ಲಿಂಗನಮಕ್ಕಿಯಿಂದ ನೀರು ಹೊರಕ್ಕೆ: ನದಿ ದಂಡೆ ನಿವಾಸಿಗಳೆದೆಯಲ್ಲಿ ಢವ ಢವ..!

By Kannadaprabha News  |  First Published Sep 4, 2019, 3:04 PM IST

ಹೊನ್ನಾವರ ಲಿಂಗನಮಕ್ಕಿ ಅಣೆಕಟ್ಟು ಹಾಗೂ ಗೇರಸೊಪ್ಪಾ ಶರಾವತಿ ಟೇಲರೀಸ್ ಅಣೆಕಟ್ಟಿನಿಂದ ಮಂಗಳವಾರ ಒಟ್ಟು 30 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದು ತಳಭಾಗದ ಶರಾವತಿ ನದಿ ಎಡಬಲ ದಂಡೆಗಳ ನಿವಾಸಿಗಳೆದೆಯಲ್ಲಿ ಪ್ರವಾಹ ಭೀತಿಯ ಶುರುವಾಗಿದೆ. ಪ್ರವಾಹ ಬಂದಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆಯಾಗಲಿದೆ.


ಕಾರವಾರ(ಸೆ.04): ಲಿಂಗನಮಕ್ಕಿ ಅಣೆಕಟ್ಟು ಹಿನ್ನೀರು ಪ್ರದೇಶದ ಸಾಗರ ಶಿವಮೊಗ್ಗ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆ ಪ್ರಮಾಣದಿಂದ ಲಿಂಗನಮಕ್ಕಿ ಅಣೆಕಟ್ಟಿನ ಒಳಹರಿವು ಹೆಚ್ಚಳವಾಗಿ 1818.95 ಅಡಿಯಷ್ಟು ಗರಿಷ್ಟಮಟ್ಟ ತಲುಪಿದ ಕಾರಣ ಮಂಗಳವಾರ ಅಣೆಕಟ್ಟಿನ 11 ಗೇಟ್‌ಗಳನ್ನು ತೆರದು ಹತ್ತು ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.

ಲಿಂಗನಮಕ್ಕಿ ಅಣೆಕಟ್ಟಿನ ಕೆಳಭಾಗದಲ್ಲಿರುವ ಗೇರಸೊಪ್ಪಾ ಶರಾವತಿ ಟೇಲರೀಸ್ ಅಣೆಕಟ್ಟಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಹೊರಬಿಟ್ಟ 10 ಸಾವಿರ ಕ್ಯುಸೆಕ್ ನೀರಿನ ಜತೆ ಶರಾವತಿ ಕೊಳ್ಳದಲ್ಲಿನ ಸುರಿಯುವ ಮಳೆ ಪ್ರಮಾಣವೂ ಸೇರಿಕೊಳ್ಳುವ ಕಾರಣ ಜಲಾಶಯಮಟ್ಟ 50.52 ಮೀಟರ್‌ಗೆ ಇನ್ನೂ 5 ಮೀಟರ್ ಬಾಕಿ ಇರುವಂತೆ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ನೀರು ಬಿಡಲಾಗಿದೆ.

Latest Videos

undefined

ವಿದ್ಯುತ್‌ಗಾರದ ನಾಲ್ಕು ಯುನಿಟ್‌ಗಳಿಂದ ವಿದ್ಯುತ್ ಉತ್ಪಾದಿಸಲು ಬಳಸುವ 21,538 ಸಾವಿರ ಕ್ಯುಸೆಕ್ ಜತೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಹೊರಬಿಟ್ಟ 10 ಸಾವಿರ ಕ್ಯುಸೆಕ್ ನೀರನ್ನೂ ಸೇರಿಸಿ ಒಟ್ಟು 31,538 ಸಾವಿರ ಕ್ಯುಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗಿದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟಿನಿಂದ 31,538 ಕ್ಯುಸೆಕ್ ನೀರು ಹೊರಬಿಟ್ಟ ಕಾರಣ ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತಳಿಯ ಎಡಬಲ ದಂಡೆಗಳಲ್ಲಿ ವಾಸಿಸುವ 400ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಸುರಿಯುವ ಮಳೆಯ ಪ್ರಮಾಣವನ್ನು ಅವಲಂಬಿಸಿ ಅಣೆಕಟ್ಟಿನಿಂದ ಹೊರಬಿಡುವ ನೀರಿನ ಪ್ರಮಾಣವನ್ನು ಏರಿಕೆ ಮಾಡುವ ಅಥವಾ ಇಳಿಕೆ ಮಾಡುವ ನಿರ್ಧಾರವನ್ನು ಕೆಪಿಸಿ ತೆಗೆದುಕೊಳ್ಳಲಿದೆ ಎಂದು ಕೆಪಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಗ್ಗು ಪ್ರದೇಶ ಜಲಾವೃತ:

ಹೊನ್ನಾವರ ತಾಲೂಕಿನಲ್ಲಿ ಸಹ ಮಳೆಯಾಗುತ್ತಿದ್ದು, ಶರಾವತಿ ನದಿಯನ್ನು ಕೂಡಿಕೊಳ್ಳುವ ಗುಂಡಬಾಳ, ಭಾಸ್ಕೇರಿ ಹೊಳೆಗಳು ಸಹ ತುಂಬಿ ಹರಿಯುತ್ತಲಿದ್ದು, ಅಣೆಕಟ್ಟಿನಿಂದ ನೀರು ಬಿಟ್ಟ ಕಾರಣ ಶರಾವತಿ ನದಿಪಾತಳಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಹೊಳೆ ಹಾಗೂ ನದಿಯಂಚಿನ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಂಕಷ್ಟಕ್ಕೆ ಸಿಲುಕಿದೆ.

