ಮದುವೆ ವಾರ್ಷಿಕೋತ್ಸವದ ಗಿಫ್ಟ್ ಆಗಿ ಮಗು ಕೊಡ್ತೀನೆಂದು ಆಸ್ಪತ್ರೆಗೆ ಹೋದ ಗರ್ಭಿಣಿ ಹೆಂಡ್ತಿ ಆಂಬುಲೆನ್ಸ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವರದಿ- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.09): ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಮನೆಯವರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ ಗರ್ಭಿಣಿ ತನ್ನ ಗಂಡನಿಗೆ ನೀನು ಆಸ್ಪತ್ರೆಗೆ ಬಾ ಮದುವೆ ವಾರ್ಷಿಕೋತ್ಸವದ ಗಿಫ್ಟ್ ಆಗಿ ನಿನಗೆ ಮಗು ಕೊಡುತ್ತೇನೆ ಎಂದು ಹೇಳಿದ ಹೆಂಡ್ತಿ ದಾರಿ ಮಧ್ಯೆಯೇ ಆಂಬುಲೆನ್ಸ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮಗು ಕೂಡ ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ.
ಹೌದು, ಮದುವೆಯಾಗಿ ಗಂಡನೊಂದಿಗೆ ಸುಖ ಸಂಸಾರ ಮಾಡಿಕೊಂಡಿದ್ದ ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಯ ಖುಷಿಗೆ ಪಾರವೇ ಇರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಸರಿಯಾಗಿ ಡಿ.2ರಂದು ಮದುವೆಯಾಗಿದ್ದ ಗಂಡನಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಮಗುವನ್ನು ಗಿಫ್ಟ್ ಕೊಡ್ತೀನಿ ಎಂದು ಪತ್ನಿ ಹೇಳಿಕೊಂಡಿದ್ದಳು. ಇನ್ನು ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗುವ ಮುನ್ನವೂ ಗಂಡನಿಗೆ ಮಗು ಗಿಫ್ಟ್ ಕೊಡುವುದಾಗಿ ಹೇಳಿದ್ದಳು. ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗದ ಮಧ್ಯದಲ್ಲಿಯೇ ತಾನು ಹೋಗುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿ ಅದರಲ್ಲಿ ಮಗುವಿನ ಸಮೇತ ತಾಯಿಯೂ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಮೂಲಕ ಮಗುವನ್ನು ಗಿಫ್ಟ್ ನೀಡುವುದಾಗಿ ಹೇಳಿದ್ದ ಗಂಡನಿಗೆ, ವಿಧಿಯಾಟ ಹೆಂಡ್ತಿಯ ಸಾವನ್ನೇ ಗಿಫ್ಟ್ ಆಗಿ ಕೊಟ್ಟಿದೆ. ಮೃತ ಗರ್ಭಿಣಿಯನ್ನು ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (20) ಎಂದು ಹೇಳಲಾಗುತ್ತಿದೆ.
ವಿಜಯಪುರದಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನತೆ
ಇಂತಹ ಹೃದಯವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ. ಆಂಬುಲೆನ್ಸ್ ಅಪಘಾತದಲ್ಲಿ ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸಹ ಸಾವನ್ನಪ್ಪಿದೆ. ಹೆರಿಗೆಗೆಂದು ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಹೋಗುವಾಗಲೇ ದುರಂತ ನಡೆದಿದೆ. ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆಅಂಬ್ಯುಲೆನ್ಸ್ ನಲ್ಲಿದ್ದ ಗರ್ಭಿಣಿ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾಳೆ. ತಾಯಿ ಸಾವಿನಿಂದ ಆಕೆಯ ಹೊಟ್ಟೆಯಲ್ಲಿದ್ದ ಮಗು ಕೂಡ ಸಾವನ್ನಪ್ಪಿದೆ. ಕಳೆದ ಒಂದು ವರ್ಷದ ಹಿಂದೆ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಭಾಗ್ಯಶ್ರೀ ಹಾಗೂ ರಾವುತಪ್ಪ ಜೊತೆಗೆ ವಿವಾಹವಾಗಿತ್ತು. ಮೊದಲ ಹೆರಿಗೆಗಾಗಿ ತವರು ಮನೆಗೆ ಭಾಗ್ಯಶ್ರೀ ಬಂದಿದ್ದಳು. ಇಂದು ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ತವರು ಮನೆ ನಾವದಗಿಯಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಭಾಗ್ಯಶ್ರೀ ಬಂದಿದ್ದಳು. ಆದರೆ, ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾದ ಕಾರಣ ಜಿಲ್ಲಾಸ್ಪತ್ರೆಗೆ ರವಾನೆ ಮಾಡಬೇಕು ಎಂದು ತಾಳಿಕೋಟೆ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಹೀಗಾಗಿ, ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತವಾಗಿ ದುರಂತ ಸಂಭವಿಸಿದೆ.
ಡಬ್ಲ್ಯೂಡಬ್ಲ್ಯೂಇನಂತೆ ಕುರ್ಚಿಯಲ್ಲಿ ಹೊಡೆದಾಡಿಕೊಂಡ ಹಾಸನದ ಕಾಂಗ್ರೆಸ್ ಕಾರ್ಯಕರ್ತರು
ಮೃತ ಭಾಗ್ಯಶ್ರೀ ಪೋಷಕರಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆ ಬಳಿ ಪ್ರತಿಭಟನೆ ಮಾಡಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಮೊದಲ ಹೆರಿಗೆಗೆ ಬಂದ ಕೂಡಲೇ ಆಕೆಯ ಪರಿಸ್ಥಿತಿ ನೋಡಿ ಮೊದಲೇ ಹೇಳಿದ್ದರೆ ನಿಧಾನವಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಆದರೆ, ಹೆರಿಗೆ ನೋವು ತೀವ್ರ ಹೆಚ್ಚಾಗಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವವರೆಗೂ ನಿರ್ಲಕ್ಷ್ಯ ತೋರಿದ್ದು, ನಂತರ ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ ಎಂದು ಮೃತಳ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅಂಬ್ಯುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ್ ಹಾಗೂ ಈ ಪೈಕಿ ಒರ್ವ ಸಹಾಯಕನಿಗೆ ಗಾಯವಾಗಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.