ಉತ್ತರಕನ್ನಡ: ಬಸ್‌ಗಳಿಗೆ ಮುಕ್ತವಾಗದ ಅನಶಿ ಘಾಟ್, ವಾಹನ ಸವಾರರ ಪರದಾಟ

By Girish GoudarFirst Published Aug 23, 2022, 11:02 PM IST
Highlights

ಸದ್ಯ ಭಾರೀ ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ಸೂಚನೆ ಆಧರಿಸಿ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ: ಡಿಸಿ 

ವರದಿ: ಭರತ್‌ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಆ.23):  ಕಾರವಾರ-ಬೆಳಗಾವಿ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದಲ್ಲಿ ನಿರಂತರವಾಗಿ ಗುಡ್ಡ ಕುಸಿತ ಸಂಭವಿಸುತ್ತಿದೆ. ಸದ್ಯ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತ ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದೆ. ಆದರೆ, ಕಳೆದ ಬಾರಿ ಕುಸಿತಗೊಂಡ ಪ್ರದೇಶದಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಪರ್ಕ ಕಲ್ಪಿಸಿದ್ದು ಶಾಶ್ವತ ರಸ್ತೆ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಈ ನಡುವೆ ಮತ್ತೆ ಮತ್ತೆ ಗುಡ್ಡ ಕುಸಿತಗಳು ನಡೆಯೋ ಕಾರಣ ಈ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗುವ ಆತಂಕ ಎದುರಾಗಿದೆ. 

ಕರಾವಳಿ ಜಿಲ್ಲೆಯಾಗಿರುವ ಉತ್ತರಕನ್ನಡದಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಕರಾವಳಿಯಲ್ಲಿ ಪ್ರಸ್ತುತ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದು, ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಜನರು ಸದ್ಯ ಕೊಂಚ ನಿರಾಳರಾಗಿದ್ದಾರೆ. ಆದರೆ, ಜಿಲ್ಲೆಯಲ್ಲಿ ಗುಡ್ಡ ಕುಸಿತದ ಆತಂಕ ಮಾತ್ರ ದೂರವಾಗಿಲ್ಲ. ಅದರಲ್ಲೂ ಕಾರವಾರ ಬೆಳಗಾವಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದ ಬಳಿ ಮೇಲಿಂದ ಮೇಲೆ ಗುಡ್ಡ ಕುಸಿತ ಉಂಟಾಗುತ್ತಿದ್ದು ವಾಹನ ಸವಾರರ ಪರದಾಟ ಮಾತ್ರ ತಪ್ಪಿಲ್ಲ.  

ಉತ್ತರಕನ್ನಡ: ಕುಮಟಾದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ

ಕಾರವಾರದಿಂದ ಜೋಯಿಡಾ ಮಾರ್ಗವಾಗಿ ಬೆಳಗಾವಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟದಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬೀಳುತ್ತಿದೆ. ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಿರುವ ಹಿನ್ನೆಲೆ ಆಗಾಗ ಮಣ್ಣು ಕುಸಿಯುತ್ತಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಓಡಾಡುವ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ. ಗುಡ್ಡದ ಮಣ್ಣು ತೆರವು ಮಾಡಿದ ಪ್ರದೇಶದಲ್ಲೇ ಮತ್ತೆ ಮೂರ್ನಾಲ್ಕು ಬಾರಿ ಗುಡ್ಡ ಕುಸಿತವಾಗಿದೆ. ಈ ಕಾರಣದಿಂದ ಹೆದ್ದಾರಿಯಲ್ಲಿ ಸದ್ಯ ಲಘು ವಾಹನಗಳಿಗೆ ಹಗಲು ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆ ಜೋಯಿಡಾ ಭಾಗದಿಂದ ಅಗತ್ಯ ಕೆಲಸ ಕಾರ್ಯಕ್ಕೆ ಕಾರವಾರಕ್ಕೆ ಬರುವವರಿಗೆ ತೊಂದರೆ ಉಂಟಾಗಿದ್ದು ಪರ್ಯಾಯ ಮಾರ್ಗ ದೂರವಾಗುತ್ತದೆ. ಹೀಗಾಗಿ ಶೀಘ್ರದಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು ಅನ್ನೋದು ಜನರ ಒತ್ತಾಯ.

ಇನ್ನು ಜೋಯಿಡಾ, ದಾಂಡೇಲಿ ಭಾಗದ ಜನರು ಜಿಲ್ಲಾ ಕೇಂದ್ರ ಕಾರವಾರಕ್ಕೆ ಆಗಮಿಸಲು ಇದೇ ಪ್ರಮುಖ ಮಾರ್ಗವಾಗಿದೆ. ಇದನ್ನು ಹೊರತುಪಡಿಸಿದಲ್ಲಿ ಸುಮಾರು 40 ರಿಂದ 50 ಕಿಮೀ ಸುತ್ತುವರೆದು ತೆರಳಬೇಕು. ಆದರೆ, ಸದ್ಯ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಮಾತ್ರ ಕೇವಲ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಇರುವುದರಿಂದ ಜಿಲ್ಲಾಕೇಂದ್ರಕ್ಕೆ ಹೋಗಿ ಕಚೇರಿ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ಸಾಗುವುದು ಕಷ್ಟ ಸಾಧ್ಯವಾಗಿದೆ. ಇದೀಗ ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಗೋವಾ, ಮಹಾರಾಷ್ಟ್ರಗಳಲ್ಲಿರುವ ಈ ಭಾಗದ ನಿವಾಸಿಗಳು ತಮ್ಮ ಮನೆಗಳಿಗೆ ಆಗಮಿಸಲು ಅಥವಾ ತೆರಳಲು ಪರದಾಡಬೇಕಾದ ಸ್ಥಿತಿಯಿದೆ. 

ಪರಹಿತಕ್ಕಾಗಿ ಸ್ವಹಿತ ತ್ಯಾಗ ಮಾಡೋಣ : ರಾಘವೇಶ್ವರ ಶ್ರೀ

ಈ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಭಾರೀ ವಾಹಗಳ ಓಡಾಟಕ್ಕೆ ಅನುಕೂಲ ಒದಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಘಟ್ಟದಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಗುಡ್ಡದ ಮಣ್ಣು ನಿರಂತರವಾಗಿ ಕುಸಿಯುತ್ತಿದ್ದು ಸದ್ಯ ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುಕೂಲಮಾಡಿಕೊಡಲು ತಂಡವೊಂದನ್ನು ಘಟ್ಟದಲ್ಲೇ ನಿಯೋಜಿಸಲಾಗಿದೆ. ಸದ್ಯ ಭಾರೀ ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ಸೂಚನೆ ಆಧರಿಸಿ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಅಂತ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಭಾರೀ ಮಳೆಯಿಂದಾಗಿ ಅಣಶಿಘಟ್ಟದಲ್ಲಿ ನಿರಂತರ ಗುಡ್ಡ ಕುಸಿತ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದು, ಈ ಬಾರಿ ಚತುರ್ಥಿಗೆ ಮನೆಗೆ ವಾಪಸ್ಸಾಗುವವರು ಸಮಸ್ಯೆಗೀಡಾಗುವಂತಾಗಿದೆ. ಆದಷ್ಟು ಬೇಗ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಅಣಶಿ ಘಟ್ಟದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶೀಘ್ರದಲ್ಲಿ ವ್ಯವಸ್ಥೆ ಮಾಡಬೇಕಿದೆ.
 

click me!