ಕೊಪ್ಪಳ: ಪಿಡಿಒ ಯಡವಟ್ಟು ಸಾಬೀತು, ತಬ್ಬಿಬ್ಬಾದ ಅಧಿಕಾರಿಗಳು

By Suvarna NewsFirst Published Dec 12, 2019, 7:56 AM IST
Highlights

ಬೆಟಗೇರಿ ಗ್ರಾಪಂ ಬೆಳೆ ವಿಮಾ ವಿವಾದ| ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ತಬ್ಬಿಬ್ಬು|ಅಧಿಕಾರಿ ಮಾಡಿದ ಯಡವಟ್ಟು, ಸರ್ಕಾರದ ಅಂಗಳಕ್ಕೆ| ಪಿಡಿಒ ಮಾಡಿದ ತಪ್ಪಿನಿಂದ ರೈತರಿಗೆ ಬರಬೇಕಾಗಿದ್ದ ಕೋಟ್ಯಂತರ ರುಪಾಯಿ ಪರಿಹಾರ ಬಾರದಂತೆ ಆಗಿದೆ|

ಕೊಪ್ಪಳ(ಡಿ.12): ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ವಿಮಾ ಪರಿಹಾರದ ಆಣೆವಾರು ಮಾಡುವಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಅಕ್ಬರಸಾಬ್‌ ಮೀಠಾಯಿ ಮಾಡಿದ ಯಡವಟ್ಟು ಅಧಿಕಾರಿಗಳ ತಪಾಸಣೆ ವೇಳೆ ಸಾಬೀತಾಗಿದ್ದು ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಜಿಲ್ಲಾ ಅಂಕಿಸಂಖ್ಯಾ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಂಕಪ್ಪ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಮಂಗಳವಾರ ಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದರು. ಕಡಲೆ ಬೆಳೆ ಕಟಾವನ್ನು ಆಣೆವಾರು ಮಾಡುವ ವೇಳೆಯಲ್ಲಿ ಪಿಡಿಒ ಅಕ್ಬರ್‌ ಮೀಠಾಯಿ ಯಡವಟ್ಟು ಮಾಡಿದ್ದರು.

ನಿಯಮಾನುಸಾರ ಬೆಳೆ ಬೆಳೆದ ಹೊಲದಲ್ಲಿ ಆಣೆವಾರು ಮಾಡದೆ ಮತ್ಯಾವುದೋ ಹೊಲದಲ್ಲಿ ಮಾಡಿರುವ ಅಂಶ ಬೆಳಕಿಗೆ ಬಂದಿತ್ತು. ಸ್ವತಃ ರೈತರೇ ಇದನ್ನು ಪತ್ತೆ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ತೀವ್ರ ಬರ ಇದ್ದರೂ ಸಹ ಅತ್ಯುತ್ತಮ ಬೆಳೆ ಬಂದಿದೆ ಎಂದು ಆಣೆವಾರು ಮಾಡಿದ್ದರಿಂದ ರೈತರಿಗೆ ಸಿಗಬೇಕಾದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಬೆಳೆ ವಿಮಾ ಪರಿಹಾರ ಸಿಗದಂತೆ ಆಗಿದೆ.

ಕೊಪ್ಪಳ: ಅಧಿಕಾರಿ ಯಡವಟ್ಟು, ಸಂಕಷ್ಟದಲ್ಲಿ ಅನ್ನದಾತ

ಸುಮಾರು 450ಕ್ಕೂ ಹೆಚ್ಚು ರೈತರು ಕಡಲೆ ಬೆಳೆಗೆ ಬೆಳೆ ವಿಮೆ ಪಾವತಿ ಮಾಡಿದ್ದರೂ ಪರಿಹಾರ ಬಂದಿರಲಿಲ್ಲ. ಪಿಡಿಒ ಮಾಡಿದ ತಪ್ಪಿನಿಂದ ರೈತರಿಗೆ ಬರಬೇಕಾಗಿದ್ದ ಕೋಟ್ಯಂತರ ರುಪಾಯಿ ಪರಿಹಾರ ಬಾರದಂತೆ ಆಯಿತು. ಸತ್ಯ ಅರಿಯಲು ಅಧಿಕಾರಿಗಳ ತಂಡ ಬೆಟಗೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಅಧಿಕಾರಿ ಮಾಡಿದ ತಪ್ಪು ಸಾಬೀತಾಗಿದೆ. ರೈತರ ಎದುರಿಗೆ ಅಧಿಕಾರಿಗಳ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಸರ್ಕಾರದ ಅಂಗಳಕ್ಕೆ:

