ಪೇಜಾವರ ಶ್ರೀ: 3 ದಿನಗಳಿಂದ ಪ್ರಜ್ಞೆ ಬಂದಿಲ್ಲ, ಕೃತಕ ಉಸಿರಾಟ ಮುಂದುವರಿಕೆ

By Kannadaprabha News  |  First Published Dec 23, 2019, 10:25 AM IST

ನ್ಯುಮೋನಿಯಾದಿಂದಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ. ಮೂರು ದಿನ ಕಳೆದರೂ ಶ್ರೀಗಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಸಲಾಗಿದೆ.


ಉಡುಪಿ(ಡಿ.23): ನ್ಯುಮೋನಿಯಾದಿಂದಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ.

"

Latest Videos

undefined

ಶುಕ್ರವಾರ ಮುಂಜಾನೆ ಉಸಿರಾಟದ ತೊಂದರೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಶ್ರೀಗಳಿಗೆ ವಿಶೇಷ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡ ಹಗಲಿರುಳು ಚಿಕಿತ್ಸೆ ನೀಡುತ್ತಿದೆ. ಮೂರು ದಿನ ಕಳೆದರೂ ಶ್ರೀಗಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಸಲಾಗಿದೆ.

ಉಡುಪಿ: 'ಶ್ರೀಗಳಿಗೆ ವೆಂಟಿಲೇಟರ್‌ನಲ್ಲೇ ಉಸಿರಾಟ ಮುಂದುವರಿಕೆ'..!

ಮೊದಲೆರಡು ದಿನ ಶ್ರೀಗಳು ನಿಧಾನವಾಗಿ ಚಿಕಿತ್ಸೆ ಸ್ಪಂದಿಸಿದ್ದರು. ಆದರೆ ಭಾನುವಾರ ಮುಂಜಾನೆ ಆಸ್ಪತ್ರೆ ವೈದ್ಯಕೀಯ ಅಧಿಕ್ಷಕರು, ಶ್ರೀಗಳ ಆರೋಗ್ಯದಲ್ಲಿ ಹೆಚ್ಚುವರಿ ಬದಲಾವಣೆಯಾಗಿಲ್ಲ. ಹಿಂದಿನ ಸ್ಥಿತಿಯೇ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಸಂಜೆಯೂ ಶ್ರೀಗಳ ಆರೋಗ್ಯ ಗಂಭೀರವಾಗಿಯೇ ಮುಂದುವರಿದಿದೆ ಎಂದಿದ್ದಾರೆ.

ಶ್ರೀಗಳ ಚಿಕಿತ್ಸೆಗೆ ಡಾ.ಸುಧಾ ವಿದ್ಯಾಸಾಗರ ನೇತೃತ್ವದಲ್ಲಿ 7 ಮಂದಿ ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಸಾಧ್ಯವಿರುವ ಎಲ್ಲ ರೀತಿಯ ಆಧುನಿಕ ಚಿಕಿತ್ಸೆಗಳನ್ನು ನೀಡಲಾಗಿದೆ. ಆದರೆ ಶ್ರೀಗಳ ವೃದ್ಧಾಪ್ಯದಿಂದಾಗಿ ಅವರು ನಿರೀಕ್ಷಿತ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ : ಕಣ್ಣು ತೆರೆಯಲು ಪ್ರಯತ್ನ

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ 89 ವರ್ಷವಾಗಿದ್ದು, ಸಾಮಾನ್ಯವಾಗಿ ಈ ವಯೋಮಾನದಲ್ಲಿ ಚೇತರಿಸಿಕೊಳ್ಳುವುದಕ್ಕಿಂತ ತುಸು ಶೀಘ್ರವಾಗಿಯೇ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಅವರು ಬಹುಬೇಗನೇ ಗುಣಮುಖರಾಗಿ ಬರುತ್ತಾರೆ. ಅನಾವಶ್ಯಕ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಠದವರು ವಿನಂತಿಸಿದ್ದಾರೆ.

