
ಬೆಂಗಳೂರು (ನ.9): ಸೆಂಟ್ರಲ್ ಜೈಲು ಎಂದಾಕ್ಷಣ ಅಲ್ಲಿ ಖೈದಿಗಳು ಅತ್ಯಂತ ಘನಘೋರ ಶಿಕ್ಷೆ ಅನುಭವಿಸುತ್ತಿರುತ್ತಾರೆ ಅನ್ನೋದು ಇಲ್ಲಿಯವರೆಗೂ ಸಾಮಾನ್ಯ ಜನರ ಯೋಚನೆಯಾಗಿತ್ತು. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್‌ನ ವಿಡಿಯೋ ಹಾಗೂ ಫೋಟೋಗಳು ಹೊರಬಿದ್ದ ತಕ್ಷಣ ಅವರೂ ಕೂಡ ಅಲ್ಲಿ ನೆಮ್ಮದಿಯಾಗಿ ಸುಖವಾಗಿ ಬದುಕುವಂಥ ವಾತಾವರಣವನ್ನು ನಮ್ಮ ಕಾರಾಗೃಹ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ತಾವು ತಪ್ಪು ಮಾಡಿದ ಯಾವುದೇ ಪಾಪಪ್ರಜ್ಞೆ ಕಾಡಲು ನಮ್ಮ ಅಧಿಕಾರಿಗಳು ಬಿಟ್ಟಿಲ್ಲ. ಮೊಬೈಲು, ಟಿವಿ, ಮಾದಕವಸ್ತು ಸೇರಿದಂತೆ ಎಲ್ಲವನ್ನೂ ಬೇಕೆಂದಾಗ ತಂದುಕೊಡುವ ವ್ಯವಸ್ಥೆ ಅಲ್ಲಿದೆ.
ಈಗ ಪರಪ್ಪನ ಅಗ್ರಹಾರ ಬರೀ ಜೈಲಲ್ಲ ಬೆಂಗಳೂರಿನ ಪ್ರಸಿದ್ಧ ಬಾರ್ & ರೆಸ್ಟೋರೆಂಟ್ ಆಗಿಯೂ ಬದಲಾಗಿದೆ. ಜೈಲಿನ ರಾಜಾತಿಥ್ಯದ ವಿಡಿಯೋಗಳ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರೇಪಿಸ್ಟ್ ಉಮೇಶ್ ರೆಡ್ಡಿ, ತರುಣ್, ಶಂಕಿತ ಉಗ್ರ ಶಕೀಲ್ ವಿಡಿಯೋಗಳು ರಿಲೀಸ್ ಆಗಿದ್ದವು. ಈಗ ಮತ್ತಷ್ಟು ಹೊಸ ವಿಡಿಯೋಗಳು ಧೂಳೆಬ್ಬಿಸಿವೆ. ಜೈಲಿನಲ್ಲಿ ಮದ್ಯಸೇವಿಸಿ ಡ್ಯಾನ್ಸ್ ಮಾಡೋ ವಿಡಿಯೋಗಳು ವೈರಲ್ ಆಗಿದೆ. ಸದ್ಯ ವೈರಲ್ ಆಗಿರೋ ವಿಡಿಯೋಗಳು ಪರಪ್ಪನ ಅಗ್ರಹಾರ ಜೈಲಿನದ್ದಾ? ಅಥವಾ ಬೇರೆ ಜೈಲಿನದ್ದಾ ಅನ್ನೋ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಕಳೆದ ಎರಡು ಮೂರು ವರ್ಷಗಳ ಹಿಂದಿನ ವಿಡಿಯೋಗಳು ಈಗ ವೈರಲ್ ಆಗುತ್ತಿವೆ ಎನ್ನಲಾಗಿದೆ.
ರಾಜಾತಿಥ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಶನಿವಾರ ಸಂಜೆ ಜೈಲಿನ ಅಧಿಕಾರಿಗಳು ಬ್ಯಾರಕ್ ರೇಡ್ ಮಾಡಿದ್ದಾರೆ. ಈ ವೇಳೆ ಅವರಿಗೆ ಪುಡಿಗಾಸು ಕೂಡ ಸಿಕ್ಕಿಲ್ಲ. ಶನಿವಾರ ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಒಟ್ಟು ನೂರು ಮಂದಿ ಸಿಬ್ಬಂದಿಗಳು ಹುಡುಕಾಡಿದ್ದಾರೆ. ಆದರೆ ಏನೂ ಸಿಕ್ಕಿಲ್ಲ. ಜೈಲಧಿಕಾರಿಗಳ ರೇಡ್ ಮಾಹಿತಿ ಕೆಲ ಸಿಬ್ಬಂದಿಯಿಂದ ಲೀಕ್ ಆಗಿರುವ ಸಾಧ್ಯತೆ ಇದೆ. ಈ ಹಿನ್ನಲೆ ಎಲ್ಲಾ ಬ್ಯಾರಕ್ ತಡಕಾಡಿದ್ರೂ ಯಾವುದೇ ವಸ್ತು ಪತ್ತೆ ಆಗಿಲ್ಲ.
