ಅಗತ್ಯವಿದೆಯೇ ಎಂದು ಸರ್ಕಾರ ತೀರ್ಮಾನಿಸಲಿದೆ. ಸ್ಥಳಕ್ಕೆ ತೆರಳುವ ವಿಜ್ಞಾನಿಗಳು ಸಂಗ್ರಹಿಸುವ ಮಾಹಿತಿಯನ್ನು ರಾಷ್ಟ್ರೀಯ ಜಿಯೋಫಿಸಿಕಲ್‌ ಸಂಶೋಧನಾ ಸಂಸ್ಥೆಗೆ(National Geophysical Research Institute)  ಕಳುಹಿಸಿಕೊಡುತ್ತೇವೆ. ಈ ತಂಡ ನೀಡುವ ವರದಿ ಆಧರಿಸಿ ಉತ್ತರ ಕರ್ನಾಟಕದಲ್ಲಿ ನಡೆಸಿದಂತೆ ಒಂದು ತಿಂಗಳ ಕೂಲಂಕಷ ಅಧ್ಯಯನ ಅಗತ್ಯವಿದೆಯೇ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ ಎಂದು ಆಯುಕ್ತ ಡಾ. ಮನೋಜ್‌ ರಾಜನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Earthquake in Chikkaballapura : ಬೆಳ್ಳಂಬೆಳಗ್ಗೆ ಭೂಕಂಪನ : 3.0 ರಷ್ಟು ತೀವ್ರತೆ

ಹೈಡ್ರೋ ಸೆಸ್ಮೊಸಿಟಿ ಕಾರಣ?:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಭಾರಿ ಮಳೆಯಾಗಿದೆ. ಹೀಗಾಗಿ ಹೈಡ್ರೋ ಸೆಸ್ಮೊಸಿಟಿಯಿಂದಾಗಿ(Hydro Seismosity) ಅಂದರೆ ಅಂತರ್ಜಲ ಹೆಚ್ಚಾಗುವುದರಿಂದ ಭೂಮಿಯ ಒಳಪದರಗಳಲ್ಲಿ ನಡೆಯುವ ಚಟುವಟಿಕೆಯಿಂದಾಗಿ ಕಂಪನ ಸಂಭವಿಸಿರಬಹುದು ಎಂದು ಭೂಕಂಪನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಅಷ್ಟೇ ಅಲ್ಲದೆ ಭೂ ಕಂಪನ ಘಟಿಸಿದ ಪ್ರದೇಶವು ಗಟ್ಟಿಗ್ರಾನೈಟ್‌ ಶಿಲೆಗಳ ಪ್ರದೇಶವಾಗಿದೆ. ಈ ಪ್ರದೇಶ ಭೂಕಂಪನ ವಲಯ 2 (ತೀವ್ರ ಭೂಕಂಪ ಆಗುವ ಸಂಭವ ಅತ್ಯಂತ ಕಡಿಮೆ ಇರುವ ಪ್ರದೇಶ)ದಲ್ಲಿ ಬರುತ್ತದೆ. ಆದ್ದರಿಂದ ಭೂಮಿಯೊಳಗೆ ನೀರಿನ ಪೂರಣ ಹೆಚ್ಚಿರುವುದರಿಂದ ಕಂಪನ ಆಗಿರಬಹುದು ಎಂದು ತಿಳಿಸಿರುವುದಾಗಿ ಡಾ. ಮನೋಜ್‌ ರಾಜನ್‌ ಹೇಳುತ್ತಾರೆ.

ಶಾಲೆಯಿಂದ ಹೊರಗೆ ಓಡಿಬಂದ ಮಕ್ಕಳು

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ಸುತ್ತಮುತ್ತ ಮಧ್ಯಾಹ್ನ ಏಕಾಏಕಿ ಭೂಮಿ ಕಂಪಿಸಿದ್ದು, ಮನೆಯಲ್ಲಿದ್ದ ಪಾತ್ರೆ-ಪಗಡೆಗಳು ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಬಿದ್ದಿದೆ. ಇದರಿಂದ ಭಯಭೀತರಾದ ಜನ ಮನೆಯಿಂದ ಹೊರಗೋಡಿ ಬಯಲಿಗೆ ಬಂದಿದ್ದಾರೆ. ಶೆಟ್ಟಿಗೆರೆಯ ಸರ್ಕಾರಿ ಶಾಲೆಯಲ್ಲಿ ಊಟ ಮುಗಿಸಿ ತರಗತಿಗಳಿಗೆ ಹೋಗುತ್ತಿದ್ದ ಮಕ್ಕಳು(Childrens) ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಚೀರಾಡಿಕೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲ ಕಡೆ ಕಂಪನದ ತೀವ್ರತೆಗೆ ಕಲ್ಲುಚಪ್ಪಡಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ

ಏನಿದು ಹೈಡ್ರೋಸೆಸ್ಮೊಸಿಟಿ?

ಬಿಸಿಯಾಗಿರುವ ಕಲ್ಲಿಗೆ ನೀರು ಬಿದ್ದಾಗ ಶಬ್ದ ಬರುವಂತೆ ಕಾದ ಭೂಮಿಯೊಳಗೆ(Earth) ನೀರು ಇಳಿಯುತ್ತಿದ್ದಂತೆ ಅಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆದು ಭೂಮಿ ಕಂಪಿಸುತ್ತದೆ. ಇದನ್ನು ಹೈಡ್ರೋಸೆಸ್ಮೊಸಿಟಿ ಎನ್ನಲಾಗುತ್ತದೆ. ಈ ಬಾರಿ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಭಾರಿ ಪ್ರಮಾಣದ ಮಳೆ ಆಗಿರುವ ಕಾರಣ ಅಂತರ್ಜಲ ಹೆಚ್ಚಿ ಹೈಡ್ರೋಸೆಸ್ಮೊಸಿಟಿ ಆಗಿರಬಹುದು. ಈಗ ಮಳೆ ಕಡಿಮೆ ಆಗಿರುವುದರಿಂದ ಇನ್ನು ಕೆಲವು ದಿನದಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ಸಿಗಲಿದೆ ಎನ್ನುತ್ತಾರೆ ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