ಲಾಕ್‌ಡೌನ್‌: ದಿನಸಿಗೆ ಜನರ ಪರದಾಟ, ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಮಂದಿ!

By Kannadaprabha NewsFirst Published Apr 13, 2020, 7:36 AM IST
Highlights
ಗ್ರಾಮೀಣ ಅಂಗಡಿಕಾರರಿಗೆ ಎಲ್ಲ ದಿನಬಳಕೆ ವಸ್ತು ನೀಡದ ಪಟ್ಟಣ ಅಂಗಡಿಕಾರರು| ಅಡುಗೆ ಎಣ್ಣೆ ನಮಗೆ ಸರಬರಾಜು ಆಗಿಲ್ಲ| ಲಾಕ್‌ಡೌನ್‌ ಜಾರಿಯಾದಾಗಿನಿಂದ ಗ್ರಾಮೀಣ ಪ್ರದೇಶದ ಅಂಗಡಿಕಾರರಿಗೆ ಹೋಬಳಿ ಕೇಂದ್ರದ ಅಂಗಡಿಗಳಲ್ಲಿ ಈ ಹಿಂದೆ ನೀಡುತ್ತಿದ್ದ ದರಕ್ಕೆ ದಿನಸಿ ನೀಡುತ್ತಿಲ್ಲ| ಎಲ್ಲ ವಸ್ತುಗಳ ಬೆಲೆ ಕೆಜಿಗೆ 10 ರಿಂದ 15 ರೂ. ಹೆಚ್ಚಿಸಿ ನೀಡುತ್ತಿದ್ದಾರೆ| 
 
ಕೊಪ್ಪಳ(ಏ.13): ಮಹಾಮಾರಿ ಕರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಯಿಂದಾಗಿ ಗ್ರಾಮ ಹಾಗೂ ಹನಮನಾಳ ಹೋಬಳಿ ವ್ಯಾಪ್ತಿಯ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಅಡುಗೆ ಎಣ್ಣೆ ಹಾಗೂ ವಿವಿಧ ಕಿರಾಣಿ ದಿನಬಳಕೆ ಸಿಗದಿದ್ದರಿಂದ ಗ್ರಾಮೀಣ ಜನರು ತೊಂದರೆ ಅನುಭವಿಸುವಂತಾಗಿದೆ.

ಹೆಚ್ಚು ಹಣ ವಸೂಲಿ:

ಗ್ರಾಮೀಣ ಪ್ರದೇಶದ ಅಂಗಡಿಕಾರರಿಗೆ ಬೆಳಗ್ಗೆ ಹೋಬಳಿ ಕೇಂದ್ರಕ್ಕೆ ಬಂದು ಸಾರ್ವಜನಿಕರಿಗೆ ಬೇಕಾದ ದಿನಬಳಕೆ ವಸ್ತುಗಳನ್ನು ತಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮೀಣ ಅಂಗಡಿಕಾರರಿಗೆ ಎಲ್ಲ ದಿನಬಳಕೆ ವಸ್ತುಗಳನ್ನು ಪಟ್ಟಣದ ಅಂಗಡಿಕಾರರು ನೀಡುತ್ತಿಲ್ಲ. ಅಡುಗೆ ಎಣ್ಣೆ ನಮಗೆ ಸರಬರಾಜು ಆಗಿಲ್ಲ. ಹೋಲ್‌ಸೇಲ್‌ ದರದಲ್ಲಿ ಎಣ್ಣೆ ಬಾಕ್ಸ್‌ ಕೊಡಲು ನಮ್ಮ ಬಳಿಯೂ ಇಲ್ಲವೆಂದು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಅಂಗಡಿಕಾರರು ಹೋಬಳಿ ಕೇಂದ್ರದಿಂದ ಇನ್ನೊಂದು ಹೋಬಳಿ ಕೇಂದ್ರಕ್ಕೆ ಅಲೆದರೂ ನಿಗದಿತ ಬೆಲೆಗೆ ಅಡುಗೆ ಎಣ್ಣೆ ಮತ್ತು ದಿನಸಿ ಸಿಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಜನರು ತೊಂದರೆ ಅನುಭವಿಸುವಂತಾಗಿದೆ.

ಒಂದೇ ದಿನ 66 ಜನರ ಸ್ಯಾಂಪಲ್‌ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!

