* 12 ರಸ್ತೆ ನಿರ್ಮಾಣಕ್ಕೆ ಮರು ಟೆಂಡರ್
* ಈ ಹಿಂದೆ ಕರೆದಿದ್ದ ಟೆಂಡರ್‌ನಲ್ಲಿ ಹಲವು ಲೋಪ ದೋಷ
* ಹೊಸದಾಗಿ ಟೆಂಡರ್ ಕರೆಯಲು ಸೂಚನೆ: ಮುಖ್ಯಮಂತ್ರಿ ಬೊಮ್ಮಾಯಿ
ಬೆಳಗಾವಿ(ಡಿ.24): ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 191 ಕಿ.ಮೀ. ಉದ್ದದ 12 ಅತೀ ವಾಹನ ದಟ್ಟಣೆ ಹೊಂದಿರುವ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆಯ ಟೆಂಡರ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
ಕಾಂಗ್ರೆಸ್(Congress) ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ(Vidhan Parishat) ಉತ್ತರಿಸಿದ ಮುಖ್ಯಮಂತ್ರಿಗಳು, ಈ ಯೋಜನೆಯ ಟೆಂಡರನ್ನು ಕೆಆರ್‌ಡಿಸಿಎಲ್ ಪಡೆದಿತ್ತು. ಟೆಂಡರ್‌ನಲ್ಲಿ .350 ಕೋಟಿಗಳ ಈ ಯೋಜನೆಗೆ ಐದು ವರ್ಷಗಳ ನಿರ್ವಹಣೆಗೆ 700 ಕೋಟಿ ನೀಡಲು ಮುಂದಾಗಿತ್ತು. ಆದರೆ ಯಾವುದೇ ರಸ್ತೆ ನಿರ್ಮಾಣದ ಟೆಂಡರ್ ಪಡೆದ ಸಂಸ್ಥೆ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿರುತ್ತದೆ, ಆದರೆ ಈ ಅಂಶ ಟೆಂಡರ್‌ನಲ್ಲಿ ಇರಲಿಲ್ಲ. ಜೊತೆಗೆ ಟೆಂಡರ್‌ನಲ್ಲಿ ಆರೇಳು ಅಂಶಗಳಲ್ಲಿ ದೋಷ ಕಂಡು ಬಂದಿತ್ತು. ಹೀಗಾಗಿ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಕೆಟಿಟಿಪಿ ಕಾಯ್ದೆ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪಿ.ಆರ್.ರಮೇಶ್(PR Ramesh) 12 ಅತೀ ವಾಹನ ದಟ್ಟಣೆ ಹೊಂದಿರುವ ಈ ರಸ್ತೆಗಳ ಅಭಿವೃದ್ಧಿಗೆ 2019ರಲ್ಲಿ ಕೆಆರ್‌ಡಿಸಿಎಲ್‌ಗೆ(KRDCL) ನೀಡಲು ತೀರ್ಮಾನಿಸಲಾಗಿದೆ. 1220 ಕೋಟಿ ಮಂಜೂರು ಆಗಿದ್ದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
land Encroachment in Bengaluru : ರಾಜಕಾಲುವೆ ಮೇಲಿನ ಎಲ್ಲಾ ಕಟ್ಟಡಗಳು ತೆರವು
ರಸ್ತೆ ಗುಂಡಿಗೆ ವಿವಿಧ ಕಾಮಗಾರಿಗಳೇ ಕಾರಣ
ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಕೇವಲ ವಾಹನಗಳ ಓಡಾಡುವ ಮಾರ್ಗ ಮಾತ್ರ ಆಗದೇ, ರಸ್ತೆ ಅಡಿ ನೀರು, ಗ್ಯಾಸ್, ವಿದ್ಯುತ್ ಮಾರ್ಗ ಸೇರಿದಂತೆ ಅನೇಕ ವ್ಯವಸ್ಥೆಗಳು ಬರುತ್ತವೆ. ಅನೇಕ ಇಲಾಖೆಗಳ ಕೆಲಸ ನಡೆಯುತ್ತದೆ. ರಸ್ತೆ ನಿರ್ಮಾಣದ ವೇಳೆ ಮತ್ತು ಗುಂಡಿ ಭರ್ತಿ ವೇಳೆ ಅನುಸರಿಸುವ ಪದ್ಧತಿ ಬೇರೆ ಬೇರೆಯಾಗಿರುತ್ತದೆ. ಪ್ರಮುಖವಾಗಿ ಗುಂಡಿಗಳನ್ನು ಸರಿಯಾದ ಕ್ರಮದಲ್ಲಿ ಮುಚ್ಚದೇ ಒತ್ತಡದಲ್ಲಿ ಮುಚ್ಚುವ ಪರಿಣಾಮ ಹಾಗೂ ಅತೀ ಮಳೆ ಹಾಗೂ ಹೆಚ್ಚಿನ ಭಾರದ ವಾಹನಗಳ ಓಡಾಟದ ಕಾರಣ ದುರಸ್ತಿ ಮಾಡಿದ ಗುಂಡಿಗಳು ಮತ್ತೇ ಹಾಳಾಗುತ್ತಿವೆ. ಹೀಗಾಗಿ ರಸ್ತೆ ಗುಂಡಿ ಮುಚ್ಚುವಲ್ಲಿ ಹಲವಾರು ಆದೇಶ ಹೊರಡಿಸಲಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು. ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಪಾದಚಾರಿ ಮಾರ್ಗಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತುರ್ತು ಅಗತ್ಯದ 128 ಕಿ.ಮೀ. ರಾಜಕಾಲುವೆ ಮರು ನಿರ್ಮಾಣ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಪುನರ್ ನಿರ್ಮಾಣ ಮಾಡಲು ಹಲವು ಕ್ರಮ ಕೈಗೊಂಡಿದ್ದು, ಈ ಪೈಕಿ ತಕ್ಷಣ ತೀವ್ರ ಸಮಸ್ಯೆ ಇರುವ 128 ಕಿ.ಮೀ. ಉದ್ದದ ರಾಜಕಾಲುವೆ ಮರು ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದಕ್ಕಾಗಿ 1200 ಕೋಟಿಗಳನ್ನು ಇದೇ ವರ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 842 ಕಿ.ಮೀ. ಉದ್ದದ ರಾಜಕಾಲುವೆ ಗುರುತಿಸಲಾಗಿದ್ದು, ಈ ಪೈಕಿ 440 ಕಿ.ಮೀ. ರಾಜ ಕಾಲುವೆಯ ದುರಸ್ತಿ, ಗೋಡೆ ನಿರ್ಮಾಣ ಮಾಡಲಾಗಿದೆ. 2016-2021ರ ಅವಧಿಯಲ್ಲಿ 319 ಕಿ.ಮೀ. ರಾಜಕಾಲುವೆ ದುರಸ್ತಿ ಮಾಡಲಾಗಿದೆ. ರಾಜಕಾಲುವೆ ಮರು ನಿರ್ಮಾಣಕ್ಕೆ ಮಂಜೂರಾದ .2096 ಕೋಟಿ ಪೈಕಿ 1658 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
Bengaluru: ಪ್ರವಾಹ ತಡೆಯಲು 900 ಕೋಟಿ ವೆಚ್ಚದ ಹೊಸ ಪ್ಲಾನ್: ಸಿಎಂ ಬೊಮ್ಮಾಯಿ
ರಾಜಕಾಲುವೆ ಒತ್ತುವರಿ ಮಾಡಿ ಅನೇಕ ಅಕ್ರಮ ಎಸಗಲಾಗಿದೆ, ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಲಾಗಿದೆ. ಕೆಲವರು ಅತಿ ಎತ್ತರದ ಕಟ್ಟಡ ನಿರ್ಮಿಸಿದ್ದಾರೆ. 40 ಮೀಟರ್ ಅಗಲ ಇರಬೇಕಾದ ರಾಜಕಾಲುವೆ ಕೆಲವು ಕಡೆ ಏಳೆಂಟು ಮೀಟರ್ ಅಗಲವಿದೆ. ಕೆಲವು ಕಡೆ ರಾಜಕಾಲುವೆ ತುಂಬಿ ಹರಿಯುವ ಸ್ಥಿತಿ ಇದೆ. ಹೀಗಾಗಿ ಕೆಲವು ಕಡೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ(Government of Karnataka) ಎಲ್ಲ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
714 ಒತ್ತುವರಿ ತೆರವಿಗೆ ಕ್ರಮ
ರಾಜಕಾಲುವೆಯ(Raja Kaluve) 2626 ಒತ್ತುವರಿ ಪ್ರಕರಣಗಳು ಇದ್ದು, ಇದರ ವಿಸ್ತೀರ್ಣ ಸುಮಾರು 382 ಎಕರೆ ಇರುತ್ತದೆ. ಈ ಪೈಕಿ 1912 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ 714 ಸಂಖ್ಯೆಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಬೇಕಾಗಿದೆ. ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿ ಇವೆ. ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಒತ್ತುವರಿ ಮಾಡಿದ 98 ಮಾಲೀಕರ ವಿರುದ್ಧ ವಿಶೇಷ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿಸಲಾಗಿದೆ. ಅದೇ ರೀತಿ ಒತ್ತುವರಿಗೆ ಪ್ರೋತ್ಸಾಹ ನೀಡಿದ 20 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.