ಹುಬ್ಬಳ್ಳಿ: ಲಾಕ್‌ಡೌನ್‌ ಇದ್ದರೂ ಓಡಾಟ ನಿರಾತಂಕ, ರಸ್ತೆಗಿಳಿದವರಿಗೆ ಲಾಠಿ ರುಚಿ

By Kannadaprabha News  |  First Published Jul 16, 2020, 7:24 AM IST

ಬೆಳಗ್ಗೆ ಮಾರುಕಟ್ಟೆ, ಎಪಿಎಂಸಿಯಲ್ಲಿ ಜನಸಂದಣಿ| ಅನಗತ್ಯವಾಗಿ ರಸ್ತೆಗಿಳಿದವರ ಬೈಕ್‌ ವಶಕ್ಕೆ| ಪರದಾಡಿದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶಿಕ್ಷಕರು| ತುರ್ತು ಸೇವೆ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ|


ಹುಬ್ಬಳ್ಳಿ(ಜು.16): ಕೊರೋನಾ ಹಾವಳಿ ತಪ್ಪಿಸಲು ಅನಿವಾರ್ಯವಾಗಿ ಎಂಟು ದಿನಗಳ ಲಾಕ್‌ಡೌನ್‌ ಘೋಷಿಸಿದರೂ ಜನತೆಗೆ ಬುದ್ಧಿ ಬರುತ್ತಿಲ್ಲ. ಲಾಕ್‌ಡೌನ್‌ ದಿನವೂ ಬೆಳಗ್ಗೆಯೇ ಜನತೆ ಗುಂಪು ಗುಂಪಾಗಿ ಖರೀದಿಗೆ ಮುಗಿಬಿದ್ದಿದ್ದು ಇಲ್ಲಿನ ಮಾರುಕಟ್ಟೆಗಳಲ್ಲಿ ಕಂಡು ಬಂತು.

ಹತ್ತು ದಿನಗಳ ಲಾಕ್‌ಡೌನ್‌ ಘೋಷಣೆ ಒಂದು ರೀತಿಯಲ್ಲಿ ಅರ್ಧದಿನ ಲಾಕ್‌ಡೌನ್‌ ರೀತಿಯಲ್ಲಿ ಜಾರಿಯಾಗುತ್ತಿದೆ. ಬೆಳಗ್ಗೆ 11ರ ವರೆಗೆ ಇದೇ ಪರಿಸ್ಥಿತಿ ಮುಂದುವರಿದಿತ್ತು. ಪೊಲೀಸರು ಲಾಠಿ ರುಚಿ ತೋರಿಸಿದ ಬಳಿಕವೇ ಮನೆಗಳತ್ತ ಜನರು ಹೆಜ್ಜೆ ಹಾಕಿದರು. ಇದರಿಂದಾಗಿ ಬೆಳಗ್ಗೆ ಜನಜಂಗುಳಿಯಿಂದ ಕೂಡಿದ್ದ ಪ್ರದೇಶಗಳೆಲ್ಲ ಮಧ್ಯಾಹ್ನದ ಮೇಲೆ ಬಿಕೋ ಎನ್ನುತ್ತಿದ್ದವು. ಜು. 24ರಂದು ರಾತ್ರಿ ಎಂಟು ಗಂಟೆಯವರೆಗೆ ಸಂಪೂರ್ಣ ಲಾಕ್‌ಡೌನ್‌ ಇರಲಿದೆ.

Tap to resize

Latest Videos

ಬೆಳಗ್ಗೆ ಫುಲ್‌ ರಶ್‌:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಗ್ಗೆ 10ರ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಎಪಿಎಂಸಿ, ಜನತಾ ಬಜಾರ್‌, ದುರ್ಗದಬೈಲ್‌,  ಹಳೆಹುಬ್ಬಳ್ಳಿ ಮಾರುಕಟ್ಟೆಗಳೆಲ್ಲ ಬೆಳಗ್ಗೆ ಫುಲ್‌ ರಶ್‌ ಆಗಿದ್ದವು. ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬಿದ್ದಿದ್ದರು. ಸರಾಫಗಟ್ಟಿಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿತ್ತು. ಹಣ್ಣು, ತರಕಾರಿ, ದಿನಸಿ, ಕಿರಾಣಿ ವಸ್ತುಗಳ ಖರೀದಿಯ ಭರಾಟೆ ಜೋರಾಗಿತ್ತು. ಸಾಮಾಜಿಕ ಅಂತರ ಮರೆತು ಗ್ರಾಹಕರು ಗುಂಪುಗೂಡಿದ್ದರು. ವ್ಯಾಪಾರಿಗಳು ಅಕ್ಕಪಕ್ಕ ಕುಳಿತು ವಹಿವಾಟು ನಡೆಸಿದರು. ಕೊರೋನಾ ಭಯವಿಲ್ಲದೆ ಜನಜಾತ್ರೆ ಸೇರಿತ್ತು. ಕೆಲವರಂತೂ ಮಾಸ್ಕ್‌ ಕೂಡ ಧರಿಸಿರಲಿಲ್ಲ.

