ಹೈ ಟೆಕ್ ಸ್ವಾಮೀಜಿ ಎನ್ನುವ ಹೇಳಿಕೆ ಸಂಬಂಧ ಇದೀಗ ಪಂಚಮಸಾಲಿ ಪೀಠದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಾಜಿ ಶಾಸಕಗೆ ತಿರುಗೇಟು ನೀಡಿದ್ದಾರೆ.
ಹರಿಹರ (ಜ.26): ಪಂಚಮ ಸಾಲಿಗಳಿಗೆ 2ಎ ಮೀಸಲಾತಿಗಾಗಿ ಕೂಡಲ ಸಂಗಮದ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆಗೆ ಹರಿಹರ ಪೀಠ ಬೆಂಬಲ ಸೂಚಿಸಿದೆ. ಆದರೆ, ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಶ್ರೀಪೀಠ ಮತ್ತು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಪಂಚಮಸಾಲಿ ಪೀಠದ ಟ್ರಸ್ಟಿಚಂದ್ರಶೇಖರ್ ಪೂಜಾರ್ ಹೇಳಿದರು.
ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೀಠ ಮತ್ತು ರಾಜ್ಯ ಸಂಘದ ಬೆಂಬಲ ಸ್ವಾಮೀಜಿಗಳು ಕೈಗೊಂಡ ಪಾದಯಾತ್ರೆಗೆ, ಸಮುದಾಯದ ಒಳಿತಿಗೆ ಹೊರತು ಶಿವಶಂಕರನ ರಾಜಕೀಯ ಕೆಸರೆರಚಾಟಕ್ಕಲ್ಲ. ಹಗರಿಬೊಮ್ಮನಹಳ್ಳಿಯ ಬಹಿರಂಗ ಸಭೆಗೆ ಕರೆಯದೇ ಹೋಗಿ ಹರಿಹರ ಪೀಠದ ವಿರುದ್ಧ ಹಗುರುವಾಗಿ ಮಾತನಾಡಿದ್ದು ಖಂಡನೀಯ ಎಂದರು.
'ಹೋರಾಟಕ್ಕೆ ಹೆದರಿ ಸರ್ಕಾರದ ಬಜೆಟ್ ದಿನಾಂಕ ಮುಂದೂಡುವ ಸಾಧ್ಯತೆ' ..
ಪರ್ಯಾಯ ಪೀಠ ಮಾಡುತ್ತೇನೆ ಆ ತಾಕತ್ತು ಇದೆ ಎನ್ನುವ ಶಿವಶಂಕರ್, ನಿನ್ನ ಶಕ್ತಿ ಏನೆಂದು ಎಲ್ಲರಿಗೂ ಗೊತ್ತು. ಮೊದಲು ನಿನ್ನ ನೇತೃತ್ವದಲ್ಲಿ ಮುಚ್ಚಿರುವ ಸಕ್ಕರೆ ಕಂಪನಿಯನ್ನು ಆರಂಭ ಮಾಡಿ ತಾಕತ್ತನ್ನು ಪ್ರದರ್ಶನ ಮಾಡು ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಶಾಸಕ ಎಸ್.ಎಸ್.ಶಿವಶಂಕರ್, ಜಯಮೃತ್ಯುಂಜಯ ಸ್ವಾಮೀಜಿ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ಇನ್ನೊಬ್ಬ ಶ್ರೀಗಳು ಹೈಟೆಕ್ ಶ್ರೀಗಳು, ಅವರು ಫೇಸ್‌ಬುಕ್‌ನಲ್ಲಿ ಆ್ಯಕ್ಟಿವ್ ಆಗಿರುತ್ತಾರೆ ಎಂದು ಹರಿಹರದ ಪಂಚಮಸಾಲಿ ಶ್ರೀಗಳ ವಿರುದ್ಧ ಹರಿಹಾಯ್ದಿದ್ದರು.