ಜನರ ಜೀವನದ ಜೊತೆ ಚೆಲ್ಲಾಟ:

ಅಣೆಕಟ್ಟು ಭರ್ತಿಯಾಗುವವರೆಗೆ ಕಾಯುವ ಕೆಪಿಸಿ ಆನಂತರ ಒಮ್ಮೆಲೇ ನೀರು ಬಿಟ್ಟು ಶರಾವತಿ ನದಿಯಂಚಿನ 8 ಗ್ರಾಪಂ ವ್ಯಾಪ್ತಿಗಳಲ್ಲಿನ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಹಂತ ಹಂತವಾಗಿ ನೀರುಬಿಟ್ಟು ಪ್ರವಾಹ ಪರಿಸ್ಥಿತಿಯನ್ನು ತಡೆಯಬಹುದಿತ್ತು ಎಂಬ ಆಕ್ಷೇಪ ನದಿಯಂಚಿನ ಎಡಬಲದಂಡೆಗಳ ನಿವಾಸಿಗಳಿಂದ ವ್ಯಕ್ತವಾಗಿದೆ.

ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ ಹೇಳಿಕೆ ಮರೆತ ಕೆಪಿಸಿ:

ವಿದ್ಯುತ್ ನಿಗಮ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳು 2008 ಜುಲೈ 14 ಮತ್ತು 2008 ಜುಲೈ 25ರಂದು ಶರಾವತಿ ನದಿ ನೆರೆ ಸಂತ್ರಸ್ತರ ವಿಚಾರದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ ಹೇಳಿಕೆಯನ್ನು ಮರೆತಂತೆ ಕಾಣುತ್ತಿದೆ. ನಿಗಮವು ಮಾನವ ಹಕ್ಕುಗಳ ಆಯೋಗದ 2016 ಡಿಸೆಂಬರ್ 24ರಂದು, ಆದೇಶ ಸಂಖ್ಯೆ ಎಚ್‌ಆರ್‌ಸಿ 1785/2088 ಉಲ್ಲಂಘನೆ ಮಾಡುತ್ತಿರುವುದು ಸರಿಯಲ್ಲ ಎಂದು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ಹಾಗೂ ಗ್ರಾಪಂ ಪ್ರತಿನಿಧಿಗಳ ತಾಲೂಕು ಒಕ್ಕೂಟದ ಅಧ್ಯಕ್ಷ ಕೇಶವ ನಾಯ್ಕ ಬಳ್ಕೂರು, ಉಪಾಧ್ಯಕ್ಷ ಯೋಗೀಶ್ ರಾಯ್ಕರ ಉಪ್ಪೋಣಿ ಪ್ರತಿಕ್ರಿಯಿಸಿದ್ದಾರೆ.

ಕೋಟಿ ಆಸೆಗಾಗಿ ಜನರ ಜೀವದ ಜೊತೆ ಚೆಲ್ಲಾಟ:

ನಿಗಮವು ಕೋಟ್ಯಂತರ ರುಪಾಯಿ ಲಾಭದ ದುರಾಸೆಯಿಂದ ಜನರ ಜೀವದ ಜತೆ ಪುನಃ ಚೆಲ್ಲಾಟವಾಡವ ಚಾಳಿಯನ್ನು ಮುಂದು ವರಿಸಿರುವುದು ಸ್ಪಷ್ಟವಾಗಿದೆ. ಅಣೆಕಟ್ಟುಗಳು ತುಂಬಿ ತುಳುಕುವವರೆಗೂ ಕಾದು ಪೂರ್ಣ ಭರ್ತಿಯಾದ ನಂತರವೇ ಹೆಚ್ಚುವರಿ ನೀರನ್ನು ಏಕಾಏಕಿ ಹೊರಬಿಟ್ಟು ಕೃತಕ ಪ್ರವಾಹ ಸೃಷ್ಟಿಸಲು ಮುಂದಾಗಿರುವುದು ತೀರಾ ಖಂಡನೀಯ. ನದಿ ಪಾತ್ರದ ಜನರು ಪ್ರವಾಹ ಭೀತಿಯಿಂದ ಗಣೇಶ ಹಬ್ಬದ ಆಚರಣೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಮಧ್ಯೆಪ್ರವೇಶಿಸಿ ಶರಾವತಿ ನದಿಪಾತ್ರದಲ್ಲಿ ವಿದ್ಯುತ್ ನಿಗಮವು ಕೃತಕ ಪ್ರವಾಹ ಸೃಷ್ಟಿಸಲಿರುವದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.  

click me!