ಇನ್ನೊಂದೆಡೆ ವಿಡಿಯೋಗಳ ವೈರಲ್ ವಿಚಾರ ಹಾಗೂ ಮೊಬೈಲ್ ಬಳಕೆಯನ್ನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. 2023 ರಲ್ಲಿ ಚಿತ್ರೀಕರಣದ ಕೆಲ ವಿಡಿಯೋಗಳು ಈಗ ವೈರಲ್ ಆಗಿವೆ. ಅಂದು ಬ್ಯಾರಕ್ ಗಳ ಬಳಿ ಭದ್ರತೆಗಿದ್ದ ಸಿಬ್ಬಂದಿಗಳು, ಹಾಗೂ ಜೈಲರ್ ಪಟ್ಟಿ ಕೊಡಲು ಸೂಚನೆ ನೀಡಲಾಗಿದೆ.
ಜೈಲಿನ ಕೆಲ ಸಿಬ್ಬಂದಿಯಿಂದಲೇ ಪಿತೂರಿ ನಡೆದಿರೋ ಶಂಕೆ ವ್ಯಕ್ತವಾಗಿದೆ. ಕೆಲ ಜೈಲಿನ ಸಿಬ್ಬಂದಿಯ ಗುಂಪಿನಿಂದ ವಿಡಿಯೋಗಳು ವೈರಲ್ ಆಗಿವೆ. ಈ ಬಗ್ಗೆ ಡಿಐಜಿ ಆನಂದ್ ರೆಡ್ಡಿ ಮತ್ತು ಜೈಲಾಧಿಕಾರಿಗಳಿಂದ ಎಡಿಜಿಪಿ ದಯಾನಂದ್ ಅವರಿಗೆ ಮಾಹಿತಿ ನೀಡಲಾಗಿದೆ. ಆಂತರಿಕ ತನಿಖೆ ನಡೆಸಿ ಮೊಬೈಲ್ ಬಳಕೆ ಹಾಗೂ ವೈರಲ್ ಕುರಿತಾಗಿ ಆಂತರಿಕವಾಗಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ.
ಪರಪ್ಪನ ಅಗ್ರಹಾರದಲ್ಲಿನ ವಿಡಿಯೋಗಳು ವೈರಲ್ ಹಿನ್ನಲೆಯಲ್ಲಿ ಎನ್‌ಐಎ ಮತ್ತು ಡಿಆರ್‌ಐ ತನಿಖೆಗೆ ಎಂಟ್ರಿ ಕೊಡುತ್ತಾ ಅನ್ನೋ ಅನುಮಾನ ಬಂದಿದೆ. ಶಂಕಿತ ಉಗ್ರ ಮೊಬೈಲ್ ಬಳಕೆ ಸಂಬಂಧ ಎನ್‌ಐಎ ಅಧಿಕಾರಿ ಮಾಹಿತಿ ಪಡೆದಿದ್ದರೆ, ಇನ್ನೊಂದೆಡೆ ತರುಣ್ ರಾಜ್ ಬಗ್ಗೆ ಡಿಆರ್‌ಐ ಮಾಹಿತಿ ಪಡೆದುಕೊಂಡಿದೆ. ಜೈಲಿನಿಂದ ಇಬ್ಬರು ಮಾತನಾಡಿದ್ದು ಮಾತನಾಡಿದ್ದು ಯಾರ ಜೊತೆಗೆ ಅನ್ನೋ ಪ್ರಶ್ನೆ ಎದುರಾಗಿದೆ. ಇಬ್ಬರೂ ಸಂವಾದ ನಡೆಸಿರೋ ವ್ಯಕ್ತಿಗಳು ಯಾರು..ಯಾರ ಬಳಿ ಮಾತಾಡಿದ್ದಾರೆ? ಯಾವ ವಿಚಾರ ಚರ್ಚೆ ನಡೆಸಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡುವ ಸಾಧ್ಯತೆ ಇದೆ.