ಸ್ಪೀಕರ್‌ ಕಾಗೇರಿ ಭೇಟಿ

ಪೇಜಾವರ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕೋಟಿ ಕೋಟಿ ಜನರ ಪ್ರಾರ್ಥನೆಯಿಂದಾಗಿ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎನ್ನುವ ವಿಶ್ವಾಸ ಕಂಡುಬರುತ್ತಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಭಾನುವಾರದಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಪೇಜಾವರ ಶ್ರೀಗಳು ರಾಷ್ಟ್ರ ಕಾರ್ಯದಲ್ಲಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಾಡಿಗೆ ಕೊಟ್ಟಕೊಡುಗೆ ದೊಡ್ಡದು. ಈ ಹಿನ್ನೆಲೆಯಲ್ಲಿ ದೇಶದ ಕೋಟಿ ಕೋಟಿ ಜನರು ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುತ್ತಿದ್ದೇವೆ. ಶ್ರೀಗಳ ಆರೋಗ್ಯ ಸುಧಾರಣೆ ಆಗುತ್ತದೆ ಎಂಬ ವಿಶ್ವಾಸವಿದೆ. ವೈದ್ಯರು ಕೂಡ, ಶ್ರೀಗಳು ನಿಧಾನಗತಿಯಲ್ಲಿ ಸ್ಪಂದಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕಾಗೇರಿ ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ

ಪೇಜಾವರ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ಹಲವು ಕಡೆ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ಹವನಗಳನ್ನು ನಡೆಸಲಾಗಿದೆ. ಶ್ರೀಮಠದಲ್ಲಿ ಕಿರಿಯ ಶ್ರೀಗಳು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರಿನ ರಾಜರಾಜೇಶ್ವರಿ ಮಧ್ವ ಸಂಘದಲ್ಲಿ ಧನ್ವಂತರಿ ಜಪ, ವಿಷ್ಣು ಸಹಸ್ರನಾಮ, ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದ ಪಾರಾಯಣ, ದಾವಣಗೆರೆಯಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ದಾವಣಗೆರೆ ಶಾಖೆ ಮತ್ತು ಸ್ಥಳೀಯ ಭಾರತಿ ಭಜನಾ ಮಂಡಳಿ ವತಿಯಿಂದ ಶ್ರೀಗಳ ಆರೋಗ್ಯ ಸಿಉಧಾರಣೆ ನಿಮಿತ್ತ ವೆಂಕಟೇಶ ಸ್ತೋತ್ರ, ಶ್ರೀಹರಿವಾಯುಸ್ತತಿ, ಸಂದರಕಾಂಡ ಶ್ರೀ ರಾಘವೇಂದ್ರ ಸ್ತೋತ್ರ ಹಾಗೂ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮತ್ತು ಲಕ್ಷೀಶೋಭಾನ ಪಾರಾಯಣ ಹಾಗೂ ಭಜನಾ ಕೈಂಕರ್ಯ ಕೈಗೊಳ್ಳಲಾಯಿತು.

ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ!

ಇದೇವೇಳೆ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಹಾರೈಸಿದ್ದಾರೆ. ಪೇಜಾವರ ಶ್ರೀಗಳು ಧರ್ಮಕ್ರಾಂತಿ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಶೀಘ್ರವಾಗಿ ಅವರು ಗುಣ ಮುಖರಾಗಲಿ. ಇನ್ನಷ್ಟುಧರ್ಮ ಜಾಗೃತಿ ಮೂಡಿಸುವ ಕೆಲಸವಾಗಲಿ. ಆರೋಗ್ಯ ಸುಧಾರಿಸಲಿ ಎಂದು ಕೇದಾರನಾಥನಲ್ಲಿ ಪ್ರಾಥಿಸುವೆ ಎಂದಿದ್ದಾರೆ.

click me!