ಸ್ವತಃ ಅನಕ್ಷರಸ್ಥರಾಗಿದ್ದರೂ ಶಾಲೆಯನ್ನೇ ಕಟ್ಟಿ ಕುಗ್ರಾಮದ ತನ್ನೂರ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದ, ಬೀದಿಗಲಲ್ಲಿ ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತನ ಕಥೆ ಗೊತ್ತಾ..? ಕರಾವಳಿಯ ಹರೇಕಳ ಹಾಜಬ್ಬ ಇದೀಗ ದೇಶದ ಉನ್ನತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂಗಳೂರು(ಜ.26): ಮಂಗಳೂರಿನ ಬೀದಿಗಳಲ್ಲಿ ಬಿದಿರಿನ ಬುಟ್ಟಿಹೊತ್ತುಕೊಂಡು ಕಿತ್ತಳೆ ಹಣ್ಣು ಮಾರಾಟ ಮಾಡುತ್ತ ದುಡಿಮೆಯ ಎಲ್ಲ ಹಣವನ್ನೂ ಸುರಿದು ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪುರಸ್ಕೃತರಾಗಿದ್ದ ಹರೇಕಳ ಹಾಜಬ್ಬ ಇದೀಗ ದೇಶದ ಉನ್ನತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ವತಃ ಅನಕ್ಷರಸ್ಥರಾಗಿದ್ದರೂ ಶಾಲೆಯನ್ನೇ ಕಟ್ಟಿ ಕುಗ್ರಾಮದ ತನ್ನೂರ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿದ, ಎಷ್ಟೇ ಎಡರು ತೊಡರುಗಳು ಎದುರಾದರೂ ಛಲ ಬಿಡದೆ ತನ್ನ ಕನಸನ್ನು ನನಸು ಮಾಡಿ ತೋರಿಸಿದ ಧೀಮಂತ ಹರೇಕಳ ಹಾಜಬ್ಬ. ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಕನ್ನಡ ನಾಡು ಹೆಮ್ಮೆಪಡುವಂತಾಗಿದೆ. ಹಾಜಬ್ಬ ಅವರ ಭಗೀರಥ ಪ್ರಯತ್ನದಿಂದ 2000ದ ಜೂ.17ರಂದು ಹಾಜಬ್ಬದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗೇ ಬಿಟ್ಟಿತು. ಮೊದಲು 1ನೇ ತರಗತಿಯಿಂದ ಆರಂಭವಾದ ಶಾಲೆಯಲ್ಲೀಗ 10ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. 28 ಮಕ್ಕಳಿಂದ ಆರಂಭವಾದ ಶಾಲೆ ಇದೀಗ 164 ಮಕ್ಕಳಿಗೆ ವಿದ್ಯೆ ನೀಡುತ್ತಿದೆ.
undefined
ಶಾಲೆ ಕಟ್ಟಿದ ಬರಿಗೈ ಫಕೀರ:
ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ಎಂಬ ಕುಗ್ರಾಮದವರಾದ ಹಾಜಬ್ಬ, ಪ್ರತಿದಿನ ಮಂಗಳೂರಿಗೆ ಬಂದು ಬಿದಿರಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಕಿತ್ತಳೆ ವ್ಯಾಪಾರ ಮಾಡುತ್ತಿದ್ದರು. ಒಮ್ಮೆ ವಿದೇಶಿಗರೊಬ್ಬರು ಇಂಗ್ಲಿಷ್‌ನಲ್ಲಿ ಕಿತ್ತಲೆ ಬೆಲೆ ಕೇಳಿದ್ದು, ಅನಕ್ಷರಸ್ಥರಾಗಿದ್ದ ಹಾಜಬ್ಬ ಅವರಿಗೆ ಅದು ತಿಳಿಯದಾಯಿತು. ಈ ವೇಳೆ ಶಿಕ್ಷಣ ಮಹತ್ವ ಅರಿತ ಹಾಜಬ್ಬ, ಏನೇ ಆಗಲಿ, ತನ್ನೂರಿನಲ್ಲೇ ಶಾಲೆ ಕಟ್ಟಬೇಕು, ತನಗೊದಗಿದ ಕಷ್ಟಊರಿನ ಮಕ್ಕಳು ಎದುರಿಸಬಾರದು ಎಂದು ಶಾಲೆ ನಿರ್ಧರಿಸಿದರು. ಶಾಲೆ ಜಾಗಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆಯಲು ಆರಂಭಿಸಿದರು. ಕೊನೆಗೂ ಸರ್ಕಾರದಿಂದ ಸ್ವಲ್ಪ ಜಾಗ ಲಭಿಸಿ, ಹಾಜಬ್ಬರ ಕನಸು ಚಿಗುರೊಡೆಯಿತು.
ಬೆವರು ಹರಿಸಿ ಶಾಲೆ ಕಟ್ಟಿದರು:
ಹಣ್ಣು ಮಾರಿ ಮನೆಗೆ ಬಂದ ಬಳಿಕ ತಾನೇ ಸ್ವತಃ ಹಾರೆ ಗುದ್ದಲಿ ಹಿಡಿದು ಜಾಗ ಸಮತಟ್ಟು ಮಾಡುತ್ತಿದ್ದರು. ಕಿತ್ತಳೆ ಮಾರಾಟದಿಂದ ಬಂದ ಹಣವನ್ನು ಒಗ್ಗೂಡಿಸಿ ಶಾಲೆ ಕೆಲಸ ಆರಂಭಿಸಿಯೇ ಬಿಟ್ಟರು. ಹಾಜಬ್ಬರ ಬೆವರ ದುಡಿಮೆಯಿಂದ 1999ರಲ್ಲಿ ಪುಟ್ಟಶಾಲೆ ಕಟ್ಟಡ ತಲೆಎತ್ತಿತು.
ಸಾಧಕನ ಗುರುತಿಸಿದ ‘ಕನ್ನಡಪ್ರಭ’
2004ರಲ್ಲಿ ಹಾಜಬ್ಬರ ಸಾಧನೆ ಗುರಿತಿಸಿದ ‘ಕನ್ನಡಪ್ರಭ’ ವರ್ಷದ ವ್ಯಕ್ತಿ (ಮೊದಲ ವರ್ಷದ ಪ್ರಶಸ್ತಿ) ಪ್ರಶಸ್ತಿ ನೀಡಿ ಗೌರವಿಸಿತು. ಇದಾದ ಬಳಿಕ ಹಾಜಬ್ಬ ಇಡೀ ದೇಶಕ್ಕೆ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡರು. ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಧನಸಹಾಯ ಮಾಡಿದವು. ಆ ಹಣವನ್ನು ಸ್ವಂತಕ್ಕೆ ಎಂದೂ ಬಳಕೆ ಮಾಡದೆ ಹೊಸ ಕಟ್ಟಡಕ್ಕೆ ಕಲ್ಲು, ಜಲ್ಲಿ, ಮರಳು, ಸಿಮೆಂಟಿಗೆ ವಿನಿಯೋಗಿಸಿದರು. ನಂತರ ಪ್ರೌಢಶಾಲೆಯನ್ನೂ ನಿರ್ಮಿಸಿದ್ದಾರೆ.