ಬಡ ವಿದ್ಯಾರ್ಥಿ ವೈದ್ಯನಾಗುವ ಕನಸಿಗೆ ನೀರೆರದ ಸುವರ್ಣ ನ್ಯೂಸ್‌: ಹರಿದು ಬಂದ ನೆರವಿನ ಮಹಾಪೂರ

By Kannadaprabha NewsFirst Published Nov 28, 2020, 9:16 AM IST
Highlights

ಗಂಟೆಯಲ್ಲಿ ಬಡ ವಿದ್ಯಾರ್ಥಿ ಖಾತೆಗೆ ಲಕ್ಷ ಲಕ್ಷ ಜಮೆ| ಸಹಾಯಸ್ತ ಚಾಚಿದ ಶಾಸಕ ಹಿಟ್ನಾಳ, ಸಿ.ವಿ. ಚಂದ್ರಶೇಖರ್‌| ವೈದ್ಯ ಕಾಲೇಜು ಶುಲ್ಕ 1.40 ಲಕ್ಷ ಪಾವತಿಗೆ ಶುಕ್ರವಾರವೇ ಕೊನೆ ದಿನವಾಗಿತ್ತು| ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ಸಂಜೀವಕುಮಾರ ಗುಡ್ಲಾನೂರುಗೆ ದಾನಿಗಳಿಂದ ನೆರವು| 

ಕೊಪ್ಪಳ(ನ.28):  ಎಂಬಿಬಿಎಸ್‌ ಸೀಟ್‌ ಸಿಕ್ಕಿದ್ದರೂ ಶುಲ್ಕ ಪಾವತಿಸಲು ಹಣ ಇರದೆ ಪರದಾಡುತ್ತಿದ್ದ ಬಡ ವಿದ್ಯಾರ್ಥಿಯ ನೆರವಿಗೆ ಕನ್ನಡಪ್ರಭ ಸೋದರ ಸಂಸ್ಥೆ ಸುರ್ವಣ ನ್ಯೂಸ್‌ ಧಾವಿಸಿ, ವರದಿ ಬಿತ್ತರಿಸುತ್ತಿದ್ದಂತೆ ನೆರವಿನ ಮಹಾಪೂರವೇ ಹರಿದು ಬಂದಿತು. ವಿ​ದ್ಯಾ​ರ್ಥಿಯ ಖಾತೆಗೆ ಶುಕ್ರವಾರ ಬರೋಬ್ಬರಿ 6 ಲಕ್ಷ ರು. ಜಮೆಯಾಗಿದ್ದು, ಇನ್ನು ಜಮೆಯಾಗುತ್ತಲೇ ಇದೆ.

ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ಸಂಜೀವಕುಮಾರ ಗುಡ್ಲಾನೂರು ನೀಟ್‌ನಲ್ಲಿ ಪಾಸಾಗಿ ಮಂಗಳೂರು ಖಾಸಗಿ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಲಭ್ಯವಾಗಿತ್ತು. ಶುಕ್ರವಾರ ಸಂಜೆಯೊಳಗಾಗಿ ಆತ 1.40 ಲಕ್ಷ ರು. ಪಾವತಿ ಮಾಡಬೇಕಾಗಿತ್ತು. ಆದರೆ, ಆತನ ಬಳಿ ಅವರಿವರ ಸಹಾಯದಿಂದ ಇದ್ದಿದ್ದು ಕೇವಲ 90 ಸಾವಿರ ರು. ಮಾತ್ರ. ಸಂಜೆಯೊಳಗೆ ಪಾವತಿ ಮಾಡದೆ ಇದ್ದರೇ ವೈದ್ಯನಾಗುವ ಕನಸಿಗೆ ಕಲ್ಲು ಬೀಳುತ್ತಿತ್ತು.