ಹನುಮಸಾಗರ ಮತ್ತು ಹನುಮನಾಳ ಹೋಬಳಿ ಕೇಂದ್ರಗಳಲ್ಲಿ ಒಟ್ಟು 96 ಹಳ್ಳಿಗಳು ಬರುತ್ತವೆ. ಹೋಬಳಿ ಕೇಂದ್ರಗಳಲ್ಲಿ ಬೆಳಗ್ಗೆ 6ರಿಂದ 8ರವರೆಗೆ ಕಿರಾಣಿ ಅಂಗಡಿಗಳ ಬಾಗಿಲು ತಗೆಯಲಾಗುತ್ತಿದೆ.
ಗ್ರಾಮೀಣ ಭಾಗದ ಜನರು ಅಡುಗೆ ಎಣ್ಣೆಗಾಗಿ ಜನರು ಪರದಾಡುತ್ತಿದ್ದು, ಒಂದು ಬಾಕ್ಸ್‌ ಕೋಡಿ ಎಂದು ಗ್ರಾಮೀಣ ಅಂಗಡಿಕಾರರು ಕೇಳಿದರೆ ಈ ಹಿಂದೆ . 800ಕ್ಕೆ 10 ಪ್ಯಾಕೇಟ್‌ನ ಒಂದು ಬಾಕ್ಸ್‌ಗೆ ನೀಡುತ್ತಿದ್ದರು. ಆದರೆ ಈಗ . 1000ರಿಂದ . 1100 ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಅಂಗಡಿಕಾರರು ಎಣ್ಣೆ ಬಿಟ್ಟು ಬೇರೆ ಎಲ್ಲಾ ಸಾಮಗ್ರಿಗಳನ್ನು ತಗೆದುಕೊಂಡು ಬರುತ್ತಿದ್ದು, ಗ್ರಾಮೀಣ ಜನತೆಗೆ ಅಡುಗೆ ಎಣ್ಣೆ ಕೊಂಡುಕೊಳ್ಳುವುದು ಸಮಸ್ಯೆಯಾಗಿದೆ.

ಹೋಲ್‌ಸೇಲ್‌ ದಿನಸಿ ಸಿಗುತ್ತಿಲ್ಲ:

ಲಾಕ್‌ಡೌನ್‌ ಜಾರಿಯಾದಾಗಿನಿಂದ ಗ್ರಾಮೀಣ ಪ್ರದೇಶದ ಅಂಗಡಿಕಾರರಿಗೆ ಹೋಬಳಿ ಕೇಂದ್ರದ ಅಂಗಡಿಗಳಲ್ಲಿ ಈ ಹಿಂದೆ ನೀಡುತ್ತಿದ್ದ ದರಕ್ಕೆ ದಿನಸಿ ನೀಡುತ್ತಿಲ್ಲ. ಬದಲಾಗಿ ಎಲ್ಲಾ ವಸ್ತುಗಳ ಬೆಲೆಯನ್ನು ಕೆಜಿಗೆ 10 ರಿಂದ 15 ರೂಪಾಯಿ ಹೆಚ್ಚಿಸಿ ನೀಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣರಿಗೆ ನಿಗದಿತ ದರಕ್ಕೆ ದಿನಸಿ ಸಿಗುತ್ತಿಲ್ಲ. ಗ್ರಾಮೀಣರು ದಿನಸಿ ಬೆಲೆ ಕೇಳಿ ಸುಸ್ತಾಗುತ್ತಿದ್ದಾರೆ.

ಲಾಕ್‌ಡೌನ್‌ ಜಾರಿಯಾದಾಗಿನಿಂದ ಹೋಬಳಿ ಕೇಂದ್ರದ ಅಂಗಡಿಕಾರರು ಗ್ರಾಮೀಣ ಅಂಗಡಿಕಾರರಿಗೆ ದಿನಬಳಕೆ ವಸ್ತುಗಳನ್ನು ಹೋಲ್‌ಸೇಲ್‌ ದರಕ್ಕೆ ನೀಡುತ್ತಿಲ್ಲ. ಎಲ್ಲಾ ವಸ್ತುಗಳ ಬೆಲೆಯನ್ನು ಹೆಚ್ಚಿಗೆ ಹಾಕುತ್ತಿದ್ದಾರೆ. ಮುಖ್ಯವಾಗಿ ಅಡುಗೆ ಎಣ್ಣೆ (ರುಚಿ ಗೋಲ್ಡ್‌) ನಮ್ಮ ಬಳಿ ಇಲ್ಲ ಎನ್ನುತ್ತಿದ್ದಾರೆ. ಕೋಡಿ ಎಂದು ಒತ್ತಾಯ ಮಾಡಿದರೆ ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ. ಇದರಿಂದ ಗ್ರಾಮೀಣರಿಗೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮೀಣ ಅಂಗಡಿ ವ್ಯಾಪಾರಸ್ಥ ಹುಲ್ಲಪ್ಪ ಗದ್ದೇಪ್ಪ ಹೇಳಿದ್ದಾರೆ. 
 
click me!