ಯಾವ ಪಕ್ಷಕ್ಕೂ ಬಹುಮತ ಇಲ್ಲ, ಪಕ್ಷೇತರರೇ ನಿರ್ಣಾಯಕ

By Kannadaprabha NewsFirst Published Oct 11, 2020, 11:03 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಚುನಾವಣಾ ತಯಾರಿಯೂ ಭರದಿಂದ ಸಾಗಿದೆ. 

ವರದಿ : ಸತ್ಯರಾಜ್‌ ಜೆ.

 ಕೋಲಾರ (ಅ.11):  ಕೋಲಾರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ(ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನ್ಕಕೆ ಸಾಮಾನ್ಯ ವರ್ಗಕ್ಕೆ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ನಗರಸಭೆಯ 35 ಸ್ಥಾನಗಳ ಪೈಕಿ ಕಾಂಗ್ರೆಸ್‌ 12, ಜೆಡಿಎಸ್‌ 8, ಎಸ್‌ಡಿಪಿಐ 4 ಹಾಗು ಬಿಜೆಪಿ 3 ಸ್ಥಾನಗಳು ಹಾಗು ಉಳಿದ 8 ಸ್ಥಾನಗಳನ್ನು ಪಕ್ಷೇತರ ಸದಸ್ಯರು ಗೆದ್ದುಕೊಂಡಿದ್ದಾರೆ. ಶಾಸಕ ಕೆ.ಶ್ರೀನಿವಾಸಗೌಡ, ಸಂಸದ ಎಸ್‌.ಮುನಿಸ್ವಾಮಿ ಹಾಗು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜ್‌ ಸೇರಿ ಒಟ್ಟು 38 ಮತಗಳು ಇವೆ.

ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಇಬ್ಬರು, ಕಾಂಗ್ರೆಸ್‌ ಪಕ್ಷದಿಂದ ಮೂರು ಮಂದಿ ಹಾಗು ಬಿಜೆಪಿಯಿಂದ ಒಬ್ಬರು ಪ್ರಯತ್ನ ನಡೆಸುತ್ತಿದ್ದಾರಾದರೂ ಜೆಡಿಎಸ್‌ನಿಂದ ಶ್ವೇತಾ ಶಭರೀಶ್‌, ಹಾಗು ಕಾಂಗ್ರೆಸ್‌ನ ಪಾವನಾ ಜನಾರ್ದನ್‌ ಹಾಗು ಮುಭಿನಾ ಶಫೀ, ನಗ್ಮಾ ಏಜಾಜ್‌ ಬಿಜೆಪಿಯಲ್ಲಿ ಸೌಭಾಗ್ಯ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಬಿಜೆಪಿ : ಅಚ್ಚರಿ ಹೇಳಿಕೆ? .

ಈ ಪೈಕಿ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚು ಸ್ಥಾನಗಳು ಗೆದ್ದು ಕೊಂಡರೂ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ ಕಾಂಗ್ರೆಸ್‌ ಪಕ್ಷದವರು ಅಧಿಕಾರ ಹಿಡಿಯುತ್ತಾರೆ ಎನ್ನುವುದು ಕಷ್ಟಸಾಧ್ಯ, ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಾಗಿವೆ. ಇದರಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹಾಗು ನಸೀರ್‌ ಅಹಮದ್‌ ಬಣಗಳಾಗಿವೆ. ಚುನಾವಣೆ ನಡೆಯುವುದಕ್ಕೆ ಮೊದಲೇ ಟಿಕೆಟ್‌ ಹಂಚಿಕೆ ಆಗುವಾಗಲೇ ಈ ಗುಂಪುಗಳು ಕಾಣಿಸಿಕೊಂಡಿದ್ದವು. ಇದರ ನಡುವೆ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಗುಂಪಿನಲ್ಲಿಯೂ ಕೆಲವರಿದ್ದಾರೆ.

