ಬೆಂಗಳೂರು (ಡಿ.04): ನಗರದಲ್ಲಿ ಕೋವಿಡ್ (Covid) ಹಾಗೂ ಒಮಿಕ್ರೋನ್ (Omicron) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗಳಿಗೆ (School) ಕಳುಹಿಸಲು ಹಿಂಜರಿಯುತ್ತಿರುವ ವಿವಿಧ ಶಾಲಾ ಮಕ್ಕಳ ಪೋಷಕರು, ಮತ್ತೆ ಆನ್‌ಲೈನ್ (Online) ಶಿಕ್ಷಣ ಆರಂಭಿಸುವಂತೆ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಒತ್ತಡ ತರಲಾರಂಭಿಸಿದ್ದಾರೆ.
ಅದರಲ್ಲೂ 1 ರಿಂದ 7ನೇ ತರಗತಿ ಮಕ್ಕಳನ್ನು ಶಾಲೆಗೆ (School) ಕಳುಹಿಸಲು ಪೋಷಕರು ಹೆಚ್ಚು ಹಿಂದೇಟು ಹಾಕುತ್ತಿದ್ದು, ಅವರಿಗೆ ಆನ್‌ಲೈನ್ ಶಿಕ್ಷಣ (Education) ಆರಂಭಿಸುವಂತೆ ಶಾಲೆಗಳಿಗೆ ಮನವಿ ಮಾಡುತ್ತಿದ್ದಾರೆ. ಈ ಮಧ್ಯೆ, ಕೋವಿಡ್ (Covid) ಪ್ರಕರಣಗಳು ಹೆಚ್ಚಿರುವ ಬಿಬಿಎಂಪಿ (BBMP) ಪೂರ್ವ ವಲಯ, ಮಹದೇವಪುರ ಸೇರಿದಂತೆ ವಿವಿಧೆಡೆ ಕೆಲ ಶಾಲೆಗಳೇ ಸ್ವಯಂ ಪ್ರೇರಿತವಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಭೌತಿಕ ತರಗತಿಗಳನ್ನು ಬಂದ್ ಮಾಡಿ ಇನ್ಮುಂದೆ ಆನ್‌ಲೈನ್ (Online) ತರಗತಿ ನಡೆಸುವುದಾಗಿ ತಿಳಿಸಿರುವುದು ಕಂಡುಬಂದಿದೆ.
ನಗರದ ಕೆಲ ಪ್ರಮುಖ ಶಾಲೆಗಳ ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ ಆನ್‌ಲೈನ್ ಶಿಕ್ಷಣ (Education) ಆರಂಭಿಸುವ ವಿಚಾರದಲ್ಲಿ ಪೋಷಕರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹೆಚ್ಚಿನ ಶಾಲೆಗಳ ಬಹುಪಾಲು ಪೋಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಇನ್ನು ಕೆಲ ಶಾಲೆಗಳಲ್ಲಿ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದೆರಡು ಶಾಲೆಗಳಲ್ಲಿ ಮಾತ್ರ ಹೆಚ್ಚು ಪೋಷಕರು ಕೂಡಲೇ ಶಾಲೆ ಬಂದ್ ಮಾಡುವುದು ಬೇಡ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದರಂತೆ ನಡೆಯಿರಿ ಎಂದು ಅಭಿಪ್ರಾಯ ನೀಡಿರುದಾಗಿ ಹೇಳಿದ್ದಾರೆ.
ಇನ್ನು ಶಾಲೆಗಳು (School) ಕೂಡ ಬಹುಪಾಲು ಪೋಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಆಲೋಚನೆಯಲ್ಲಿದ್ದರೆ, ಇನ್ನು ಕೆಲ ಶಾಲೆಗಳು ಮಿಶ್ರ ಅಭಿಪ್ರಾಯ ಇರುವುದರಿಂದ ಆನ್‌ಲೈನ್ ಆಫ್‌ಲೈನ್ ಎರಡೂ ರೀತಿಯ ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿವೆ. ನಮ್ಮ ಶಾಲೆಯ ಪೋಷಕರು ಈ ವಿಚಾರದಲ್ಲಿ ಒಮ್ಮತಕ್ಕೆ ಬರಬೇಕೆಂದು ಮನವಿ ಮಾಡಿರುವುದಾಗಿ ರಾಜಾಜಿನಗರದ ಖಾಸಗಿ ಶಾಲೆಯೊಂದರ ಮುಖ್ಯಶಿಕ್ಷಕರು ತಿಳಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಸದ್ಯ 6ರಿಂದ 10ನೇ ತರಗತಿ ಮಕ್ಕಳಿಗೆ ಮಾತ್ರ ಭೌತಿಕ ತರಗತಿ ನಡೆಸುತ್ತಿದ್ದೇವೆ. ಜ.3ರಿಂದ 1ರಿಂದ 5ನೇ ತರಗತಿ ಮಕ್ಕಳಿಗೂ ಶಾಲೆ ಆರಂಭಿಸಲು ಪೋಷಕರು ಒಪ್ಪಿದ್ದರು. ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸುಮಾರು ಶೇ.70ರಷ್ಟುಪೋಷಕರು ಈಗ ಆನ್‌ಲೈನ್ ಶಿಕ್ಷಣವನ್ನೇ ಮುಂದುವರೆಸುವಂತೆ ಕೇಳುತ್ತಿದ್ದಾರೆ. ಉಳಿದ ತರಗತಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ನಡೆಸಲು ಒತ್ತಾಯಿಸುತ್ತಿದ್ದಾರೆ.
ಗಾಯತ್ರಿ, ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರು
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆನ್‌ಲೈನ್ ಶಿಕ್ಷಣ ವಿಚಾರವಾಗಿ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ಇದೆ. ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಕೆಲವರು ಶಾಲೆ (School) ಬಂದ್ ಮಾಡಬೇಡಿ ಎನ್ನುತ್ತಾರೆ. ಇನ್ನು ಕೆಲವರು ನಮ್ಮ ಮಕ್ಕಳ ಸುರಕ್ಷತೆ ಮುಖ್ಯ ಬಂದ್ ಮಾಡಿ ಎನ್ನುತ್ತಾರೆ. ಸರ್ಕಾರದ ನಿರ್ಧಾರಕ್ಕೆ ನಾವು ಕಾದುನೋಡುತ್ತೇವೆ. ಸರ್ಕಾರ ಲಾಕ್‌ಡೌನ್ ಮಾಡುವುದಾದರೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇತರೆ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿ ಶಾಲೆಗಳನ್ನು ಮಾತ್ರ ನಡೆಸಲಿ.
- ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ
ಕೋವಿಡ್ ಹೆಚ್ಚುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಎದುರಾಗಿದೆ. ಈಗ ಹೇಗಿದ್ದರೂ ಆಫ್‌ಲೈನ್‌ನಲ್ಲಿ ಶಾಲೆಗಳು ಬಹಳಷ್ಟುಪಾಠಗಳನ್ನು ಬೋಧಿಸಿವೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉಳಿದ ಪಾಠಗಳನ್ನು ಆನ್‌ಲೈನ್‌ನಲ್ಲೇ ಮುಗಿಸಲಿ ಎಂಬುದು ನಮ್ಮ ಒತ್ತಾಯ.
- ನರಸಿಂಹ, ಪೋಷಕ