ಪಿಡಿಒ ಮಾಡಿದ ಯಡವಟ್ಟನ್ನು ಅಧಿಕಾರಿಗಳ ತಂಡ ಪರಿಶೀಲಿಸಿ ವರದಿ ಮಾಡಿದ್ದು, ಇದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಪಿಡಿಒ ಮಾಡಿದ ತಪ್ಪಿನಿಂದಲೇ ಬೆಳೆ ವಿಮಾ ಪರಿಹಾರ ಬರದ ಕಾರಣ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ವರದಿ ಸಲ್ಲಿಸಲು ಅಧಿಕಾರಿಗಳ ತಂಡ ಸಿದ್ಧ ಮಾಡಿಕೊಳ್ಳುತ್ತಿದೆ.

ಬೆಳೆ ವಿಮಾ ಕಂಪನಿ ನಿರ್ಧಾರ ಮುಖ್ಯ:

ಅಧಿಕಾರಿಗಳು ತಪಾಸಣೆ ಮಾಡಿ ಸಲ್ಲಿಸಿದ ವರದಿಯನ್ನು ಬೆಳೆ ವಿಮಾ ಕಂಪನಿ ಒಪ್ಪಿಕೊಂಡು ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು. ಸರ್ಕಾರ ಮಧ್ಯಸ್ಥಿಕೆ ವಹಿಸಿ, ಆಗಿರುವ ತಪ್ಪಿನ ಕುರಿತು ವಿಮಾ ಕಂಪನಿಗೆ ಸೂಚನೆ ನೀಡಿ, ಮತ್ತೊಂದು ಆಣೆವಾರು ನಡೆಸಿ ಪರಿಹಾರ ನೀಡುವ ದಿಸೆಯಲ್ಲಿ ಕ್ರಮವಹಿಸುವ ಅಗತ್ಯವಿದೆ.

ಮೂರನೇ ಬಾರಿ:

ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೀಗೆ ಆಗುತ್ತಿರುವುದು ಮೊದಲನೇ ಬಾರಿ ಅಲ್ಲ. ಮೂರನೇ ಬಾರಿ. 2018-19ನೇ ಸಾಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಹಾಗೂ ಸಜ್ಜೆ ಬೆಳೆ ಆಣೆವಾರು ಮಾಡುವ ವೇಳೆಯಲ್ಲಿಯೂ ಇದೇ ಪಿಡಿಒ ಮಾಡಿದ ತಪ್ಪಿನಿಂದ ರೈತರಿಗೆ ಬೆಳೆ ವಿಮಾ ಪರಿಹಾರ ಬಂದಿಲ್ಲ. ಈಗ ಹಿಂಗಾರಿಯ ಕಡಲೆ ಬೆಳೆಯಲ್ಲಿಯೂ ಇದೇ ರೀತಿ ತಪ್ಪು ಮಾಡಿದ್ದಾರೆ. ಸರ್ಕಾರವೇ ಈ ಕುರಿತು ಸ್ಪಷ್ಟ ಆದೇಶ ನೀಡಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಬೆಳೆ ವಿಮಾ ಪರಿಹಾರ ಸಿಗಬೇಕು ಎಂಬುವುದು ರೈತರು ಆಗ್ರಹ.

ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಣೆವಾರು ಮಾಡುವ ವೇಳೆಯಲ್ಲಿ ಆಗಿರುವ ತಪ್ಪನ್ನು ಪರಿಶೀಲಿಸಿದ್ದು ರೈತರು ನೀಡಿದ ದೂರು ಸರಿಯಾಗಿದೆ. ಈ ಕುರಿತು ವರದಿ ಮಾಡಲಾಗುವುದು ಎಂದು ಜಿಲ್ಲಾ ಅಂಕಿಸಂಖ್ಯಾ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ತಿಳಿಸಿದ್ದಾರೆ. 

ಯಾರು ತಪ್ಪು ಮಾಡಿದ್ದಾರೋ ಎನ್ನುವುದು ನಮಗೆ ಬೇಕಾಗಿಲ್ಲ. ನಮಗೆ ನ್ಯಾಯಯುತವಾಗಿ ಬರಬೇಕಾದ ಬೆಳೆ ವಿಮಾ ಪರಿಹಾರ ನೀಡುವಂತೆ ಆಗಬೇಕು. ಸರ್ಕಾರ ಪರಿಹಾರವನ್ನು ನೀಡುವ ಕುರಿತು ಆದೇಶ ಮಾಡದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ರೈತ ಮುಖಂಡ ಶಂಕ್ರಗೌಡ ಅವರು ಹೇಳಿದ್ದಾರೆ. 
 

click me!