
ಬೆಂಗಳೂರು (ಜೂ.15): ನಿಷೇಧಾಜ್ಞೆ ಜಾರಿಗೊಳಿಸಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದ ಕ್ರಮಕ್ಕೆ ಸಾರ್ವಜನಿಕರು ಆಕ್ಷೇಪಿಸಿದ ಬಳಿಕ ಎಚ್ಚೆತ್ತ ಅಧಿಕಾರಿಗಳು, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಮುಂದಿನ ಸರ್ವೀಸ್ ರಸ್ತೆಯಲ್ಲಿ ಸಾರ್ವಜನಿಕರು ಓಡಾಟಕ್ಕೆ ಶುಕ್ರವಾರ ಅವಕಾಶ ಕಲ್ಪಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಅವರ ಸಹಚರರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ದರ್ಶನ್ ಬಂಧನ ಹಿನ್ನೆಲೆಯಲ್ಲಿ ಠಾಣೆ ಮುಂದೆ ಅವರ ಅಭಿಮಾನಿಗಳು ಜಮಾವಣೆಯಾಗುತ್ತಿದ್ದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಠಾಣೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಅಂತೆಯೇ ಠಾಣೆ ಮುಂದಿನ ಸರ್ವೀಸ್ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿ ನಿರ್ಬಂಧಿಸಿದರು. ಈ ಕ್ರಮಕ್ಕೆ ಸ್ಥಳೀಯರು ಆಕ್ಷೇಪಿಸಿದರು. ನಮಗೆ ರಸ್ತೆಯಲ್ಲಿ ಓಡಾಟಕ್ಕೆ ನಿಷೇಧಿಸಿದರೆ ತೊಂದರೆಯಾಗಲಿದೆ. ನಾವು ಎರಡ್ಮೂರು ಕಿ.ಮೀ ಬಳಸಿಕೊಂಡು ಹೋಗಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ಷೇಪಿಸಿದರು. ಕೊನೆಗೆ ಸಾರ್ವಜನಿಕರ ವಿರೋಧಕ್ಕೆ ಮಣಿದು ಸಂಚಾರ ನಿರ್ಬಂಧವನ್ನು ಅಧಿಕಾರಿಗಳು ತೆರವುಗೊಳಿಸಿದರು.
ಬಂಧಿತರ ಸಂಖ್ಯೆ 16ಕ್ಕೇರಿಕೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆ ಜಿಲ್ಲೆಯ ಡಿವೈಎಸ್ಪಿ ಮುಂದೆ ನಟ ದರ್ಶನ್ ಅವರ ಮತ್ತಿಬ್ಬರು ಸಹಚರರು ಶರಣಾಗಿದ್ದಾರೆ. ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿಯಾಗಿದೆ. ಚಿತ್ರದುರ್ಗದ ಅನುಕುಮಾರ್ ಹಾಗೂ ಜಗದೀಶ್ ಶರಣಾಗಿದ್ದು, ಅವರಿಬ್ಬರನ್ನು ಬಂಧಿಸಿ ಬಳಿಕ ಬೆಂಗಳೂರು ಪೊಲೀಸರಿಗೆ ಚಿತ್ರದುರ್ಗದ ಅಧಿಕಾರಿಗಳು ಒಪ್ಪಿಸಿದ್ದಾರೆ. ಜೂ.8 ರಂದು ಬೆಳಗ್ಗೆ ಅಪಹರಿಸಿ ಬೆಂಗಳೂರಿಗೆ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಜಗದೀಶ್, ಅನುಕುಮಾರ್ ಹಾಗೂ ರವಿಶಂಕರ್ ಕರೆತಂದಿದ್ದರು.
ಏನೋ ಆಗಿಹೋಯ್ತು ಸಾರ್... ತನಿಖೆ ವೇಳೆ ಪೊಲೀಸರೆದುರು ದರ್ಶನ್ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ
ನಂತರ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಬಿಟ್ಟು ರಾಘವೇಂದ್ರ ಹೊರತುಪಡಿಸಿ ಇನ್ನುಳಿದ ಮೂವರು ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಗುರುವಾರ ಸಹ ಮತ್ತೊಬ್ಬ ಆರೋಪಿ ರವಿ ಶರಣಾಗಿದ್ದ. ಹೀಗೆ ಪೊಲೀಸರ ಮುಂದೆ ತಾವಾಗಿಯೇ ಬಂದ ಮೂವರನ್ನು ಬಂಧಿಸಿ ಶುಕ್ರವಾರ ರಾತ್ರಿ ನಗರಕ್ಕೆ ಪೊಲೀಸರು ಕರೆತಂದಿದ್ದಾರೆ. ಈ ಮೂವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಣದಲ್ಲಿ ಈ ಮೂವರು ಪಾತ್ರ ವಹಿಸಿದ್ದರು ಎನ್ನಲಾಗಿದೆ.