* ಶಾಲೆ-ಕಾಲೇಜುಗಳಿಗೆ ತೆರಳಲು ಬಸ್ ಸಿಗದೆ ವಿದ್ಯಾರ್ಥಿಗಳ ತೊಳಲಾಟ
* ಎಷ್ಟೋ ಸಲ ಮನವಿ, ಒತ್ತಾಯ ಮಾಡಿದರೂ ಸಮಸ್ಯೆಗೆ ಸಿಗದ ಪರಿಹಾರ
* ವಿದ್ಯಾರ್ಥಿಗಳು ಒಳಗೊಂಡಂತೆ ಸಾರ್ವಜನಿಕರ ನರಕಯಾತನೆ
ಸಂಡೂರು(ಜೂ.23): ಸಾರಿಗೆ ಸಚಿವ ಶ್ರೀ ರಾಮುಲು ಅವರ ತವರು ಜಿಲ್ಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ದರೋಜಿ ಗ್ರಾಮದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.
ಹೊಸ ದರೋಜಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವ 6.30 ರಿಂದ10 ಗಂಟೆ ವರೆಗೆ ವಿವಿಧ ಹಂತದಲ್ಲಿ ತರಗತಿಗಳಿಗೆ ತೆರಳಬೇಕು ಎಂಬು ಕಾತುರದಲ್ಲಿ ವಿದ್ಯಾರ್ಥಿಗಳೆಲ್ಲ ಬಸ್ ನಿಲ್ದಾಣಕ್ಕೆ ಬಂದರೆ ಯಾವುದೇ ಬಸ್‌ಗಳಿಲ್ಲದೆ ಆತಂಕದಲ್ಲಿಯೇ ಕಾಯುವ ಪರಿಸ್ಥಿತಿ ಇದೆ. ಇಲ್ಲಿನ ಅನೇಕ ಗ್ರಾಮಗಳು ವಿದ್ಯಾರ್ಥಿಗಳು ಬಸ್ ಬರುವವರೆಗೆ ಕಾದು ಕೆಲವರು ಶಾಲಾ ಕಾಲೇಜುಗಳಿಗೆ ತೆರಳಿದರೆ ಇನ್ನೂ ಕೆಲವರು ಬಸ್‌ಸಿಗದೆ ಮನೆಗಳಿಗೆ ಹಿಂತಿರುಗಿ ಗೈರಾಗುವ ವಾತಾವರಣವಿದೆ.
undefined
ನಾನು ಮುಖ್ಯಮಂತ್ರಿ ಆಗುತ್ತೇನೆ: ಜನಾರ್ದನ ರೆಡ್ಡಿ
ಬೆಳಗಿನ ಜಾವ ಮಂತ್ರಾಲಯ, ಅನಂತಪುರ ಹಾಗೂ ಕರ್ನಾಟಕದ ಅಂತಾರಾಜ್ಯ ಸಂಚಾರಿ ಬಸ್‌ಗಳು ಇಲ್ಲಿ ನಿಲ್ಲಿಸುವುದಿಲ್ಲ. ವಿದ್ಯಾರ್ಥಿಗಳೆಂದರೆ ಸಾರಿಗೆ ಇಲಾಖೆ ಸಿಬ್ಬಂದಿ ಮೂಗು ಮುರಿಯುತ್ತಾರೆ. ಇದಲ್ಲದೆ ಈ ಭಾಗದಲ್ಲಿ ಸಂಚರಿಸುವ ಗಂಗಾವತಿ, ಬೆಂಗಳೂರು ಮುಂತಾದ ಎಕ್ಸ್‌ಪ್ರೆಸ್ ಬಸ್‌ಗಳು ಕೆಲವೊಮ್ಮೆ ತಂಗದೆ ವಿದ್ಯಾರ್ಥಿಗಳ ಸಂಕಷ್ಟಹೇಳತೀರದಾಗಿದೆ. ಸಂಜೆ 3.30ರಿಂದ 7 ಗಂಟೆಯ ತನಕ ವಿದ್ಯಾರ್ಥಿಗಳು ಮನೆಗೆ ತೆರಳುವ ಸಮಯ. ಆಗಲೂ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಒಳಗೊಂಡಂತೆ ಸಾರ್ವಜನಿಕರೂ ನರಕಯಾತನೆ ಅನುಭವಿಸುತ್ತಿದ್ದಾರೆ. ದರೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದಾಪುರ, ಹಳೆ ದರೋಜಿ ಮಾತ್ರವಲ್ಲದೆ ಪಕ್ಕದ ತಾಲೂಕುಗಳ ಏಳುಬೆಂಚಿ ಗ್ರಾಮದ , ಮಾವಿನಳ್ಳಿ, ಹೊನ್ನಳ್ಳಿ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಂದಲೇ ಕಂಪ್ಲಿ, ಬಳ್ಳಾರಿ ಹಾಗೂ ಇತರೆಡೆ ಸಂಚಾರ ಮಾಡಬೇಕಾಗಿದ್ದು, ಬಸ್ ದುರವಸ್ಥೆಯಿಂದ ರೋಸಿಹೋಗಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ದರೋಜಿ ಗ್ರಾಮವು ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಬರುತ್ತದೆ. ಆದರೂ ಸಂಡೂರು ಡಿಪೋದಿಂದ ಯಾವುದೇ ಬಸ್‌ಗಳನ್ನು ಬಿಡಲು ಆಗುವುದಿಲ್ಲ. ಬಿಟ್ಟರೂ ಈ ಭಾಗದ ಜನರ, ವಿದ್ಯಾರ್ಥಿಗಳ ಒಡನಾಟವೆಲ್ಲಾ ಬಳ್ಳಾರಿ ಮತ್ತು ಕಂಪಲಿ ಮಾರ್ಗದಲ್ಲಿವೆ. ಈಚೆಗೆ ತಾಲೂಕು ಆಡಳಿತದಿಂದ ಮಾದಾಪುರಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ವೇಳೆಯೂ ಬಸ್ ಸಮಸ್ಯೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೂ ಪರಿಹಾರ ಮಾತ್ರ ದೊರೆತಿಲ್ಲ. ಶೈಕ್ಷಣಿಕ ವರ್ಷಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆಗೆ ಇನ್ನಾದರೂ ಸಾರಿಗೆ ಸಚಿವರು ಸ್ಪಂದಿಸಬೇಕು ಎಂದು ಈ ಭಾಗದ ವಿದ್ಯಾರ್ಥಿಗಳಾದ ರಾಜಾಭಕ್ಷಿ, ಶಂಕರ್, ಶಿವು, ರಾಜಾ, ಮಹೇಂದ್ರ , ಸ್ವಾಮಿ, ಸಂಗಮೇಶ್, ಯುವರಾಜ, ಪವನ್, ಕುಮಾರಸ್ವಾಮಿ, ಓಂ ಪ್ರಕಾಶ್, ಆಕಾಶ್, ಗಿರೀಶ್,ದೇವಿಕಾ, ಮೀನಾ, ಸೌಜನ್ಯಾ, ಸಂಗೀತಾ, ಲಕ್ಷ್ಮೇ, ರಂಜಿತಾ, ತಿಪ್ಪೇಶ್, ಮಂಜು, ನವೀನ್, ಮೌನೇಶ್, ಗಿರೀಶ್, ಕಾರ್ತಿಕ್ ಮತ್ತಿತರರು ಒತ್ತಾಯಿದ್ದಾರೆ.