ಈ ವಿದ್ಯಾರ್ಥಿಗೆ MBBS ಮಾಡುವ ಆಸೆ ; ವೈದ್ಯನಾಗುವ ಕನಸಿಗೆ ಬೇಕಾಗಿದೆ ನೆರವಿನ ಹಸ್ತ

ಈ ಕುರಿತು ಸುರ್ವಣ ನ್ಯೂಸ್‌ ಬಿಗ್‌-3 ರಲ್ಲಿ ವರದಿ ಪ್ರಸಾರ ಮಾಡಿತು. ಆತನ ವಾಸ್ತವ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿಡಲಾಯಿತು. ಇದಕ್ಕೆ ರಾಜ್ಯಾದ್ಯಂತ ಸ್ಪಂದನೆ ಸಿಕ್ಕು ಅನೇಕರು ಸಹಾಯಸ್ತ ಚಾಚಿದರು. ಕೆಲವೇ ಗಂಟೆಯಲ್ಲಿ ಆತನ ಖಾತೆಗೆ ಬರೋಬ್ಬರಿ 6 ಲಕ್ಷ ರು. ಜಮೆಯಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಗುತ್ತಿಗೆದಾರ ಸುರೇಶ ಭೂಮರಡ್ಡಿ ಅವರು ಜಂಟಿಯಾಗಿ 50 ಸಾವಿರ ರು. ನೀಡಿದರು. ಇನ್ನು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ ಅವರು 25 ಸಾವಿರ ರು. ನೀಡಿದರು. ಆನಂದ್‌ ಗುರೂಜಿ 50 ಸಾವಿರ ರು. ಘೋಷಣೆ ಮಾಡಿದರು. ಶಿಕ್ಷಕರಾದ ಬಸವರಾಜ ಸವಡಿ 10 ಸಾವಿರ ರು., ಹೆಸರು ಹೇಳದ ಅನೇಕರು ನೇರವಾಗಿ ಖಾತೆಗೆ ಜಮೆ ಮಾಡಿದರು. ಹೀಗೆ, ಮಧ್ಯಾಹ್ನದ ವೇಳೆಗೆ ಖಾತೆಗೆ 5.70 ಲಕ್ಷ ರು. ಜಮೆಯಾಯಿತು. ಇನ್ನು ಅನೇಕರು ಕೊಡುವ ಭರವಸೆಯನ್ನು ಸಹ ನೀಡಿದ್ದಾರೆ.

ಕೇವಲ ಒಂದು ಗಂಟೆಯಲ್ಲಿ ಲಕ್ಷ ಲಕ್ಷ ರು. ಜಮೆಯಾಯಿತು. ತಕ್ಷಣ ಆತ ತಾನು ಕಾಲೇಜಿಗೆ ಪಾವತಿ ಮಾಡಬೇಕಾದ 1.40 ಲಕ್ಷ ರು.ಯನ್ನು ಪಾವತಿ ಮಾಡುವ ಮೂಲಕ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಯಿತು. ಕೈತಪ್ಪಿಸ ಹೋಗುತ್ತಿದ್ದ ಅವಕಾಶ ಆತನ ಮನೆ ಬಾಗಿಲಿಗೆ ಬಂದಿದೆ.

ಅತ್ಯಂತ ಖುಷಿಯಾಗಿದೆ. ನನ್ನ ಜೀವನದಲ್ಲಿ ಬಂದಿರುವ ಕಷ್ಟಇಷ್ಟು ಸುಲಭವಾಗಿ ಬಗೆ ಹರಿಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಶುಲ್ಕ ಪಾವತಿಸಲು ಕೊನೆಯ ದಿನವಾಗಿದ್ದರಿಂದ ಏನು ಮಾಡುವುದು ಎನ್ನುವುದು ತಿಳಿಯದೆ ಗೊಂದಲದಲ್ಲಿದ್ದೆ. ಸುವರ್ಣ ನ್ಯೂಸ್‌ನಲ್ಲಿ ವರದಿಯಾಗುತ್ತಿದ್ದಂತೆ ಲಕ್ಷ ಲಕ್ಷ ರು. ಜಮೆಯಾಗಿದೆ. ಸುವರ್ಣ ನ್ಯೂಸ್‌ಗೆ ನನ್ನ ಕೃತಜ್ಞತೆಗಳು ಎಂದು ವಿದ್ಯಾರ್ಥಿ ಸಂಜೀವಕುಮಾರ ತಿಳಿಸಿದ್ದಾರೆ. 

ಇದೊಂದು ರೀತಿಯಲ್ಲಿ ತೇರು ಎಳೆದಂತೆ ಆಯಿತು. ನಿಜಕ್ಕೂ ಖುಷಿಯ ಸಂಗತಿ. ವಿದ್ಯಾರ್ಥಿಯ ಎಂಬಿಬಿಎಸ್‌ ಕನಸು ನನಸು ಮಾಡುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಸುವರ್ಣ ನ್ಯೂಸ್‌ಗೆ ಅಭಿನಂದನೆಗಳು ಎಂದು ಶಿಕ್ಷಕ ಬಸವರಾಜ ಸವಡಿ ಹೇಳಿದ್ದಾರೆ. 
 

click me!