ಕಾರ್ಪೊರೇಶನ್‌ ಬ್ಯಾಂಕ್‌ - ಸಿಂಡಿಕೇಟ್‌ ಬ್ಯಾಂಕ್‌ ವಿಲೀನ ತಡೆಗೆ ಪೇಜಾವರ ಶ್ರೀ ಮಧ್ಯಸ್ಥಿಕೆ

By Web DeskFirst Published Sep 19, 2019, 3:17 PM IST
Highlights

ಕಾರ್ಪೊರೇಶನ್‌ ಬ್ಯಾಂಕ್‌ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ವಿಲೀನಿಕರಣ ತಡೆಗೆ ಪೇಜಾವರ ಶ್ರೀಗಳ ಮಧ್ಯಸ್ಥಿಕೆ| ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ| ಬ್ಯಾಂಕ್ ಗಳ ವಿಲೀನ ದಿಂದ ಅವಿಭಜಿತ ಜಿಲ್ಲೆಯ ವ್ಯವಹಾರ ಆರ್ಥಿಕತೆಯ ಮೇಲೆ ಋುಣಾತ್ಮಕ ಪರಿಣಾಮ ಬೀರಲಿದೆ| ದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್‌ ಭೇಟಿ, ಕರಾವಳಿಯ ಬ್ಯಾಂಕ್‌ ಉಳಿಸಲು ಮನವಿ|

ಮಂಗಳೂರು:(ಸೆ .19) ಕಾರ್ಪೊರೇಶನ್‌ ಬ್ಯಾಂಕ್‌ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ವಿಲೀನಿಕರಣ ತಡೆಗೆ ಉಡುಪಿಯ  ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮಧ್ಯಸ್ಥಿಕೆ ವಹಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ವಿಚಾರ ವಿಮರ್ಶೆ ನಡೆಸಿದ್ದಾರೆ.

ಪ್ರಸಕ್ತ ಮಂಗಳೂರಿನ ಕಾರ್ಪೊರೇಶನ್‌ ಬ್ಯಾಂಕ್‌ ಮತ್ತು ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ಗಳು ಉದ್ದೇಶಿತ ವಿಲೀನೀಕರಣದಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದು, ದಕ್ಷಿಣ ಕನ್ನಡ ಜನತೆಗೆ ನಷ್ಟ ಉಂಟಾಗಲಿದೆ. ಇದರಿಂದ ಅವಿಭಜಿತ ಜಿಲ್ಲೆಯ ವ್ಯವಹಾರ ಆರ್ಥಿಕತೆಯ ಮೇಲೆ ಋುಣಾತ್ಮಕ ಪರಿಣಾಮ ಬೀರಲಿದೆ ಎಂದು ಪೇಜಾವರ ಶ್ರೀಗಳು ಸಚಿವರಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಈ ಬ್ಯಾಂಕ್‌ಗಳ ಬೃಹತ್‌ ಕೊಡುಗೆಯನ್ನು ವಿವರಿಸಿದ ಶ್ರೀಗಳು, ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕಾಧ್ಯಕ್ಷ ಖಾನ್‌ ಅಬ್ದುಲ್ಲಾ ಸಾಹೇಬರನ್ನು ಸ್ಮರಿಸುತ್ತ, ಸ್ವದೇಶಿ ಆಂದೋಲನದ ಹಿನ್ನೆಲೆಯಲ್ಲಿ ಸ್ಥಾಪಿತವಾದ ಈ ಬ್ಯಾಂಕ್‌ನ್ನು ಉಳಿಸುವ ಬಗ್ಗೆ ಮನವಿ ಮಾಡಿದರು.

ಬ್ಯಾಂಕುಗಳ ತೊಟ್ಟಿಲೆನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲ ಸರ್ಕಾರಿ ಬ್ಯಾಂಕುಗಳ ಅಸ್ತಿತ್ವ ನಾಶವಾಗುವುದು ಜಿಲ್ಲೆಯ ಜನತೆಗೆ ಆಘಾತಕಾರಿಯಾಗಿದೆ. ಈಗಾಗಲೇ ವಿಜಯ ಬ್ಯಾಂಕ್‌ನ ವಿಲೀನಿಕರಣ ಆಗಿದ್ದು ಜಿಲ್ಲೆಯ ಪ್ರತಿಷ್ಠೆಗೆ ಹೊಡೆತವಾಗಿದೆ ಎಂದರು. ಮನವಿ ಸ್ವೀಕರಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌, ಅಹವಾಲನ್ನು ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿದರು.

ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳ ಸಂಘಟನೆಯ ಅಧ್ಯಕ್ಷ ಸುಧೀಂದ್ರ ವೈ. ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ ಶೆಟ್ಟಿ ಮತ್ತಿತರರು ಇದ್ದರು.
 

click me!