ಪಾಟೀಲ ಪುಟ್ಟಪ್ಪ ಸಮಾಧಿ ಹಲಗೇರಿಯಲ್ಲಿ: ಪತ್ನಿಯದು ಹುಬ್ಬಳ್ಳಿಯಲ್ಲಿ!

By Kannadaprabha News  |  First Published Mar 18, 2020, 9:17 AM IST

ಡಾ.ಪಾಟೀಲ ಪುಟ್ಟಪ್ಪ ಸಮಾಧಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಾದರೆ, ಪತ್ನಿ ಇಂದುಮತಿ ಅವರದು ಹುಬ್ಬಳ್ಳಿಯ ಸ್ವಗೃಹ ‘ಪ್ರಪಂಚ’ದ ಆವರಣದಲ್ಲಿ| ಪಾಪು ಸ್ಮಾರಕ ನಿರ್ಮಾಣ ಮಾಡಲು ಹೋರಾಟಗಾರ ಆಗ್ರಹ| 


ಹುಬ್ಬಳ್ಳಿ(ಮಾ.18): ಏಳು ದಶಕಗಳ ಕಾಲ ಒಟ್ಟಿಗೇ ಬಾಳಿದ ಈ ಆದರ್ಶ ದಂಪತಿಯ ಸಮಾಧಿಗಳು ಮಾತ್ರ ಬೇರೆ ಬೇರೆಯಾದವು..! ಹೌದು! ಕನ್ನಡದ ಕಟ್ಟಾಳು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಸಮಾಧಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಾದರೆ, ಪತ್ನಿ ಇಂದುಮತಿ ಅವರದು ಹುಬ್ಬಳ್ಳಿಯ ಸ್ವಗೃಹ ‘ಪ್ರಪಂಚ’ದ ಆವರಣದಲ್ಲಿ ಮಾಡಲಾಗಿದೆ.

'ಪಾಪುಗೆ ರಾಜ್ಯ ಸರ್ಕಾರ ಅಪಚಾರ: ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೋರಬೇಕು'

Tap to resize

Latest Videos

1945ರಲ್ಲಿ ವಿಜಯಪುರದ ಇಂದುಮತಿ ಅವರನ್ನು ವಿವಾಹವಾಗಿದ್ದ ಪಾಪು 68 ವರ್ಷ ಕಾಲ ತುಂಬು ಜೀವನ ನಡೆಸಿದವರು. ಅತ್ಯಂತ ಅನ್ಯೋನ್ಯ ದಾಂಪತ್ಯ ಇವರದು. ಪಾಪುವಿನ ಎಲ್ಲ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತವರು ಇಂದುಮತಿಯವರು. 

ಸರ್ಕಾರಕ್ಕೆ ಷರತ್ತು ವಿಧಿಸಿದ್ದ ಪಾಪು: ಬಸವ ಪುರಸ್ಕಾರ ಸ್ವೀಕರಿಸದೆ ಹಠ ಸಾಧಿಸಿದ ಪಾಟೀಲ ಪುಟ್ಟಪ್ಪ!

ಇಂದುಮತಿ ಅವರು 2013ರಲ್ಲಿ ನಿಧನರಾದಾಗ ಪತ್ನಿ ತನ್ನನ್ನು ಬಿಟ್ಟು ದೂರವಾಗಬಾರದೆಂಬ ಭಾವನೆಯಿಂದ ಪಾಪು ತಮ್ಮ ಮನೆಯ ಅಂಗಳದಲ್ಲೇ ಸಮಾಧಿ ಮಾಡಿಸಿದರು. ಆಗ ಸಾಕಷ್ಟು ವಿರೋಧ ವ್ಯಕ್ತವಾದರೂ ಜಗ್ಗದೇ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿದರು. ಹಾಗಾಗಿ ಈಗ ಪಾಪು ಸಮಾಧಿಯೂ ಅದರ ಪಕ್ಕದಲ್ಲೇ ಆಗಲಿದೆ ವಿಶ್ವಾಸ ಅವರ ಅಭಿಮಾನಿಗಳದ್ದಾಗಿತ್ತು. ಆದರೆ ಪಾಪು ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಹಲಗೇರಿಯಲ್ಲಿ ಅಂತ್ಯಸಂಸ್ಕಾರ ಮಾಡಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ. ಏಳು ದಶಕ ಒಂದಾಗಿದ್ದ ಈ ದಂಪತಿಯ ಸಮಾಧಿಗಳು ದೂರ ದೂರ ಆದವು ಅನ್ನುವ ಅಪಸ್ವರ ಕೇಳಿ ಬಂದಿದೆ.

ಸ್ಮಾರಕ ಹುಬ್ಬಳ್ಳಿಯಲ್ಲಾಗಲಿ: 

ಹುಬ್ಬಳ್ಳಿಯಲ್ಲೇ ಒಂದು ಎಕರೆ ಜಮೀನು ನೀಡಿ ಅಲ್ಲೇ ಅವರ ಸಮಾಧಿ ಮಾಡಿ ಸ್ಮಾರಕ ಮಾಡಬೇಕಿತ್ತು. ಇದು ಒಬ್ಬ ಅಪ್ರತಿಮ ಹೋರಾಟಗಾರನಿಗೆ ಮಾಡಿದ ಅವಮಾನ. ಇನ್ನಾದರೂ ಅವರ ಹೆಸರಲ್ಲಿ ಪ್ರತ್ಯೇಕವಾಗಿ ಒಂದು ಎಕರೆ ಜಮೀನು ಕೊಟ್ಟು, ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಹೋರಾಟಗಾರ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಸದಾನಂದ ಡಂಗನವರ, ಮೋಹನ ಹಿರೇಮನಿ ಮತ್ತಿತರರು ಆಗ್ರಹಿಸಿದರು.
 

click me!