ವರ್ತೂರು ಬಣದ ಅಭ್ಯರ್ಥಿ

ಪಾವನಾ ಜನಾರ್ದನ್‌ ವರ್ತೂರ್‌ ಬಣದಿಂದ ಗೆದ್ದಿದ್ದು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇತ್ತ ಜೆಡಿಎಸ್‌ನಲ್ಲಿ ಶಾಸಕ ಕೆ.ಶ್ರೀನಿವಾಸಗೌಡರ ಆಪ್ತರಾದ ಶ್ವೇತ ಶಭರೀಷ್‌ ಪ್ರಮುಖ ಆಕಾಂಕ್ಷಿಯಾಗಿದ್ದು ಈ ಇಬ್ಬರ ನಡುವೆ ಪೈಪೋಟಿ ಬೀಳಲಿದೆ ಎಂದು ಹೇಳಲಾಗುತ್ತಿದೆ. ಎಸ್‌ಡಿಪಿಐ ಪಕ್ಷದವರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದು ಯಾವ ಗುಂಪಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎನ್ನುವುದು ಕಾದು ನೋಡಬೇಕು.

ಕೋಲಾರ ನಗರಸಭೆ ಮೇಲೆ ಕಣ್ಣಿಟ್ಟಿರುವ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ತಮ್ಮ ಕೋಲಾರದ ಮುಂದಿನ ರಾಜಕೀಯ ಭವಿಷ್ಯಕ್ಕೆ ಅನುಕೂಲ ಆಗುವಂತೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆಯನ್ನು ತಮ್ಮ ರಾಜಕೀಯ ಸಲಹೆಗಾರರಾದ ಕೋಲಾರ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ ಎಲ್‌ ಅನಿಲ್‌ ಕುಮಾರ್‌ ಹೆಗಲಿಗೆ ಏರಿಸಿದ್ದಾರೆನ್ನಲಾಗುತ್ತಿದೆ.

ಕುದುರೆ ವ್ಯಾಪಾರದ ಶಂಕೆ:  ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಈ ಬಾರಿ ಅಷ್ಟುಸುಲಭವಾಗಿರುವುದಿಲ್ಲ ಯಾರು ಎಷ್ಟುಖರ್ಚು ಮಾಡುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗಲಿದೆ ಎನ್ನಲಾಗುತ್ತಿದ್ದು ಈಗಾಗಲೇ ವ್ಯಾಪಾರ ಶುರುವಾಗಿದೆ ಎನ್ನಲಾಗಿದೆ.

ಇವತ್ತಿನ ರಾಜಕೀಯ ಚಟುವಟಿಕೆಗಳು ನಿಂತಿರುವದೇ ಹಣದ ಮೇಲೆ, ಚುನಾವಣೆಗಳು ನಡೆಯುವುದೂ ಹಣದ ವ್ಯವಹಾರದ ಮೇಲೆ, ಇದನ್ನೇ ಬಂಡವಾಳ ಮಾಡಿಕೊಂಡು ಕೊತ್ತೂರು ಮಂಜುನಾಥ್‌ ನಗರಸಭೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳೂ ಸದ್ದುಗದ್ದಲವಿಲ್ಲದೆ ನಡೆಯುತ್ತಿವೆ. ಎಂಟು ತಿಂಗಳ ಹಿಂದೆ ನಗರಸಭೆ ಚುನಾವಣೆ ಸಂದರ್ಭದಲ್ಲಿಯೇ 18 ವಾರ್ಡುಗಳಲ್ಲಿ ತಮಗೆ ಬೇಕಾದವರನ್ನು ಗೆಲ್ಲಿಸಲು ಹಣದ ಹೊಳೆಯನ್ನು ಹರಿಸಿದ ಕೊತ್ತೂರು ನಗರಸಭೆ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ನಗರಸಭೆ ಚುನಾವಣೆ ವೇಳೆ ರಮೇಶ್‌ ಕುಮಾರ್‌ ಸೇರಿದಂತೆ ಕೆ.ಶ್ರೀನಿವಾಸಗೌಡ ಹಾಗು ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮದ್‌ ಅವರು ಘಟಬಂಧನ್‌ ನಿರ್ಮಿಸಿಕೊಂಡು ತಮಗೆ ಬೇಕಾದ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದರು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಘಟಬಂಧನ್‌ ವರ್ಕೌಟ್‌ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕು.

click me!