ಹುಬ್ಬಳ್ಳಿ: ಕೊರೋನಾ ಚಿಕಿತ್ಸೆ ಫಲಿಸದೆ ಎಎಸ್‌ಐ ಸಾವು

ಹುಬ್ಬಳ್ಳಿಯಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಲಾಕ್‌ಡೌನ್‌ ಆದೇಶ ಜಾರಿಯಾಗುತ್ತಿದ್ದಂತೆ ಪೊಲೀಸರು ಲಾಠಿ ಹಿಡಿದು ರಸ್ತೆಗಿಳಿದರು. ತರಕಾರಿ ಮಾರುಕಟ್ಟೆಗಳಲ್ಲಿನ ವ್ಯಾಪಾರವನ್ನು ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಿದರು. ಕೆಲ ವ್ಯಾಪಾರಸ್ಥರಿಗೆ ಲಾಠಿ ರುಚಿ ಕೂಡ ತೋರಿಸಿದ್ದು ಕಂಡು ಬಂತು. ಮಧ್ಯಾಹ್ನದ ಮೇಲೆ ನಗರ ಸಂಪೂರ್ಣ ಸ್ತಬ್ಧವಾಯಿತು. ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ರಸ್ತೆಗಳು, ಬಸ್‌ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಸಾರಿಗೆ ಸಂಸ್ಥೆಯ ಬಸ್‌, ಆಟೋ, ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಖಾಸಗಿ ವಾಹನಗಳು ರಸ್ತೆಗೆ ಇಳಿದಿಲ್ಲ.

ಯುವಕರಿಗೆ ಲಾಠಿ ರುಚಿ:

ಅನಗತ್ಯವಾಗಿ ಸಂಚರಿಸುವವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಹಳೇ ಹುಬ್ಬಳ್ಳಿ, ಕಸಬಾಪೇಟೆ, ಕಮರಿಪೇಟೆ, ಶಹರಠಾಣೆ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಬೈಕ್‌ ಮೇಲೆ ಸುತ್ತಾಡುವವರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದರು. ಬೈಕ್‌ ಮೇಲೆ ಬರುವವರನ್ನು ತಡೆದು ಅನಗತ್ಯವಾಗಿ ಹೊರಬರುತ್ತಿರುವುದಕ್ಕೆ ಪೊಲೀಸರು ತರಾಟೆ ತೆಗೆದುಕೊಳ್ಳುತ್ತಿದ್ದರು.

ಬೈಕ್‌ ವಶಕ್ಕೆ:

ಉಪನಗರ ಠಾಣೆ ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೈಕ್‌ ಮತ್ತು ಕಾರುಗಳ ತಪಾಸಣೆ ನಡೆಸಿದರು. ಕೆಲಸವಿಲ್ಲದೆ ಹೊರಗೆ ಬಂದಿದ್ದ ಕೆಲ ಬೈಕ್‌ಗಳನ್ನು ಸೀಜ್‌ ಮಾಡಿದ್ದಾರೆ. ಜಪ್ತಿ ಮಾಡಿದ ವಾಹನಗಳನ್ನು ಜು. 24ರ ವರೆಗೆ ಪೊಲೀಸರ ವಶದಲ್ಲೆ ಇಟ್ಟುಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ತುರ್ತು ಸೇವೆ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ವಾಹನಗಳ ಪರಿಶೀಲನೆ ಜೋರಾಗಿ ಸಾಗಿತ್ತು.

ಪರದಾಡಿದ ಶಿಕ್ಷಕರು

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜನೆಗೊಂಡ ಧಾರವಾಡ ಜಿಲ್ಲೆಯ ಮಾಧ್ಯಮಿಕ ಶಾಲಾ ಶಿಕ್ಷಕರು ಬುಧವಾರ ಅಕ್ಷರಶಃ ಪರದಾಡಿದರು. ಧಾರವಾಡದ ವಿವಿಧ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳಿದ್ದು, ಹುಬ್ಬಳ್ಳಿ ಸೇರಿ ನಾನಾ ತಾಲೂಕು,ಗ್ರಾಮೀಣ ಪ್ರದೇಶಗಳಿಂದ ಬರುವ ಶಿಕ್ಷಕರಿಗೆ ಹುಬ್ಬಳ್ಳಿಯಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿತ್ತು. ಬೆಳಗ್ಗೆ 250ಕ್ಕೂ ಹೆಚ್ಚು ಶಿಕ್ಷಕರು ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಸೇರಿದ್ದರು. ಆದರೆ ಕೇವಲ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಇದರಲ್ಲಿ 35-40 ಶಿಕ್ಷಕರು ತೆರಳಿದರು. ಉಳಿದವರು ಪರಾಡಬೇಕಾಯಿತು.

ಕೆಲವು ಶಿಕ್ಷಕರು ಕಾರುಗಳಲ್ಲಿ ತೆರಳಿದರೆ, ಮೂರ್ನಾಲ್ಕು ಶಿಕ್ಷಕರು ಸೇರಿ ಆಟೋರಿಕ್ಷಾ ಮಾಡಿಕೊಂಡು ತೆರಳಿದರು. ಇನ್ನು ಕೆಲ ಶಿಕ್ಷಕರು ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಏತನ್ಮಧ್ಯೆ ಬಂದ ಖಾಸಗಿ ಶಾಲೆಯ ವಾಹನದಲ್ಲಿ ಶಿಕ್ಷಕರು ನಾ ಮುಂದೆ ತಾ ಮುಂದು ಎಂದು ಮುಗಿ ಬಿದ್ದರು. ವಾಹನ ಭರ್ತಿಯಾದರೂ ಕೆಲವರು ನಿಂತುಕೊಂಡೆ ಪ್ರಯಾಣಿಸಿದರು. ಇಷ್ಟಾದರೂ ಇನ್ನೂ ಹಲವಾರು ಮೌಲ್ಯ ಮಾಪಕರು ನಿಲ್ದಾಣದಲ್ಲೇ ನಿಂತಿದ್ದರು.
 

click me!