
ಬೆಂಗಳೂರು (ನ.08) ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣ ಇತ್ತೀಚೆಗೆ ತುರ್ತು ಭೂಸ್ಪರ್ಶ ಮಾಡಿದ, ಆತಂಕದಲ್ಲಿ ಲ್ಯಾಂಡಿಂಗ್ ಮಾಡಿದ ಉದಾಹರಣೆ ಹೆಚ್ಚಿದೆ. ಇದೀಗ ಬೆಂಗಳೂರಿ ಜೆಪಿ ನಗರದ ಸುತ್ತ ಮುತ್ತಲಿನ ಆಗಸದಲ್ಲಿ ಏರ್ ಇಂಡಿಯಾ ವಿಮಾನ ಬರೋಬ್ಬರಿ ಒಂದೂವರೆ ಗಂಟೆಯಿಂದ ಸುತ್ತಿದೆ. ಲ್ಯಾಂಡಿಂಗ್ ಸಮಸ್ಯೆಯಿಂದ ಬೆಂಗಳೂರು ಆಗಸದಲ್ಲೇ ಗಿರಕಿ ಹೊಡೆದಿದೆ ಎಂಬ ಮಾಹಿತಿ ರವಾನೆಯಾಗಿತ್ತು. ಇದೀಗ ವಿಮಾನ ಬೆಂಗಳೂರು ವಿಮಾನದಲ್ಲಿ ರೌಂಡ್ಸ್ ಮಾಡಿದ ಕಾರಣವನ್ನು ಏರ್ ಇಂಡಿಯಾ ಬಹಿರಂಗಪಡಿಸಿದೆ.
ಬೆಂಗಳೂರಿನ ಜೆಪಿ ನಗರದ ಸುತ್ತಮುತ್ತಲಿನ ಆಗಸದಲ್ಲಿ ಏರ್ ಇಂಡಿಯಾ ಸಂಸ್ಥೆಯ AXB558 B738 ವಿಮಾನ ಪದೇ ಪದೇ ರೌಂಡ್ಸ್ ಹೊಡೆಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮಧ್ಯಾಹ್ನ 3:40 ರಿಂದ 5 ಘಂಟೆ ವರೆಗೆ ಆಕಾಶದಲ್ಲಿಯೇ ವಿಮಾನ ಹಾರಾಟ ನಡೆಸಿತ್ತು. ಜೆಪಿ ನಗರ 3rd ಫೇಸ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಫೋಟೋ, ವಿಡಿಯೋ ಸೆರೆ ಹಿಡಿದಿದ್ದಾರೆ. ಪದೇ ಪದೆ ವಿಮಾನ ಸುತ್ತು ಹೊಡೆದಿದೆ. ಲ್ಯಾಂಡಿಂಗ್ ಸಮಸ್ಯೆಯಾಗಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿದ್ದಂತೆ ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ಫೇರಿ ರೈಡ್ ಮಾಡಲಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.
ಜೆಪಿ ನಗರದ ಸುತ್ತಲು ಗಿರಕಿ ಹೊಡೆಯಲು ಕಾರಣವೇನು ಅನ್ನೋದು ಬಹಿರಂಗವಾಗಿದೆ. ಈ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಕೇವಲ ವಿಮಾನ ಸಿಬ್ಬಂದಿಗಳು ಮಾತ್ರ ಇದ್ದರು. ಏರ್ ಇಂಡಿಯಾ ಸಂಸ್ಥೆಯಿಂದಲೇ ಫೇರಿ ರೈಡ್ ಮಾಡಲಾಗಿದೆ. ವಿಮಾನದ ನಿರ್ವಹಣೆ, ಪರಿಶೀಲನೆ ಹಾಗೂ ತಪಾಸಣೆ ದೃಷ್ಟಿಯಿಂದ ಫೇರಿ ರೈಡ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಫೇರಿ ರೈಡ್‌ಗಾಗಿ ಏರ್ ಇಂಡಿಯಾ ವಿಮಾನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಬಳಿಕ ತಾಂತ್ರಿಕ ತಪಾಸಣೆ ಸೇರಿದಂತೆ ಎಲ್ಲಾ ರೀತಿಯ ತಪಾಸಣೆ ಬಳಿ ವಿಮಾನ ಸಿಬ್ಬಂದಿಗಳು ಫೇರಿ ರೇಡ್ ಮಾಡಿದ್ದರು. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಿದ ಏರ್ ಇಂಡಿಯಾ ವಿಮಾನ ಬೆಂಗಳೂರಿನ ಆಗಮಸದಲ್ಲೇ ಒಂದೂವರೆ ಗಂಟೆ ಕಾಲ ಸುತ್ತಾಡಿತ್ತು. ಇದು ತಪಾಸಣೆಯ ಭಾಗ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.