* ಪಿಎಂ ಕಿಸಾನ್, ಅಂಗವಿಕಲರ, ವೃದ್ಧಾಪ್ಯ, ವಿಧವಾ ವೇತನ ಹಣ ಸಾಲಕ್ಕೆ ಜಮೆ
* ಬ್ಯಾಂಕುಗಳಿಂದ ರೈತರಿಗೆ ಗಧಾಪ್ರಹಾರ
* ಪಿಂಚಣಿ ಹಣವನ್ನೂ ನೀಡದಿದ್ದರೆ ಹೇಗೆ ಬದುಕುವುದು ಎಂದು ಪ್ರಶ್ನಿಸಿದ ರೈತರು
ಆನಂದ್ ಎಂ. ಸೌದಿ
ಯಾದಗಿರಿ(ಜೂ.24): ಬರ, ನೆರೆ ಹಾಗೂ ಕೊರೋನಾಘಾತದಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ಬ್ಯಾಂಕುಗಳು ಮತ್ತೊಂದು ಮರ್ಮಾಘಾತ ನೀಡಿದಂತಿವೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ನೆರವಾಗಲೆಂದು ಸರ್ಕಾರ ಬಿಡುಗಡೆ ಮಾಡುವ ಮಾಸಾಶನ ಹಣವನ್ನು ಫಲಾನುಭವಿಗಳಿಗೆ ನೀಡಲೊಪ್ಪದ ಶಹಾಪುರ ತಾಲೂಕಿನ ಸಗರ ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳು, ದ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆಂದು ದೂರುಗಳು ಕೇಳಿಬಂದಿವೆ.
undefined
ಬ್ಯಾಂಕುಗಳಿಗೆ ಸಾಲದ ಹಣ ಮರುಪಾವತಿಸಲು ಆಗಿಲ್ಲ ಎಂಬ ಕಾರಣಕ್ಕಾಗಿ ಅನೇಕರ ಇಂತಹ ಪಿಂಚಣಿ ಹಣವನ್ನು ಸಾಲದ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ. ಕೊರೋನಾದಂತಹ ಈ ಭೀಕರ ಸಂದರ್ಭದಲ್ಲಿ ಬದುಕಲು ಬೇಕಾದ ಹಣವನ್ನೂ ಬ್ಯಾಂಕುಗಳು ನೀಡದಿರುವುದು ರೈತರನ್ನು ಕಂಗಾಲಾಗಿಸಿದೆ.
ಕಳೆದೊಂದು ವರ್ಷದಿಂದ ಹಣ ನೀಡದೆ ಸತಾಯಿಸುತ್ತಿರುವ ಬ್ಯಾಂಕು ಅಧಿಕಾರಿಗಳು, ಸಾಲದ ಖಾತೆಗೆ ಇದನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮೂರು ವರ್ಷಗಳಿಂದ ಸತತ ಬರ ಹಾಗೂ ನೆರೆ ನಮ್ಮನ್ನು ಕಾಡಿದ್ದ ಮಧ್ಯೆಯೇ, ನಮ್ಮ ತಂದೆಗೆ ಬರಬೇಕಾದ ಪಿಂಚಣಿ ಹಣ ನೀಡುವಲ್ಲಿ ಬ್ಯಾಂಕುಗಳು ಒಲ್ಲೆನ್ನುತ್ತಿರುವುದು ಆಘಾತ ಮೂಡಿಸಿದೆ ಎಂದು ಕನ್ನಡಪ್ರಭ’ಕ್ಕೆ ತಿಳಿಸಿದ ಧರಿಯಾಪೂರ ಗ್ರಾಮದ ಯೆಂಕಣ್ಣ, ಬ್ಯಾಂಕುಗಳ ಅಸಡ್ಡೆತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಲಸಿಕೆ ಭೀತಿ: ಯಾದಗಿರಿಯಲ್ಲಿ ಮನೆಗೆ ಬೀಗ ಜಡಿದು ಕಾಲ್ಕಿತ್ತ ಗ್ರಾಮಸ್ಥರು..!
ಸಗರ, ಧರಿಯಾಪೂರ ಸೇರಿದಂತೆ ಅನೇಕ ಕಡೆಗಳಲ್ಲಿ ಸಾವಿರಾರು ರೈತರಿಗೆ ಇಂತಹುದ್ದೇ ಪರಿಸ್ಥಿತಿಯಿದೆ, ಪಿಂಚಣಿ ಹಣವನ್ನೂ ನೀಡದಿದ್ದರೆ ಹೇಗೆ ಬದುಕುವುದು ಎಂದು ಪ್ರಶ್ನಿಸಿದ ರೈತ ಸಂಘದ ಮುಖಂಡ ಚೆನ್ನಪ್ಪ ಆನೆಗೊಂದಿ, ಬ್ಯಾಂಕುಗಳಿಗೆ ಹೋಗಿ ನಾವು ಮನವಿ ಮಾಡಿದರೂ ಕೇಳುತ್ತಿಲ್ಲ ಎಂದರು.
ಕಳೆದ ವರ್ಷವೂ ಕೂಡ ಜಿಲ್ಲೆಯ ಹಲವೆಡೆ ಹೀಗೆಯೇ ಆಗಿತ್ತು. ಈ ಬಗ್ಗೆ ಕನ್ನಡಪ್ರಭ ವರದಿ ಅಧಿವೇಶನ ವೇಳೆ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದಾಗ, ಕಂದಾಯ ಸಚಿವ ಅಶೋಕ್, ಪಿಂಚಣಿ ಹಣ ಸಾಲದ ಖಾತೆಗಳಿಗೆ ಜಮೆ ಮಾಡುವುದು ಅಪರಾಧ ಎಂದಿದ್ದರು. ನಂತರ ಎಲ್ಲರ ಹಣ ವಾಪಸ್ ಆಗಿತ್ತು. ಆದರೆ, ಮತ್ತೇ ಬ್ಯಾಂಕುಗಳ ಇಂತಹ ಕ್ರಮ ಸರ್ಕಾರದ ಆದೇಶಕ್ಕೇ ಕಿಮ್ಮತ್ತು ನೀಡುತ್ತಿಲ್ಲ ಎನ್ನುವಂತಿದೆ.
ನಾನು ಕಡು ಬಡವ, ಮಗಳ ಮದುವೆ ಇದೆ, ಪಿಎಂ ಕಿಸಾನ್ ಹಣ ಜಮೆಯಾಗಿದೆ, ಕೊಡಿ ಎಂದರೆ ಸಾಲದ ಖಾತೆಗಳಿಗೆ ಜಮೆ ಮಾಡ್ತೀವಿ ಅಂತಾರೆ. ನನ್ನ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಹಲ್ ರೋಜಾ ಗ್ರಾಮಸ್ಥರು ಪಂಪಣ್ಣ ತಿಳಿಸಿದ್ದಾರೆ.
ಸಾಲದ ಖಾತೆಗಳಿಗೆ ಪರಿಹಾರ ಧನ ಅಥವಾ ಪಿಂಚಣಿ ಜಮೆ ಮಾಡಲೇಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ, ಇಂತಹ ಘಟನೆ ನಡೆದಿದ್ದರೆ ಪರಿಶೀಲಿಸಿ ವಾಪಸ್ ಮಾಡಿಸುತ್ತೇನೆ ಎಂದು ಯಾದಗಿರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಹೇಳಿದ್ದಾರೆ.