ಆರೋಪಗಳ ಸುರಿ ಮಳೆ ಬಳಿಕ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಸ್ವ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಮನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನಿತಾ ಅಧಿಕಾರಿಗಳಿಗೂ ಸೂಚನೆ ನೀಡಿದರು.
ಕನಕಪುರ (ಮಾ.22): ಪಿಂಚಣಿ ಸಮಸ್ಯೆ, ಪೌತಿ ಖಾತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ರೈತರನ್ನು ಅಲೆಸಬೇಡಿ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ವರ್ಷಗಟ್ಟಲೇ ಅವರ ಕೆಲಸಗಳಿಗೆ ತಾಲೂಕು ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ, ಅಧಿಕಾರಿಗಳು ಗ್ರಾಮಗಳಿಗೆ ಬರುತ್ತಿದ್ದಾರೆ, ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಐವತ್ತು ಮನೆಗಳನ್ನು ವಸತಿ ಯೋಜನೆಯಡಿ ನೀಡಲಾಗುತ್ತದೆ. ಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ : ಅನಿತಾ ಕುಮಾರಸ್ವಾಮಿ ಅಸಮಾಧಾನ ...
ದಟ್ಟಹೊಗೆ ಕಾರುವ ಕಾರ್ಖಾನೆಗಿಲ್ಲ ಲಗಾಮು: ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಗೌಡ ಉಪವಿಭಾಗಾಧಿಕಾರಿ ಮಂಜುನಾಥ್ ಹಾಗೂ ತಹಸೀಲ್ದಾರ್ ವರ್ಷ ಒಡೆಯರ್ ಅವರಿಗೆ ಗಬ್ಬಾಡಿ ಗ್ರಾಮದ ಸಮೀಪ ಮರಡಿ ಇಂಡಸ್ಟ್ರಿಸ್ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು ಹಲವಾರು ವರ್ಷಗಳಿಂದ ಇದರಿಂದ ರೈತರಿಗೆ ಹಲವು ರೀತಿಯ ತೊಂದರೆಗಳು ಕಾಯಿಲೆಗಳು ಉಂಟಾಗುತ್ತಿವೆ. ಅಧಿಕಾರಿಗಳಿಗೆ ಮನವಿ ಮಾಡಿದರು ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಅವಲತ್ತುಕೊಂಡರು.
ಕಂದಾಯ ಇಲಾಖೆ ಬಗ್ಗೆ ಮಾತನಾಡಿದ ಅವರು ಸರ್ವೇ ಮಾಡಲು ಬರುವ ಸರ್ವೇಯರ್‌ಗಳು ದುಡ್ಡು ಕೊಡದಿದ್ದರೆ ಸರಿಯಾದ ರೀತಿಯಲ್ಲಿ ವರ್ತಿಸುವುದಿಲ್ಲ. ದುಡ್ಡಿಲ್ಲದೆ ಕೆಲಸವನ್ನೇ ಮಾಡುವುದಿಲ್ಲ ಎಂದು ಆರೋಪಿಸಿದರು.
ಸಮಸ್ಯೆಗಳ ಮಹಾಪೂರ: ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಕಗ್ಗಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಾಗುವಳಿ ಚೀಟಿ, ಪೌತಿಖಾತೆ ಬಹು ವರ್ಷಗಳಿಂದ ಸರ್ಕಾರ ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ನೀಡಿಲ್ಲ. ಇತ್ತೀಚೆಗೆ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಸಂಧ್ಯ ಸುರಕ್ಷಾ, ವಿಧವಾ, ವೃದ್ಧಾಪ್ಯ ವೇತನ ಮಂಜೂರಾತಿ ಸೇರಿದಂತೆ ಸರ್ವೇ ಇಲಾಖೆಯಲ್ಲಿನ ಸಮಸ್ಯೆ ಬಗೆಹರಿಸುವಂತೆ ಸಮಸ್ಯೆಗಳ ಅರ್ಜಿಗಳನ್ನು ಸಲ್ಲಿಸಿದರು.
ಸಣ್ಣಪುಟ್ಟಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ಕಾರ್ಯಕ್ರಮದಲ್ಲಿ ಸಣ್ಣಪುಟ್ಟಸಮಸ್ಯೆಗಳಾದ ಪಿಂಚಣಿ ಸಮಸ್ಯೆ, ವಿಧವಾ ವೇತನ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆಯೂ ಇತ್ತು. ಇದೇ ವೇಳೆ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ವರ್ಷಾಒಡೆಯರ್, ಇಒ ಮೋಹನ್ ಬಾಬು, ಟಿಎಚ್‌ಒ ಡಾ.ನಂದಿನಿ, ಬಿಇಒ ಜಯಲಕ್ಷ್ಮಿ , ಶಿರಸ್ತೇದಾರ್ ರಘು, ಡಿಟಿಒ ದೊರೆಸ್ವಾಮಿ, ಆರ್.ಐ.ಚನ್ನೇಗೌಡ, ಶಿವರುದ್ರಯ್ಯ, ಗ್ರಾಮ ಲೆಕ್ಕಾಧಿಕಾರಿಗಳಾದ ಈಶ್ವರ್ ರಾವ್, ಶಿವಲಿಂಗಯ್ಯ, ಮಂಜುನಾಥ್, ಮೋಹನ್ ಕುಮಾರ್ ಸೇರಿದಂತೆ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.