ಪರಪ್ಪನ ಅಗ್ರಹಾರ ಸಿಬ್ಬಂದಿಯಿಂದಲೇ ಅಕ್ರಮ ಸ್ಮಾರ್ಟ್‌ಫೋನ್, ಈಯರ್‌ಫೋನ್ ಜೈಲೊಳಗೆ ಸಾಗಾಟ, ಓರ್ವ ಬಂಧನ!

Published : Oct 25, 2025, 06:30 PM IST
Parappana Agrahara Jail Staff

ಸಾರಾಂಶ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ಜೈಲಿನೊಳಗೆ ಸ್ಮಾರ್ಟ್‌ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೊಂಡೊಯ್ಯಲು ಯತ್ನಿಸಿದ ಸಿಬ್ಬಂದಿ ಅಮರ್ ಪ್ರಾಂಜೆಯನ್ನು ಬಂಧಿಸಲಾಗಿದೆ. ಈ ಘಟನೆಯು ಜೈಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು: ನಗರದ ಪ್ರಸಿದ್ಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಸಿಬ್ಬಂದಿಯ ಕಳ್ಳಾಟ ಬಯಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಜೈಲು ಒಳಗೆ ಅನಧಿಕೃತ ವಸ್ತುಗಳನ್ನು ಕೊಂಡೊಯ್ಯಲು ಯತ್ನಿಸಿದ ಸಿಬ್ಬಂದಿಯನ್ನು ತಪಾಸಣೆಯ ವೇಳೆ ಜೈಲು ಅಧಿಕಾರಿಗಳು  ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನಾಗಿರುವ ಸಿಬ್ಬಂದಿ ಅಮರ್ ಪ್ರಾಂಜೆ (29) ಎಂದು ಗುರುತಿಸಲಾಗಿದೆ. ಶಂಕಾಸ್ಪದ ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯ ವೇಳೆ ಅವರ ಬಳಿ ಒಂದು ಸ್ಮಾರ್ಟ್‌ಫೋನ್, ಬ್ಯಾಕ್ ಕವರ್ ಹಾಗೂ ಎರಡು ಇಯರ್‌ಫೋನ್‌ಗಳು ಪತ್ತೆಯಾಗಿವೆ.

ಖಾಸಗಿ ಸ್ಥಳದಲ್ಲಿ ಅಡಗಿಸಿ ಸಾಗಾಟಕ್ಕೆ ಯತ್ನ

ಈ ವಸ್ತುಗಳನ್ನು ಅವರು ಖಾಸಗಿ ಸ್ಥಳದಲ್ಲಿ ಅಡಗಿಸಿಕೊಂಡು ಜೈಲು ಒಳಗೆ ಕೊಂಡೊಯ್ಯಲು ಮುಂದಾಗಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ. ಜೈಲು ನಿಯಮ ಉಲ್ಲಂಘನೆ ಹಾಗೂ ಸುರಕ್ಷತಾ ನಿಯಮಗಳನ್ನು ಮೀರಿ ಅನಧಿಕೃತ ವಸ್ತುಗಳನ್ನು ಒಳಗೆ ಕೊಂಡೊಯ್ಯಲು ಯತ್ನಿಸಿರುವ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಮರ್ ಪ್ರಾಂಜೆಯನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ತಪಾಸಣೆ  ಮತ್ತಷ್ಟು ಬಿಗಿ

ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಿಶೇಷ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ಮೊಬೈಲ್‌ನ್ನು ಕೈದಿಗಳಿಗೆ ನೀಡುವ ಉದ್ದೇಶದಿಂದ ತರಲು ಯತ್ನಿಸಿದ್ದನೆಂಬ ಅನುಮಾನ ವ್ಯಕ್ತವಾಗಿದೆ. ಘಟನೆಯ ಬಳಿಕ ಜೈಲು ಅಧಿಕಾರಿಗಳು ಸುರಕ್ಷತಾ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದೇ ಮೊದಲೇ ಸಿಬ್ಬಂದಿಯ ಅಕ್ರಮ ವರ್ತನೆ ಬೆಳಕಿಗೆ ಬರುತ್ತಿರುವುದು ಅಲ್ಲ. ಹಿಂದೆಯೂ ಮೊಬೈಲ್, ಡ್ರಗ್ಸ್, ನಗದು ಸೇರಿದಂತೆ ಅನಧಿಕೃತ ವಸ್ತುಗಳನ್ನು ಒಳಗೆ ಕೊಂಡೊಯ್ಯುವ ಯತ್ನಗಳು ಪತ್ತೆಯಾಗಿದ್ದವು. ಈ ತಾಜಾ ಘಟನೆ ಮತ್ತೆ ಜೈಲು ಸುರಕ್ಷತಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಎಬ್ಬಿಸಿದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?